ಸಮಾನತೆ ಎಲ್ಲ ಧರ್ಮದ ಆಶಯ: ರಾಯರಡ್ಡಿ

| Published : Sep 20 2025, 01:01 AM IST

ಸಾರಾಂಶ

ಧರ್ಮಗಳ ಹೆಸರಿನಲ್ಲಿ ಜಾತಿಗಳ ಮೇಲೆ ಮಾನವನನ್ನು ಬೇರೆ ಬೇರೆ ಮಾಡಬಾರದು. ಮಾನವೀಯ, ಸಮಾನತೆ ಧರ್ಮವನ್ನು ಪಾಲಿಸಬೇಕು.

ಕುಕನೂರು:

ಸಮಾನತೆ ಎಲ್ಲ ಧರ್ಮದ ಆಶಯವಾಗಿದೆ. ಮಾನವೀಯ ಧರ್ಮ ಒಂದೇ ಶಾಶ್ವತ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ತಾಲೂಕಿನ ರಾಜೂರು ಗ್ರಾಮದಲ್ಲಿ ಲಿಂ. ಪಂಚಾಕ್ಷರ ಶ್ರೀಗಳ 5ನೇ ಪುಣ್ಯಸ್ಮರಣೋತ್ಸವ ಹಾಗೂ ಪಂಚಾಕ್ಷರ ಶ್ರೀಗಳ ಶಿಲಾ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಧರ್ಮಗಳ ಹೆಸರಿನಲ್ಲಿ ಜಾತಿಗಳ ಮೇಲೆ ಮಾನವನನ್ನು ಬೇರೆ ಬೇರೆ ಮಾಡಬಾರದು. ಮಾನವೀಯ, ಸಮಾನತೆ ಧರ್ಮವನ್ನು ಪಾಲಿಸಬೇಕು. ಮಾನವನಲ್ಲಿ ಭೇದ-ಭಾವ ಇರಬಾರದು ಎಂದರು.

ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಿಗೆ ಸನ್ಮಾನಿಸುತ್ತಿರುವುದು ಹೆಮ್ಮೆ ಸಂಗತಿ. ಶ್ರಮವಹಿಸಿ ರೈತ ದುಡಿದರೆ ಮಾತ್ರ ಎಲ್ಲರಿಗೂ ಆಹಾರ ಸಿಗುತ್ತದೆ. ರೈತರಿಗೆ ಸದಾ ಗೌರವಿಸುವ ಕಾರ್ಯ ಆಗಬೇಕು ಎಂದರು.

ಬೆಳಗ್ಗೆ ದೇವಸ್ಥಾನದಲ್ಲಿ ಶಿಲಾ ಮಂಟಪದ ಕಳಾಸಾರೋಹಣ ಜರುಗಿತು. ಕಳಸಾರೋಹಣ ನೆರವೇರಿಸಿ ಆಶೀರ್ವಚನ ನೀಡಿದ ಉಜ್ಜಯಿನಿ ಪೀಠದ ಶ್ರೀಸಿದ್ಧಲಿಂಗ ಸ್ವಾಮೀಜಿ, ಲಿಂ. ಪಂಚಾಕ್ಷರ ಶಿವಾಚಾರ್ಯರು, ಗದಗಿನ ವೀರೇಶ್ವರ ಪುಣ್ಯಾಶ್ರಮದ ಪುಟ್ಟರಾಜ ಗವಾಯಿಗಳ ಕ್ರೀಯಾ ಮೂರ್ತಿಗಳಾಗಿದ್ದರು. ಪುಟ್ಟರಾಜ ಗವಾಯಿಗಳ ಹೃದಯದಲ್ಲಿ ಪಂಚಾಕ್ಷರ ಶಿವಾಚಾರ್ಯರು ಗುರುಗಳ ಸ್ಥಾನದಲ್ಲಿದ್ದರು. ಪಂಚಾಕ್ಷರ ಶ್ರೀಗಳ ಪಾದಪೂಜೆಯನ್ನು ನೆರವೇರಿಸುತ್ತಿದ್ದರು. ಅಷ್ಟೋಂದು ಲಿಂಗಾಪೂಜಾ ನಿಷ್ಠರು ಪಂಚಾಕ್ಷರ ಶ್ರೀಗಳಾಗಿದ್ದರು ಎಂದು ಹೇಳಿದರು.

ಈ ವೇಳೆ ಕೃಷಿ ಕ್ಷೇತ್ರದಲ್ಲಿ ಸಾಧನಗೈದ 60 ರೈತರಿಗೆ ಪಂಚಾಕ್ಷರ ಕೃಷಿ ಋಷಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಭಿನವ ಪಂಚಾಕ್ಷರ ಶಿವಾಚಾರ್ಯರು ಸೇರಿದಂತೆ ವಿವಿಧ ಶ್ರೀಗಳು, ಭಕ್ತರು ಇದ್ದರು.