ಸಾರಾಂಶ
ಹುಬ್ಬಳ್ಳಿ: ಬಾಕಿ ವೇತನ ಮತ್ತು ಪರಿಷ್ಕೃತ ವೇತನ ಜಾರಿಗೆ ಒತ್ತಾಯಿಸಿ ಆಗಸ್ಟ್ 5 ರಂದು ಸಾರಿಗೆ ನೌಕರರು ಹಮ್ಮಿಕೊಂಡಿರುವ ಅನಿರ್ದಿಷ್ಟ ಮುಷ್ಕರಕ್ಕೆ ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ ಬೆಂಬಲ ನೀಡಲಿದ್ದು, ಮುಷ್ಕರ ಹಿನ್ನೆಲೆಯಲ್ಲಿ ಸರ್ಕಾರ ಜತೆ ಸೌಹಾರ್ದಯುತ ಮಾತುಕತೆಗೆ ಸಿದ್ಧವಿದೆ ಎಂದು ಮಹಾಮಂಡಳಿ ಅಧ್ಯಕ್ಷ ಡಾ. ಕೆ.ಎಸ್. ಶರ್ಮಾ ಸ್ಪಷ್ಪಪಡಿಸಿದ್ದಾರೆ.
ಎಸ್ಮಾ ಕಾಯ್ದೆಗೆ ಸಾರಿಗೆ ನೌಕರರು ಹೆದರುವ ಮಾತಿಲ್ಲ. ಮುಷ್ಕರ ನಡೆದೇ ನಡೆಯುತ್ತದೆ ಎಂದು ಇದೇ ವೇಳೆ ಎಚ್ಚರಿಕೆ ನೀಡಿದರು.ನಗರದ ಶರ್ಮಾ ಭವನದಲ್ಲಿ ಮುಷ್ಕರ ಹಿನ್ನೆಲೆಯಲ್ಲಿ ಬುಧವಾರ ಸೇರಿದ್ದ ಮಹಾಮಂಡಳದ ನಾನಾ ಜಿಲ್ಲೆಗಳ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಸರ್ಕಾರವು ಸಂಘಟನೆ ಜತೆ ಮಾತುಕತೆ ನಡೆಸಿ ನೌಕರರ ಬೇಡಿಕೆಗೆ ಸ್ಪಂದಿಸಬೇಕು. ಇಲ್ಲದಿದ್ದಲ್ಲಿ ಮುಷ್ಕರದಿಂದ ಆಗುವ ಎಲ್ಲ ಪರಿಣಾಮಗಳಿಗೆ ಸರ್ಕಾರವೇ ಜವಾಬ್ದಾರಿಯಾಗಿರುತ್ತದೆ ಎಂದು ಎಚ್ಚರಿಸಿದ್ದಾರೆ.ಜು. 4ರಂದು ಸಂಘಟನೆ ಜತೆ ನಡೆದ ಸಭೆಯಲ್ಲಿ ಸರ್ಕಾರ, 38 ತಿಂಗಳ ಬಾಕಿ ವೇತನ ಬಿಡುಗಡೆ ಮಾಡಲು ಬರುವುದಿಲ್ಲ ಎಂದು ಯು ಟರ್ನ್ ಹೊಡೆದಿದೆ. 1958ರಿಂದ ಇಲ್ಲಿಯ ವರೆಗೆ 18 ಬಾರಿ ವೇತನ ಪರಿಷ್ಕರಣೆಯಾಗಿದ್ದು, ಪ್ರತಿ ಸಲವೂ ಸರ್ಕಾರ ನಿರಾಕರಿಸುತ್ತಲೇ ಬಂದಿದೆ. ಬಾಕಿ ವೇತನ ಪಾವತಿ ಬಗ್ಗೆ ವಿಮರ್ಶೆ ಮಾಡಿ ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸ ಮೂರ್ತಿ ಏಕ ಸದಸ್ಯ ಸಮಿತಿ ವರದಿ ಸಲ್ಲಿಸಿದೆ. ವೇತನ ಬಾಕಿಗೆ ಅರ್ಹವಿಲ್ಲವೆಂದರೆ ಈ ವಿಷಯವನ್ನು ನಿರ್ಧರಿಸಲು ಏಕ ಸದಸ್ಯ ಸಮಿತಿಗೆ ಏಕೆ ಸೂಚನೆ ನೀಡಬೇಕಿತ್ತು ಎಂದು ಪ್ರಶ್ನಿಸಿದರು.
ವೇತನ ಪರಿಷ್ಕರಿಸಿ 2023 ಮಾರ್ಚ್ ತಿಂಗಳಲ್ಲೇ ಆದೇಶ ಹೊರಡಿಸಲಾಗಿದೆ. ಅದಕ್ಕೂ ಮುನ್ನ 1-1-2020 ರಿಂದ 28-02-2023ರ ವರೆಗಿನ 38 ತಿಂಗಳ ಪರಿಷ್ಕೃತ ವೇತನ ಬಾಕಿ ಪಾವತಿಯಾಗದೇ ನನೆಗುದಿಗೆ ಬಿದಿದ್ದು, ಸರ್ಕಾರ ಶ್ರೀನಿವಾಸ ಮೂರ್ತಿ ಸಮಿತಿ ವರದಿ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.ಎಸ್ಮಾ ಜಾರಿಗೆ ಖಂಡನೆ: ಆಗಸ್ಟ್ 5ರ ಮುಷ್ಕರದ ಹಿನ್ನೆಲೆಯಲ್ಲಿ ಸರ್ಕಾರ ಎಸ್ಮಾ ಕಾಯಿದೆ ಜಾರಿಗೊಳಿಸಿರುವುದನ್ನು ಮಹಾಮಂಡಳಿ ಉಗ್ರವಾಗಿ ಖಂಡಿಸುತ್ತದೆ. ಎಸ್ಮಾಕ್ಕೆ ಜಗ್ಗದೇ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಬೇರೆ ಇಲಾಖೆಗಳಿಗೆ ಹೋಲಿಸಿದರೆ ಸಾರಿಗೆ ನಿಗಮದ ನೌಕರರು ಅತ್ಯಂತ ಕಡಿಮೆ ವೇತನದಲ್ಲಿ ದುಡಿಯುತ್ತಿದ್ದಾರೆ. ಸರ್ಕಾರಗಳು ನಿಗಮವನ್ನು ನಿರ್ಲಕ್ಷಿಸುತ್ತಲೇ ಬಂದಿದ್ದು, ನೌಕರರು ಹೀನಾಯ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳುತ್ತಿಲ್ಲ. ಹೀಗಾಗಿ, ಕಾನೂನು ಪ್ರಕಾರ ಸರ್ಕಾರಕ್ಕೆ ನೋಟಿಸ್ ನೀಡಿದ್ದೇವೆ. ಎಸ್ಮಾ ಎಂದು ನೌಕರರನ್ನು ಹೆದರಿಸುವ ಬದಲು ಮಾತುಕತೆ ಮೂಲಕ ಬಗೆಹರಿಸಬಹುದಲ್ಲ ಎಂದರು.ಸಭೆಯಲ್ಲಿ ಮಹಾಮಂಡಳದ ಪ್ರಧಾನ ಕಾರ್ಯದರ್ಶಿ ಬಿ. ಜಯದೇವ ಅರಸ, ಖಜಾಂಚಿ ಎನ್.ಆರ್. ದೇವರಾಜ ಅರಸ ಸೇರಿದಂತೆ ರಾಜ್ಯ ವಿವಿಧ ಜಿಲ್ಲೆಗಳ ಅಧ್ಯಕ್ಷರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.