ಪೆಪ್ಪರ್‌ಮೆಂಟ್ ಹಾಗೂ ಸಿಹಿ ತಿನಿಸುಗಳ ಬಳಿಕ ವಿದೇಶದಿಂದ ಈಗ ಬಿಸ್ಕತ್ ಪೊಟ್ಟಣಗಳಲ್ಲಿ ಕೋಟ್ಯಂತರ ರು. ಮೌಲ್ಯದ ಡ್ರಗ್ಸ್ ಸಾಗಿಸಲು ಯತ್ನಿಸಿದ್ದ ಕಿಡಿಗೇಡಿಯೊಬ್ಬ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಬಲೆಗೆ ಬಿದ್ದಿದ್ದಾನೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪೆಪ್ಪರ್‌ಮೆಂಟ್ ಹಾಗೂ ಸಿಹಿ ತಿನಿಸುಗಳ ಬಳಿಕ ವಿದೇಶದಿಂದ ಈಗ ಬಿಸ್ಕತ್ ಪೊಟ್ಟಣಗಳಲ್ಲಿ ಕೋಟ್ಯಂತರ ರು. ಮೌಲ್ಯದ ಡ್ರಗ್ಸ್ ಸಾಗಿಸಲು ಯತ್ನಿಸಿದ್ದ ಕಿಡಿಗೇಡಿಯೊಬ್ಬ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಬಲೆಗೆ ಬಿದ್ದಿದ್ದಾನೆ.ಮೂರು ದಿನಗಳ ಹಿಂದೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬ್ಯಾಂಕಾಕ್‌ನಿಂದ ಬಂದಿಳಿದ ಪ್ರಯಾಣಿಕನನ್ನು ಡ್ರಗ್ಸ್ ಸಾಗಾಣಿಕೆಗೆ ಯತ್ನಿಸಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ಬಂಧಿಸಲಾಯಿತು. ಈತನ ಬಳಿ 2.44 ಕೋಟಿ ರು. ಮೌಲ್ಯದ 6.98 ಕೆಜಿ ಹೈಡ್ರೋ ಗಾಂಜಾ ಜಪ್ತಿಯಾಗಿದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬ್ಯಾಂಕಾಕ್‌ನಿಂದ ಹೈಡ್ರೋ ಗಾಂಜಾ ಅಕ್ರಮವಾಗಿ ತರಲಾಗುತ್ತಿದೆ ಎಂಬ ಖಚಿತ ಮಾಹಿತಿ ಕಸ್ಟಮ್ಸ್ ಅಧಿಕಾರಿಗಳಿಗೆ ಲಭ್ಯವಾಯಿತು. ಈ ಸುಳಿವು ಆಧರಿಸಿ ಕಾರ್ಯಾಚರಣೆಗಿಳಿದ ಅಧಿಕಾರಿಗಳು, ಶುಕ್ರವಾರ ಬ್ಯಾಂಕಾಕ್‌ನಿಂದ ಬಂದಿಳಿದ ಪ್ರಯಾಣಿಕರ ಮೇಲೆ ನಿಗಾವಹಿಸಿದ್ದರು. ಆಗ ಶಂಕೆ ಮೇರೆಗೆ ಒಬ್ಬನನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದ್ದಾರೆ. ಆಗ ಆತನ ಬ್ಯಾಗ್‌ನಲ್ಲಿದ್ದ ಕೂಕಿಸ್ (ಬಿಸ್ಕತ್) ಪೊಟ್ಟಣಗಳನ್ನು ತೆರೆದಾಗ ಗಾಂಜಾ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಕೆಲ ದಿನಗಳ ಹಿಂದೆ ಕ್ಯಾಂಡಿ (ಪೆಪ್ಪರ್‌ಮೆಂಟ್) ಹಾಗೂ ಸಿಹಿ ತಿನಿಸುಗಳಲ್ಲಿ ಡ್ರಗ್ಸ್ ಸಾಗಾಣಿಕೆ ಯತ್ನಿಸಿದ್ದಾಗ ಪೆಡ್ಲರ್ ಕಸ್ಟಮ್ಸ್ ಬಲೆಗೆ ಬಿದ್ದಿದ್ದ. ಆತನ ಬಳಿ 4.5 ಲಕ್ಷ ರು. ಮೌಲ್ಯದ ಡ್ರಗ್ಸ್ ಜಪ್ತಿಯಾಗಿತ್ತು. ಈ ಘಟನೆ ಮರೆಯುವ ಮುನ್ನವೇ ಬಿಸ್ಕತ್ ಪೊಟ್ಟಣಗಳಲ್ಲಿ ಎರಡೂವರೆ ಕೋಟಿ ಮೌಲ್ಯದ ಡ್ರಗ್ಸ್ ಸಿಕ್ಕಿರುವುದು ಕುತೂಹಲ ಮೂಡಿಸಿದೆ. ಕರುನಾಡಿಗೆ ವಿದೇಶದಿಂದ ಕಳ್ಳ ಹಾದಿಯಲ್ಲಿ ಡ್ರಗ್ಸ್ ತರಲು ಡ್ರಗ್ಸ್ ದಂಧೆಕೋರರು ನಾನಾ ಕುತಂತ್ರಗಳನ್ನು ಹೆಣೆದಿರುವುದು ಸಂಗತಿ ಆತಂಕಕ್ಕೀಡು ಮಾಡಿದೆ.
