ಕನ್ನಡಪ್ರಭ ವಾರ್ತೆ ಇಂಡಿ

ಈ ಜಗತ್ತಿನಲ್ಲಿ ಪ್ರತಿಯೊಂದು ವಸ್ತು ಧರ್ಮವನ್ನು ಆಶ್ರಯಿಸಿದೆ. ಕಣ್ಣಿನ ಕಾಣುವ ವಿಶಾಲವಾದ ವಿಶ್ವ, ಅದರ ಸೌಂದರ್ಯ ಎಲ್ಲವೂ ಧರ್ಮದ ಮೇಲೆ ನಿಂತಿದೆ. ಸುಂದರ ಹೂ ಅರಳಿ ಸುವಾಸ ಹರಡುತ್ತದೆ. ದೀಪ ಉರಿದು ಸುತ್ತಮುತ್ತಲು ಬೆಳಕು ಚೆಲ್ಲುತ್ತದೆ. ಅರಳುವುದು ಹೂವಿನ ಧರ್ಮ, ಬೆಳಗುವುದು ದೀಪದ ಧರ್ಮ ಎಂದು ಕೊಪ್ಪಳ ಸಂಸ್ಥಾನ ಗವಿಮಠ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.

ತಾಲೂಕಿನ ಬೊಳೆಗಾಂವ ಗ್ರಾಮದಲ್ಲಿ ಭದ್ರಕಾಳಿ ವೀರಭದ್ರೇಶ್ವರ ನೂತನ ದೇವಸ್ಥಾನ ಲೋಕಾರ್ಪಣೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಳಸಾಹರೋಹಣ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮಣ್ಣು, ಸ್ಟೀಲ್‌, ಬೆಳ್ಳಿ, ಬಂಗಾರ ಪಾತ್ರೆಯಲ್ಲಿ ರೊಟ್ಟಿ ಬಡಿಸಿದರೆ ರೊಟ್ಟಿ ಎಂಬ ಒಂದೇ ಭಾವವಿರಬೇಕು. ಬೆಳ್ಳಿ, ಬಂಗಾರ ಕಡೆಗೆ ಲಕ್ಷ್ಯ ಇರಬಾರದು. ದೇವರು ಕೊಟ್ಟಿದ್ದರ ಮೇಲೆ ಲಕ್ಷ್ಯ ಇರಬೇಕು, ನಮ್ಮ ನೋಡುವ ದೃಷ್ಟಿಕೋನ ಬದಲಾಗಬೇಕು. ಮೆಚ್ಚುಗೆಯ ಮಾತು ಚುಚ್ಚು ಮಾತು, ನೋವು ನಲಿವು, ಕಷ್ಟ ಸುಖ, ಸೋಲು-ಗೆಲುವು, ಬಡತನ-ಶ್ರೀಮಂತಿಕೆ, ಲಾಭ-ನಷ್ಟಗಳ ಮಧ್ಯೆ ಬದುಕಲು ಕಲಿಯಬೇಕು. ಕೆಲಸ ಮಾಡುವುದನ್ನು ಕಲಿಯಬೇಕು ಎಂದು ಹೇಳಿದರು.

ಸಾಲೋಟಗಿ ಸಿದ್ದೇಶ್ವರ ಆಶ್ರಮದ ಸಂಗಮೇಶ್ವರ ಶ್ರೀಗಳು ಮಾತನಾಡಿ, ಹೂಗಳಲ್ಲಿ ಹತ್ತಿ ಹೂ ಶ್ರೇಷ್ಠ, ತಾಯಿಯ ಹಾಲು ಶ್ರೇಷ್ಠ, ಚುಕ್ಕೆಗಳಲ್ಲಿ ಬೆಳ್ಳಿ ಚುಕ್ಕೆ ಶ್ರೇಷ್ಠ, ಹಾಗೆಯೇ ಪ್ರಾಣಿಗಳಲ್ಲಿ ಮಾನವ ಜನ್ಮ ಶ್ರೇಷ್ಠ, ಅದರ ಸದುಪಯೋಗ ಪಡೆಯಬೇಕು ಎಂದು ಸಲಹೆ ನೀಡಿದರು.


ಶಿರಶ್ಯಾಡದ ಅಭಿನವ ಮುರುಘೇಂದ್ರ ಶ್ರೀಗಳು ಮಾತನಾಡಿ, ಈ ಜಗತ್ತಿನಲ್ಲಿ ಬಾಳಿ ಬದುಕಿದವರು ಋಷಿಮುನಿಗಳು, ತತ್ವಜ್ಞಾನಿಗಳು, ದಾರ್ಶನಿಕರು, ದಾಸರು, ಸಂತರು, ಶರಣರು, ಮಹಾಂತರು ಕಣ್ಣಿಗೆ ಕಾಣುವ ಈ ವಿಶಾಲವಾದ ವಿಶ್ವ ದೇವನ ಅಭಿವ್ಯಕ್ತ ರೂಪವೆಂದರು.

ಈರಣ್ಣ ಹುಣಸಗಿ, ಆನಂದ ಹುಣಸಗಿ, ಆನಂದ ಮೋರೆ, ಪ್ರಶಾಂತ ತಳವಾರ ಪ್ರಭು ಹ್ಯಾಳದ ಮಾತನಾಡಿದರು.

ವೇದಿಕೆಯ ಮೇಲೆ ವೀರಭದ್ರೇಶ್ವರ ದೇವಸ್ಥನ ಸಮಿತಿ ಅಧ್ಯಕ್ಷ ಆನಂದಪ್ಪ ಹುಣಸಗಿ, ಬಸವಂತರಾಯಗೌಡ ಪಾಟೀಲ, ಶ್ರೀಮಂತ ಇಂಡಿ, ಕೊಪ್ಪಳ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಡಾ.ಸುಶೀಲಕುಮಾರ ಹೂನಸಗಿ, ಬಾಬು ಸಾವಕಾರ ಮೇತ್ರಿ ಇತರರು ಕಾರ್ಯಕ್ರಮದಲ್ಲಿ ಇದ್ದರು.ಆಕಾಶಕ್ಕೆ ಕಂಬಗಳಿಲ್ಲ, ತಾಯಿಯ ಹಾಲು ಅಮೃತಕ್ಕೆ ಸಮಾನ, ದೇಹಕ್ಕೆ ಒಂಭತ್ತು ರಂಧ್ರಗಳಿವೆ. ಇವೆಲ್ಲ ದೇವರ ಕೊಟ್ಟ ಕೊಡುಗೆ. ಪತ್ರಿ ಬಲ್ವಾರ್ಚನೆ ಗಿಡದಿಂದ ಬರುತ್ತದೆ, ಅನ್ನ, ನೀರು ಭೂಮಿಯಿಂದ ಪಡೆಯುತ್ತೇವೆ. ಇದರಲ್ಲಿ ನಮ್ಮದೇನು ಇಲ್ಲ, ಅಭಿಷೇಕ ಮಾಡಿ ಸಂಪತ್ತು, ಬೆಳ್ಳಿ ,ಬಂಗಾರ, ವಸ್ತು, ಮಕ್ಕಳು, ಒಡವೆ ಬೇಡುವ ಬದಲಾಗಿ ದೇವರು ಕೊಟ್ಟಿದ್ದಕ್ಕೆ ಧನ್ಯತಾ ಭಾವ ಇರಬೇಕು.

- ಅಭಿನವ ಗವಿಸಿದ್ದೇಶ್ವರ ಶ್ರೀ ಸಂಸ್ಥಾನ ಗವಿಮಠ ಕೊಪ್ಪಳ