ಎಲ್ಲ ಶಾಸಕರಿಗೂ ಸಮಾನವಾಗಿ ಅನುದಾನ ನೀಡುವಂತಹ ಕೆಲಸಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ
ಹರಪನಹಳ್ಳಿ: ಮುಂದಿನ ದಿನಗಳಲ್ಲಿ ರಾಜ್ಯದ 224 ವಿಧಾನಸಭೆ ಕ್ಷೇತ್ರದ ಎಲ್ಲ ಶಾಸಕರಿಗೂ ಸಮಾನವಾಗಿ ಅನುದಾನ ನೀಡುವಂತಹ ಕೆಲಸಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ತಿಳಿಸಿದ್ದಾರೆ.
ಅವರು ನಗರದ ಹಳೆ ಬಸ್ ನಿಲ್ದಾಣದಲ್ಲಿ ಸೋಮವಾರ ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ನಗರಕ್ಕೆ ಸುಧಾರಿತ ಸಗಟು ನೀರು ಸರಬರಾಜು ಕಲ್ಪಿಸುವ ಯೋಜನೆಯ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಸಮಾರಂಭವನ್ನು ದೀಪ ಹಚ್ಚುವ ಮೂಲಕ ಉದ್ಘಾಟಿಸಿ ಮಾತನಾಡಿದರು.ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಅಭಿವೃದ್ದಿಯತ್ತ ಕೊಂಡೊಯ್ಯುತ್ತಿದೆ. ಅಂತಹ ಜನಪರ ಯೋಜನೆಗಳನ್ನು ಮಾಡಿರುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿಯವರು ಹೊಟ್ಟೆಕಿಚ್ಚಿಗಾಗಿ ವಿರೋಧ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಸರ್ಕಾರ ಈಗಾಗಲೇ ಐದು ಗ್ಯಾರಂಟಿ ಯೋಜನೆಗಳನ್ನು ಬಹಳ ನಿಷ್ಠೆಯಿಂದ ಅನುಷ್ಟಾನ ಮಾಡಿಕೊಂಡು ಬರುತ್ತಿದೆ. ನನ್ನ ಇಲಾಖೆಯಿಂದ ವಿಜಯನಗರ ಜಿಲ್ಲೆಗೆ ಸುಮಾರು ₹308 ಕೋಟಿ ಅಭಿವೃದ್ಧಿ ಯೋಜನೆಗೆ ಹಣವನ್ನು ಮಂಜೂರು ಮಾಡಿದ್ದೇನೆ. ಇನ್ನು ಹರಪನಹಳ್ಳಿ ತಾಲೂಕಿನ ಅಭಿವೃದ್ಧಿಗಾಗಿ ನಾನು ನನ್ನ ಇಲಾಖೆಯಿಂದ ಪ್ರಾಮಾಣಿಕವಾಗಿ ಹಣವನ್ನು ನೀಡುತ್ತೇನೆ ಎಂದು ಹೇಳಿದರು.ಹರಪನಹಳ್ಳಿ ವಿಧಾನಸಭೆ ಕ್ಷೇತ್ರದ ಶಾಸಕರು ಪಕ್ಷೇತರರರಾಗಿ ಗೆದ್ದವರು, ಆದರೆ ಜನರ ಪ್ರೀತಿಗಳಿಸಿ ಪಕ್ಷೇತರರಾಗಿ ಶಾಸಕರಾಗುವುದು ಇತಿಹಾಸ ಸೃಷ್ಟಿಸಿದಂತೆ. ಅದೇ ರೀತಿ ಮುಂಬರುವ 2028ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಎಂ.