ಸಾರಾಂಶ
ಚಾಮರಾಜನಗರ: ಜಿಲ್ಲೆಯಿಂದ ಹೊರರಾಜ್ಯಗಳ ಮಾರುಕಟ್ಟೆಗೆ ಎಷ್ಟು ಪ್ರಮಾಣದಲ್ಲಿ ಎಳನೀರು ಮತ್ತು ಬಾಳೆಕಾಯಿ ರವಾನೆಯಾಗುತ್ತದೆ ಎಂಬ ಮಾಹಿತಿ ಸಂಗ್ರಹ ಮಾಡಲು ಹಾಗೂ ಸೆಸ್ ವಂಚನೆ ತಡೆಗೆ ಜಿಲ್ಲೆಗೆ ವಿಚಕ್ಷಣ ದಳ ಕಳುಹಿಸಿ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಚಾಮರಾಜನಗರ ಎಪಿಎಂಸಿ ಮತ್ತು ಸಂತೆಮರಹಳ್ಳಿ ಉಪ ಮಾರುಕಟ್ಟೆ ಪ್ರಾಂಗಣಕ್ಕೆ ಭೇಟಿ ನೀಡಿ, ಎಪಿಎಂಸಿ ಸದಸ್ಯರು, ರೈತ ಸಂಘದ ಮುಖಂಡರು ಹಾಗೂ ವರ್ತಕರ ಅಹವಾಲು ಸ್ವೀಕರಿಸಿದ ಸಚಿವರು, ಮಾರ್ಚ್ ತಿಂಗಳಲ್ಲೇ ಎಪಿಎಂಸಿ ಕಾಯ್ದೆ ಮರುಸ್ಥಾಪನೆಯಾಗಿದೆ. ಆದರೆ ಚಾಮರಾಜನಗರ ಎಪಿಎಂಸಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಸಾಧಿಸಿಲ್ಲ. ಮಾರುಕಟ್ಟೆಗೆ ಕೃಷಿ ಉತ್ಪನ್ನಗಳು ಬರುತ್ತಿಲ್ಲ. ಕಾಯ್ದೆ ಮರುಸ್ಥಾಪನೆ ಉದ್ದೇಶ ಅರ್ಥ ಮಾಡಿಕೊಂಡು ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.ಜಿಲ್ಲೆಯಿಂದ ಎಳನೀರು ಮತ್ತು ಬಾಳೆಕಾಯಿ ಗರಿಷ್ಠ ಪ್ರಮಾಣದಲ್ಲಿ ಹೊರರಾಜ್ಯಗಳ ಮಾರುಕಟ್ಟೆಗೆ ಹೋಗುತ್ತಿದೆ ಎಂದು ಸದಸ್ಯರು ಗಮನಕ್ಕೆ ತಂದಿದ್ದಾರೆ. ರೈತರ ಗರಿಷ್ಠ ಪ್ರಮಾಣದಲ್ಲಿ ತಮ್ಮ ಉತ್ಪನ್ನಗಳನ್ನು ಎಪಿಎಂಸಿ ಆವರಣದಲ್ಲೇ ಮಾರಾಟ ಮಾಡುವಂತೆ ನೋಡಿಕೊಳ್ಳಬೇಕು. ರೈತರ ಹಿತದೃಷ್ಟಿಯಿಂದಲೇ ಎಪಿಎಂಸಿ ಕಾಯ್ದೆ ಮರುಸ್ಥಾಪನೆ ಮಾಡಲಾಗಿದೆ. ರೈತರು, ಖರೀದಿದಾರರು ಹಾಗೂ ಹಮಾಲರಿಗೆ ಶೋಷಣೆಯಾಗದಂತೆ ಕಾಯ್ದೆ ಜಾರಿ ಮಾಡಲಾಗಿದೆ ಎಂದು ಹೇಳಿದರು.ಪ್ರತಿದಿನ ಜಿಲ್ಲೆಯಿಂದ ಸುಮಾರು 40 ಲಾರಿ ಎಳನೀರು ಹಾಗೆಯೇ ಬಾಳೆಕಾಯಿ ಹೊರರಾಜ್ಯಗಳಿಗೆ ಹೋಗುತ್ತಿದೆ ಎಂಬ ಮಾಹಿತಿ ಇದೆ. ಚೆಕ್ ಪೋಸ್ಟ್‌ಗಳಲ್ಲಿ ತಪಾಸಣೆ ಮಾಡಿದರೆ ಎಪಿಎಂಸಿಗೆ ವಂಚನೆಯಾಗುತ್ತಿರುವ ಸೆಸ್ ಸಂಗ್ರಹ ಮಾಡಬಹುದು. ಬಾಳೆಕಾಯಿ ಸೇರಿದಂತೆ ಎಲ್ಲ ರೀತಿಯ ತೋಟಗಾರಿಕೆ ಉತ್ಪನ್ನ, ತರಕಾರಿ ಖರೀದಿ ಚಟುವಟಿಕೆಗಳು ಎಪಿಎಂಸಿ ಆವರಣದಲ್ಲೇ ನಡೆಯುವಂತೆ ಪ್ರಯತ್ನ ಮಾಡಿ ಎಂದು ಅಧಿಕಾರಿಳಿಗೆ ಸೂಚನೆ ನೀಡಿದರು.
ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ ಅವರು ಎಪಿಎಂಸಿಯಲ್ಲಿನ ನ್ಯೂನತೆಗಳನ್ನು ಸಚಿವರ ಗಮನಕ್ಕೆ ತಂದರು. ಎಳನೀರು ಮತ್ತು ಬಾಳೆಕಾಯಿ ಗರಿಷ್ಠ ಪ್ರಮಾಣದಲ್ಲಿ ಹೊರರಾಜ್ಯಗಳಿಗೆ ಹೋಗುತ್ತಿರುವುದು ನಿಜ. ಈ ಬಗ್ಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಎಂದು ಹೇಳಿದರು. ಎಪಿಎಂಸಿ ಕಚೇರಿಗೆ ಭೇಟಿ ನೀಡಿದ ಸಚಿವರು, ಸಾಕಷ್ಟು ಜಾಗ ಇದ್ದರೂ ಸದುಪಯೋಗಮಾಡಿಕೊಳ್ಳುತ್ತಿಲ್ಲವೇಕೆ? ಎಂದು ಪ್ರಶ್ನಿಸಿದರು.ಸಂತೆಮರಹಳ್ಳಿ ಉಪಪ್ರಾಂಗಣದಲ್ಲಿ ಪ್ರತಿ ಮಂಗಳವಾರ ಸಂತೆ ನಡೆಯುತ್ತಿರುವುದನ್ನು ಬಿಟ್ಟರೆ ಇತರೆ ದಿನಗಳಲ್ಲಿ ಖರೀದಿ ಚಟುವಟಿಕೆಗಳು ಇರುವುದಿಲ್ಲ ಎಂದು ರೈತ ಸಂಘದ ಮುಖಂಡರು ಸಚಿವರ ಗಮನಕ್ಕೆ ತಂದರು. ಗರಿಷ್ಠ ಪ್ರಮಾಣದಲ್ಲಿ ಬೆಲ್ಲ ಮತ್ತು ಎಳನೀರು ಬೇರೆ ಮಾರುಕಟ್ಟೆಗೆ ಹೋಗುತ್ತಿದೆ. ವಾರದಲ್ಲಿ ಮೂರು ದಿನ ಬೆಲ್ಲ ಮತ್ತು ಎಳೆನೀರು ವಹಿವಾಟಿಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಸಚಿವ ಶಿವಾನಂದ ಪಾಟೀಲ ಅವರು, ಬೆಲ್ಲ ಮತ್ತು ಎಳೆನೀರು ವಹಿವಾಟು ಆರಂಭಿಸಿ, ಆರಂಭದಲ್ಲಿ ನಿರೀಕ್ಷಿತ ಮಟ್ಟದಲ್ಲಿ ವಹಿವಾಟು ನಡೆಯದಿದ್ದರೂ ಕ್ರಮೇಣ ಸುಧಾರಣೆಯಾಗಲಿದೆ ಎಂದು ಹೇಳಿದರು.2023-24ನೇ ಸಾಲಿನಲ್ಲಿ 17.44 ಲಕ್ಷ ರು. ಮಾರುಕಟ್ಟೆ ಶುಲ್ಕ ಸಂಗ್ರಹವಾಗಿತ್ತು. ಈ ಬಾರಿ ಏಪ್ರಿಲ್ನಿಂದ ಇದುವರೆಗೆ 33.49 ಲಕ್ಷ ರು. ಸಂಗ್ರಹವಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿ ಟಿ.ವಿ. ಪ್ರಕಾಶ್ ಕುಮಾರ್ ಮಾಹಿತಿ ನೀಡಿದರು.ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್. ಕೃಷ್ಣಮೂರ್ತಿ, ಎಪಿಎಂಸಿ ಅಧ್ಯಕ್ಷ ಎಚ್.