ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಎರಡು ತಿಂಗಳಾದರೂ ಮಳೆಯಿಂದ ಹಾನಿಯಾಗಿರುವ ಜಿಲ್ಲೆಯ ಸಾವಿರಾರು ರೈತರಿಗೆ ಪರಿಹಾರ ಕೊಡಲು ರಾಜ್ಯ ಸರ್ಕಾರ ಸತಾಯಿಸುತ್ತಿದೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ತೀವ್ರವಾಗಿ ಖಂಡಿಸಿದರು.ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆ, ಸೇತುವೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲೆ, ಅಂಗನವಾಡಿ ಸೇರಿ ಅಪಾರ ಆಸ್ತಿಪಾಸ್ತಿ ನಷ್ಟಕ್ಕೂ ನಯಾಪೈಸೆ ಬಿಡುಗಡೆ ಮಾಡಿಲ್ಲ ಎಂದು ಆಕ್ರೋಶ ಹೊರಹಾಕಿದರು. ರೈತರು ಕಾಯುತ್ತಿದ್ದು, ಇನ್ನಾದರೂ ಹಾನಿಗೆ ಪರಿಹಾರ ಕೊಡಿ, ಐದು ಗ್ಯಾರಂಟಿಗಳಿಗೆ ಹಣ ನೀಡುತ್ತಿರುವುದರಿಂದ ರೈತರಿಗೆ ಪರಿಹಾರ ಕೊಡಲು ಆಗದೇ ಇದ್ದರೆ ಅದನ್ನು ಜನರ ಮುಂದೆ ಹೇಳಿಬಿಡಲಿ. ಮಳೆಹಾನಿಯಾಗಿ ನಾಲ್ಕೈದು ತಿಂಗಳು ಕಳೆದರೂ ಪರಿಹಾರ ನೀಡಲು ಸರ್ಕಾರ ಮೀನಮೇಷ ಎಣಿಸುತ್ತಿದೆ. ತೋಟಗಾರಿಕೆ ಇಲಾಖೆಯಲ್ಲಿ ೪೪೪ ಹೆಕ್ಟೇರ್, ಕೃಷಿ ಇಲಾಖೆಯಲ್ಲಿ ೮೬೧ ಹೆಕ್ಟೇರ್, ೯೯ ಕೆರೆ, ೬೪೬ ಕಿಮೀ ಲೋಕೋಪಯೋಗಿ ರಸ್ತೆ, ೩೮ ಸೇತುವೆ, ೬೫೦ ಶಾಲೆ, ೩೬೯ ಅಂಗನವಾಡಿ, ೧೨೨೭ ವಿದ್ಯುತ್ ಕಂಬಗಳು ಹಾಳಾಗಿದ್ದರೂ, ಸರ್ಕಾರ ಕಂಡೂ ಕಾಣದಂತಿದೆ. ರೈತರ ಬಗ್ಗೆ ಅಸಡ್ಡೆ ತೋರುತ್ತಿದೆ ಎಂದು ಕಿಡಿ ಕಾರಿದರು.
ರೈತರ ದೃಷ್ಟಿಯಲ್ಲಿ ಅಂದಾಜಿಸುವುದಾದರೆ ೩ ರಿಂದ ೪ ಸಾವಿರ ಕೋಟಿ ನಷ್ಟವಾಗಿದೆ. ಆದರೆ ಈ ಸರ್ಕಾರ ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರವೇ ಪರಿಹಾರ ಕೊಡಲು ಹಿಂದೇಟು ಹಾಕುತ್ತಿದೆ, ವಿಪರ್ಯಾಸ ಎಂದರೆ ರಸ್ತೆ ಗುಂಡಿ ಮುಚ್ಚಲು ಈ ಸರ್ಕಾರ ಹಣ ನೀಡುತ್ತಿಲ್ಲ. ಗ್ರಾಮೀಣಾಭಿವೃದ್ಧಿಗೆ ೧ ರು.