ಪಿ. ರವೀಂದ್ರ ಅವರ ಸಹೋದರಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಅವರನ್ನು ಶಾಸಕರನ್ನಾಗಿ ಮಾಡಿದರೆ ನಿಮ್ಮ ಕ್ಷೇತ್ರ ಮತ್ತಷ್ಟು ಅಭಿವೃದ್ಧಿಯಾಗುವುದಕ್ಕೆ ಸಾಧ್ಯ. ಇಂತಹ ಶಾಸಕರನ್ನು ಪಡೆದ ತಾಲೂಕಿನ ಜನರು ಧನ್ಯರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಅಧ್ಯಕ್ಷತೆ ವಹಿಸಿ ಮಾತಮಾಡಿ, ಹರಪನಹಳ್ಳಿ ಪಟ್ಟಣದಲ್ಲಿ ಅವೈಜ್ಞಾನಿಕ ವೃತ್ತಗಳಿವೆ. ಅವೈಜ್ಞಾನಿಕ ವೃತ್ತಗಳನ್ನು ತೆರವು ಮಾಡಿ ವೈಜ್ಞಾನಿಕ ವೃತ್ತಗಳನ್ನು ಮಾಡಬೇಕಾಗಿದೆ. ಹರಪನಹಳ್ಳಿ ಪಟ್ಟಣದ ಬೃಹತ್ ಆಕಾರದಲ್ಲಿರುವ ಅಯ್ಯನಕೆರೆಗೆ ಪಟ್ಟಣದ ಎಲ್ಲ ಗಡಸು ನೀರು ಈ ಕೆರೆಗೆ ಬಂದು ನೀರು ನಿಲ್ಲುತ್ತದೆ. ಅಯ್ಯನಕೆರೆಯನ್ನು ಉನ್ನತೀಕರಿಸಲು ಬಹಳಷ್ಟು ವೆಚ್ಚ ಬೇಕಾಗುತ್ತದೆ. ಸಚಿವರು ತಮ್ಮ ಇಲಾಖೆಯಿಂದ ಸಾಕಷ್ಟು ಅನುದಾನ ನೀಡಿದ್ದೀರಿ. ಈ ಕೇತ್ರದ ಅಭಿವೃದ್ಧಿಗೆ ಮತ್ತಷ್ಟು ಹಣದ ಅವಶ್ಯಕತೆಯಿದೆ. ಮುಂಬರುವ ಬಜೆಟ್‌ನಲ್ಲಿ ಹರಪನಹಳ್ಳಿ ತಾಲೂಕಿಗೆ ವಿಶೇಷ ಅನುದಾನ ನೀಡಲು ಮುಖ್ಯಮಂತ್ರಿ ಜತೆ ಚರ್ಚಿಸಿ, ಮಾತನಾಡುತ್ತೇನೆ ಎಂದು ಸಚಿವರಿಗೆ ಹೇಳಿದರು.ತೆಗ್ಗಿನಮಠ ಸಂಸ್ಥಾನದ ಪೀಠಾಧ್ಯಕ್ಷ ವರಸದ್ಯೋಜಾತ ಶಿವಾಚಾಚಾರ್ಯರು ಮಾತನಾಡಿ, ಹರಪನಹಳ್ಳಿ ವಿಧಾನಸಭೆ ಕ್ಷೇತ್ರ ಶೈಕ್ಷಣಿಕ, ರಾಜಕೀಯ ಮತ್ತು ಸಾಮಾಜಿಕವಾಗಿ ಗುರುತಿಸಿಕೊಂಡಿರುವ ಏಕೈಕ ಕ್ಷೇತ್ರ ಹರಪನಹಳ್ಳಿ. ತಾಲೂಕಿನ ಬಡ ವಿದ್ಯಾರ್ಥಿಗಳ ಆಶಾಕಿರಣ ದಿ.ಎಂ.ಪಿ. ರವೀಂದ್ರ. 371ಜೆ ತಂದು ಕೊಟ್ಟ ಕೀರ್ತಿ ಎಂ.ಪಿ. ರವೀಂದ್ರ ಅವರಿಗೆ ಸಲ್ಲುತ್ತದೆ ಎಂದರು.
ಈ ಸಂದರ್ಭಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ತಹಶೀಲ್ದಾರ್ ಗಿರೀಶ್ ಬಾಬು, ಡಿವೈಎಸ್ಪಿ ಸಂತೋಷ್ ಚಹ್ವಾಣ್, ಬಿಡಿಸಿಸಿ ಉಪಾಧ್ಯಕ್ಷ ದ್ವಾರಕೇಶ, ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಬೇರಗೌಡ್ರು, ಅರಸಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಮ್ಮತಹಳ್ಳಿ ಮಂಜುನಾಥ್, ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ಉದಯಶಂಕರ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಲಾಟಿ ದಾದಾಪೀರ್, ಎಇಇ ಮಂಜುನಾಥ್, ಜಯಕುಮಾರ್, ಮತ್ತೂರು ಬಸವರಾಜ್, ವಕೀಲರಾದ ಟಿ.ವೆಂಕಟೇಶ್, ಅಬ್ದುಲ್ ರಹಮಾನ್, ಗೌತಮ್ ಪ್ರಭು, ಆರ್.ಶಶಿಕುಮಾರ್ ನಾಯ್ಕ, ಗುಡಿ ನಾಗರಾಜ್, ಎಲ್. ಮಂಜ್ಯಾನಾಯ್ಕ, ಎನ್.ಶಂಕರ್ ಇದ್ದರು.