ಎನ್. ಮಹದೇವಸ್ವಾಮಿ, ಉಪಾಧ್ಯಕ್ಷ ರಾಮಚಂದ್ರ, ಗ್ಯಾರಂಟಿ ಯೋಜನೆ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಎಚ್.ವಿ. ಚಂದ್ರು, ಚಾಮುಲ್ ನಿರ್ದೇಶಕ ಕಮರವಾಡಿ ರೇವಣ್ಣ ಮತ್ತಿತರರು ಉಪಸ್ಥಿತರಿದ್ದರು10 ಕೋಟಿ ರು. ಅನುದಾನಸಂತೆಮರಹಳ್ಳಿ ಉಪಮಾರುಕಟ್ಟೆ ಪ್ರಾಂಗಣದ ಅಭಿವೃದ್ಧಿಗೆ ಹತ್ತು ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು. ಉಪಪ್ರಾಂಗಣದಲ್ಲಿ ಹಲವಾರು ಸಮಸ್ಯೆಗಳಿವೆ. ಕೃಷಿ ಉತ್ಪನ್ನಗಳ ದಾಸ್ತಾನಿಗೆ ಸೌಲಭ್ಯ ಇಲ್ಲ. ಮೂಲಸೌಕರ್ಯದ ಕೊರತೆ ಇದೆ. ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿ ಎಂದು ಶಾಸಕ ಕೃಷ್ಣಮೂರ್ತಿ ಅವರು ಸದನದಲ್ಲಿ ಮನವಿ ಮಾಡಿದ್ದರು. ಇಂದು ಉಪಮಾರುಕಟ್ಟೆ ಪ್ರಾಂಗಣಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ರಸ್ತೆ ಅಭಿವೃದ್ಧಿ, ಕುಡಿಯುವ ನೀರು, ವಿದ್ಯುತ್ ದೀಪ ಸೌಲಭ್ಯ, ಗೋದಾಮುಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು. ಪ್ರಾಂಗಣದಲ್ಲಿ ಖಾಲಿ ಇರುವ ಮಳಿಗೆಗಳನ್ನು ತಕ್ಷಣ ಹಂಚಿಕೆ ಮಾಡಿ ಎಂದು ಕಾರ್ಯದರ್ಶಿಗೆ ಸೂಚಿಸಿದರು.
ಮಾಹಿತಿ ನೀಡಿದ ಸಚಿವರು:ಸಚಿವ ಶಿವಾನಂದ ಪಾಟೀಲ ಚಾಮರಾಜನಗರ ಎಪಿಎಂಸಿಯಿಂದ ಸಂತೆಮರಹಳ್ಳಿ ಉಪಪ್ರಾಂಗಣಕ್ಕೆ ಭೇಟಿ ನೀಡಲು ತೆರಳುತ್ತಿರುವ ವೇಳೆ ಲಾರಿಗಳಲ್ಲಿ ಹೊರರಾಜ್ಯಗಳಿಗೆ ಎಳೇನೀರು ಸಾಗಿಸುತ್ತಿರುವುದು ಗಮನಕ್ಕೆ ಬಂತು. ತಕ್ಷಣ ಅಧಿಕಾರಿಗಳಿಗೆ ಕರೆ ಮಾಡಿದ ಸಚಿವರು, ಇದು ಎಲ್ಲಿಗೆ ಪೂರೈಕೆಯಾಗುತ್ತಿದೆ. ಮಾರುಕಟ್ಡೆ ಶುಲ್ಕ ಪಾವತಿ ಆಗಿದೆಯಾ? ಪರಿಶೀಲಿಸಿ ಮಾಹಿತಿ ಕೊಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರತಿದಿನ ಜಿಲ್ಲೆಯಿಂದ ಎಷ್ಟು ಎಳೆನೀರು ಮತ್ತು ಬಾಳೆಕಾಯಿ ಹೋಗುತ್ತಿದೆ ಎಂಬ ಮಾಹಿತಿಯೂ ಬೇಕು ಎಂದು ಹೇಳಿದರು.