ಅನುದಾನವನ್ನೂ ನೀಡಿಲ್ಲ. ಅಭಿವೃದ್ಧಿ ಮಾಡುತ್ತಿದ್ದೇವೆ, ರೈತರ ಹಿತ ಕಾಯುತ್ತಿದ್ದೇವೆ ಎಂದೆಲ್ಲಾ ಹೇಳುವ ಸರ್ಕಾರ, ಪರಿಹಾರ ಕೊಡದೇ ಇರುವುದಕ್ಕೆ ಏನು ರೋಗ, ಕೇವಲ ಕೇಂದ್ರದತ್ತ ಬೊಟ್ಟು ಮಾಡಿ ಕೂರುವುದು ಸರಿಯೇ? ಇನ್ನೂ ಕೆಲ ದಿನ ಕಾಯುತ್ತೇವೆ. ನಂತರ ಮುಂದೇನು ಮಾಡಬೇಕು ಎಂಬುದನ್ನು ನಿರ್ಧರಿಸುತ್ತೇವೆ ಎಂದರು.ಜಿಲ್ಲೆಯ ಎಲ್ಲಾ ಇಲಾಖೆಗಳಲ್ಲಿ ವರ್ಗಾವಣೆ ದಂಧೆ ಮಿತಿ ಮೀರಿದೆ. ಹಾಸ್ಟೆಲ್ ಅಡುಗೆಯವರು, ಅಟೆಂಡರ್‌ಗಳನ್ನು ವರ್ಗ ಮಾಡಲು ೫ ರಿಂದ ೧೦ ಸಾವಿರಕ್ಕೆ ಮಧ್ಯವರ್ತಿಗಳನ್ನು ಬಿಟ್ಟು ಕೈಚಾಚಲಾಗುತ್ತಿದೆ. ಸಾಕ್ಷ್ಯ ಬೇಕಿದ್ದರೆ ದಾಖಲೆ ಬಿಡುಗಡೆಗೊಳಿಸುವೆ ಎಂದು ಸವಾಲು ಹಾಕಿದರು.
ಕಾಂಗ್ರೆಸ್‌ನ ಕೆಲ ಸಚಿವರು ದೇವೇಗೌಡರ ಕುಟುಂಬವನ್ನು ಟಾರ್ಗೆಟ್ ಮಾಡುತ್ತಿರುವುದಕ್ಕೆ ಪ್ರತಿಕ್ರಿಯೆ ನೀಡಿದ ರೇವಣ್ಣ, ಪೊಲೀಸರನ್ನು ಬಿಟ್ಟು ಅಥವಾ ಬೇರಾವುದೋ ಒತ್ತಡದಿಂದ ಗೌಡರ ಕುಟುಂಬವನ್ನು ಮುಗಿಸುತ್ತೇವೆ ಎಂದು ಹೊರಟವರಿಗೆ ನಿರಾಸೆ ಆಗಲಿದೆ. ಕಾಲ ಒಂದೇ ಸಮ ಇರಲ್ಲ, ಇವರು ಏನೇ ಸಂಚು ಮಾಡಿದರೂ ನಮ್ಮ ಕುಟುಂಬ ಹೆದರಲ್ಲ ಎಂದು ತಿರುಗೇಟು ನೀಡಿದರು.ದೇವೇಗೌಡರು ಯಾರಿಗೂ ಕಣ್ಣೀರು ಹಾಕಿಸಲು ಹೋಗಿಲ್ಲ, ಅವರೇ ಅಗತ್ಯವಿದ್ದಾಗ ಗೌಡರ ಬಳಿ ಬಂದು ಕಣ್ಣೀರು ಹಾಕಿದ್ದಾರೆ. ಕೈ ಕಾಲು ಹಿಡಿದಿದ್ದಾರೆ ಎಂದು ಕೈ ಸಚಿವರಿಗೆ ಟಾಂಗ್ ನೀಡಿದರು.
ನಮ್ಮ ಕುಟುಂಬದ ಕೆಲವರ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ನಾನು ನ್ಯಾಯಾಲಯ, ದೇವರನ್ನು ನಂಬುತ್ತೇನೆ. ಆ ಬಗ್ಗೆ ಈಗ ಮಾತನಾಡಲ್ಲ. ಟೈಂ ಬಂದಾಗ ಎಲ್ಲಾ ಹೇಳುವೆ ಎಂದು ಪ್ರತಿಕ್ರಿಯಿಸಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಲಕ್ಷ್ಮಣಗೌಡ , ಜೆಡಿಎಸ್ ಜಿಲ್ಲಾ ವಕ್ತಾರ ಹೊಂಗೆರೆ ರಘು ಇತರರು ಉಪಸ್ಥಿತರಿದ್ದರು.