ಬೀದಿಬದಿ ವ್ಯಾಪಾರಿಗಳ ಅಭಿವೃದ್ಧಿ ನಿಗಮ ಸ್ಥಾಪಿಸಿ
ಕನ್ನಡಪ್ರಭ ವಾರ್ತೆ ತುಮಕೂರುರಾಜ್ಯ ಸರ್ಕಾರ ಬೀದಿಬದಿ ವ್ಯಾಪಾರಿಗಳ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ಇಂತಹ ಸಣ್ಣ ವ್ಯಾಪಾರಿಗಳ ವ್ಯಾಪಾರ ವಹಿವಾಟಿಗೆ ಆರ್ಥಿಕ ಸಾಲ ಸೌಲಭ್ಯ ನೀಡಬೇಕು. ಬೀದಿ ವ್ಯಾಪಾರಿಗಳ ಬದುಕಿನ ಭದ್ರತೆಗೆ ವಿವಿಧ ಯೋಜನೆಗಳನ್ನು ರೂಪಿಸಿ ನೆರವಾಗಬೇಕು ಎಂದು ಸ್ಫೂರ್ತಿ ಡೆವಲಪರ್ಸ್ ಮಾಲೀಕ, ಬಿಜೆಪಿ ಮುಖಂಡ ಎಸ್.ಪಿ.ಚಿದಾನಂದ್ ಒತ್ತಾಯಿಸಿದರು. ನಗರದ ಕೆ.ಆರ್.ಬಡಾವಣೆಯ ಶ್ರಮಜೀವಿ ಬೀದಿಬದಿ ವ್ಯಾಪಾರಿಗಳ ಸಂಘದ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್‌ಗೆ ನಮನ ಹಾಗೂ ಸಂಘದ ರಾಜ್ಯಾಧ್ಯಕ್ಷ, ಕನ್ನಡಪರ ಹಾಗೂ ಇತರೆ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎಂ.ಗೋಪಿಯವರ ಹುಟ್ಟುಹಬ್ಬದ ಅಂಗವಾಗಿ ಸಾರ್ವಜನಿಕರಿಗೆ ವಿವಿಧ ಸವಲತ್ತು ವಿತರಿಸಿ ಮಾತನಾಡಿದರು.ಸಂಘಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವವರು ಸಾರ್ವಜನಿಕರ ಹಿತಕಾಯುವ ಕಾರ್ಯದಲ್ಲಿ ಹೆಚ್ಚು ಕಾಳಜಿ ವಹಿಸಬೇಕು. ಅವರ ಧ್ವನಿಯಾಗಿ ನಿಲ್ಲಬೇಕು. ಶ್ರಮಜೀವಿ ಬೀದಿ ವ್ಯಾಪಾರಿಗಳ ಸಂಘದ ಆಧ್ಯಕ್ಷರಾಗಿರುವ ಎಂ.ಗೋಪಿ ಕಷ್ಟಜೀವಿ ವ್ಯಾಪಾರಿಗಳಿಗೆ ಶಕ್ತಿಯಾಗಿ ಬೆಂಬಲಕ್ಕಿದ್ದಾರೆ. ಅವರ ಕಷ್ಟಸುಖಗಳಿಗೆ ಸ್ಪಂದಿಸಿ ನೆರವಾಗುತ್ತಿರುವುದು ಶ್ಲಾಘನೀಯ ಎಂದರು. ಆರ್ಥಿಕವಾಗಿ ಶಕ್ತಿ ಇಲ್ಲದವರು ಬದುಕಿಗಾಗಿ ಬೀದಿಬದಿಯಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡುತ್ತಾ ಬದುಕು ನಿರ್ವಹಣೆ ಮಾಡಿಕೊಂಡಿದ್ದಾರೆ. ಇವರ ವ್ಯವಹಾರಗಳಿಗೆ ಬ್ಯಾಂಕುಗಳು ಹಣ ಸಾಲ ಕೊಡಲು ಹಿಂಜರಿಯುತ್ತವೆ. ಹೀಗಾಗಿ ಅನಿವಾರ್ಯವಾಗಿ ಇವರು ಹೆಚ್ಚು ಬಡ್ಡಿದರದಲ್ಲಿ ಹಣ ಸಾಲ ತಂದು ನಿತ್ಯದ ವ್ಯವಹಾರ ಮಾಡಬೇಕಾದ ಸ್ಥಿತಿ ಇದೆ. ದುಡಿಮೆಯ ಲಾಭದಲ್ಲಿ ಹೆಚ್ಚಿನ ಹಣವನ್ನು ಸಾಲದ ಬಡ್ಡಿ ಕಟ್ಟಬೇಕಾಗುತ್ತದೆ. ಉಳಿದ ಅಲ್ಪಸ್ವಲ್ಪದರಲ್ಲಿ ಜೀವನ ನಿರ್ವಗಣೆ ಮಾಡಬೇಕಾಗಿದ್ದು, ಬದುಕು ಸುಧಾರಣೆ ಕಷ್ಟವಾಗಿದೆ. ಇಂತಹ ಬೀದಿ ವ್ಯಾಪಾರಿಗಳಿಗೆ ಸರ್ಕಾರ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದರೆ ಸಹಾಯವಾಗುತ್ತದೆ ಎಂದು ಹೇಳಿದರು.ಸಂಘದ ರಾಜ್ಯಾಧ್ಯಕ್ಷ ಎಂ.ಗೋಪಿ ಮಾತನಾಡಿ, ಸಂಘದ ಸದಸ್ಯರನ್ನು ಕುಟುಂಬದ ಸದಸ್ಯರಂತೇ ಭಾವಿಸಿ ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಾ ಎಲ್ಲಾರೀತಿಯಲ್ಲೂ ನೆರವಾಗುತ್ತಾ ಬಂದಿದ್ದೇನೆ. ಇದೇ ಭಾವನೆಯಿಂದ ಸಂಘದ ಸದಸ್ಯರೊಂದಿಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದೇನೆ. ಎಲ್ಲರೂ ಸಂಘಟಿತರಾಗಿ ಸಂಘವನ್ನು ಸದೃಢವಾಗಿ ಬೆಳೆಸಿದರೆ ಪರಸ್ಪರ ಸಹಕಾರದಿಂದ ಎಲ್ಲರೂ ಬೆಳೆಯಲು ಸಾದ್ಯವಾಗುತ್ತದೆ ಎಂದು ಹೇಳಿದರು. ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಮಾತನಾಡಿ, ಸಂಘಟನೆಯನ್ನು ಬಲವರ್ಧನೆಗೊಳಿಸಿದರೆ ಮುಂದಿನ ಹೋರಾಟಗಳಿಗೆ ದೊಡ್ಡ ಬಲ ಬರುತ್ತದೆ. ಸರ್ಕಾರದ ಸೌಲಭ್ಯ ಪಡೆಯಲು ಹಾಗೂ ಅನ್ಯಾಯವನ್ನು ತಡೆಯಲು ಹೋರಾಟ ಮಾಡಬೇಕಾಗುತ್ತದೆ ಎಂದರು.
ಸಮಾಜ ಸೇವಕ ನಟರಾಜಶೆಟ್ಟಿ, ಸಂಘದ ರಾಜ್ಯ ಗೌರವ ಕಾರ್ಯದರ್ಶಿ ಶಿವಣ್ಣ, ಉಪಾಧ್ಯಕ್ಷರಾದ ಶಬ್ಬೀರ್ ಅಹ್ಮದ್, ಆದಿಲ್ ಪಾಷಾ, ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಜಿ.ರಮ್ಯಶ್ರೀ, ಜಿಲ್ಲಾಧ್ಯಕ್ಷ ಎಸ್.ವಿ.ನಾಗರಾಜು, ಮುಖಂಡರಾದ ಸಿದ್ಧು ಗೋಬಿ, ಕೃಷ್ಣ, ಸವಿತಾ, ಅನಿತಾ, ಭವ್ಯ, ಆನಂದ್ ಮೊದಲಾದವರು ಭಾಗವಹಿಸಿದ್ದರು. ಈ ವೇಳೆ ಮಹಿಳೆಯರಿಗೆ ಸೀರೆ, ಪುರುಷರಿಗೆ ಷರ್ಟ್, ಪ್ಯಾಂಟ್ ವಿತರಿಸಲಾಯಿತು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.