ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಮಾದಕ ವ್ಯಸನ ವಿದ್ಯಾರ್ಥಿಗಳ ಬದುಕು ಹಾಗೂ ಭವಿಷ್ಯಕ್ಕೆ ಮಾರಕವಾಗಿದ್ದು, ವಿದ್ಯಾರ್ಥಿಗಳು ಗುಣಾತ್ಮಕ ಶಿಕ್ಷಣ ಪಡೆಯಲು ಶಿಕ್ಷಕರ ನುಡಿಗಳನ್ನು ಪಾಲಿಸಬೇಕು. ಮಕ್ಕಳು ಕೇವಲ ಅಂಕಗಳ ಬೆನ್ನಟ್ಟದೆ ಗುಣಾತ್ಮಕ ಹಾಗೂ ಪ್ರಾಯೋಗಿಕ ಶಿಕ್ಷಣ ಪಡೆಯಬೇಕು. ಆ ಮೂಲಕ ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡಲು ವಿದ್ಯಾರ್ಥಿಗಳೇ ಮುಂದಾಗಬೇಕು ಎಂದು ರಬಕವಿ-ಬನಹಟ್ಟಿ ತಾಪಂ ಇಒ ಬಸವರಾಜ ಐನಾಪುರ ಹೇಳಿದರು.ತಾಲೂಕಿನ ಯರಗಟ್ಟಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಆವರಣದಲ್ಲಿ ನಡೆದ ವಿಶ್ವ ಮಾದಕ ವಸ್ತು ವ್ಯಸನ ವಿರೋಧಿ ದಿನಾಚರಣೆ ಹಾಗೂ ೨೦೨೫-೨೬ ನೇ ಸಾಲಿನ ಶಾಲಾ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಾಲಿಬಾಲ್ ಸರ್ವ್ ಮಾಡುವ ಮೂಲಕ ಕ್ರೀಡಾ ಚಟುವಟಿಕೆಗಳಿಗೆ ಚಾಲನೆ ನೀಡಿದ ಅವರು, ಮಕ್ಕಳು ಒಳ್ಳೆಯ ದೈಹಿಕ ಮತ್ತು ಮಾನಸಿಕ ಆರೋಗ್ಯ ಬೆಳೆಸಿಕೊಳ್ಳಲು ಆಟೋಟಗಳಲ್ಲಿ ಭಾಗವಹಿಸಬೇಕು. ಶಾಲೆಗೆ ಅವಶ್ಯವಿರುವ ಮೂಲಭೂತ ಸೌಕರ್ಯಗಳನ್ನು ಆದ್ಯತೆಯ ಮೇರೆಗೆ ತಾಲೂಕ ಪಂಚಾಯತಿ ಅನುದಾನದಲ್ಲಿ ಒದಗಿಸಲಾಗುವುದೆಂದರು. ಶಾಲೆಯಲ್ಲಿ ಲಭ್ಯವಿರುವ ಮಾನವ ಸಂಪನ್ಮೂಲ ಹಾಗೂ ಮೂಲಭೂತ ಸೌಲಭ್ಯಗಳನ್ನು ಬಳಸಿಕೊಂಡು ಗುಣಮಟ್ಟದ ಶಿಕ್ಷಣ ಪಡೆಯಬೇಕೆಂದು ಮಕ್ಕಳಿಗೆ ಕರೆ ನೀಡಿದರು.
ಬನಹಟ್ಟಿ ಪಿಎಸ್ಐ ಶಿವರಾಜ ಧರಿಗೋಣ ಮಾತನಾಡಿ, ಮಾದಕ ವಸ್ತುಗಳ ದುರ್ಬಳಕೆ ಹಾಗೂ ಕಳ್ಳ ಸಾಗಣೆಯಿಂದ ಸಮಾಜಕ್ಕೆ ಉಂಟಾಗುವ ಹಾನಿಯ ಬಗ್ಗೆ ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಮಕ್ಕಳು ತಮ್ಮ ಶಾಲೆ ಹಾಗೂ ಆವರಣದ ಸುತ್ತಮುತ್ತ ಮಾದಕ ವಸ್ತುಗಳ ಮಾರಾಟ ಹಾಗೂ ವ್ಯಸನದ ಕುರಿತು ದೂರು ನೀಡಲು ಪೋಲಿಸ್ ಇಲಾಖೆಯಿಂದ ನೀಡಿದ ಬಾರ್ ಕೋಡ್ ಸ್ಕ್ಯಾನ್ ಮಾಡಬಹುದಾಗಿದೆ. ಎಲ್ಲ ಮಕ್ಕಳು ಪೋಲಿಸ್ ತಮ್ಮ ಸಮಸ್ಯೆಗಳ ಕುರಿತು ದೂರು ನೀಡಲು ಪೊಲೀಸ್ ಸಹಾಯವಾಣಿ ೧೦೯೮ ಹಾಗೂ ೧೯೩೦ ಬಳಸಬಹುದಾಗಿದೆ. ತುರ್ತು ಸಂದರ್ಭದಲ್ಲಿ ಪೊಲೀಸ್ ಸಹಾಯವಾಣಿ ೧೧೨ಗೆ ಕರೆ ಮಾಡಿ ಇಲಾಖೆಯ ಸಹಾಯ ಪಡೆಯಬಹುದಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಉತ್ತಮಕುಮಾರ ಮಗದುಮ್ ಮಾತನಾಡಿದರು. ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷರಾದ ಮಹಾದೇವ ಸನದಿ ವಹಿಸಿದ್ದರು. ಬಸಪ್ಪ ಕಂಕಣವಾಡಿ, ಪ್ರಭಾರಿ ಮುಖ್ಯೋಪಾಧ್ಯಾಯ ಐ.ಡಿ.ನದಾಫ್ ವೇದಿಕೆಯ ಮೇಲಿದ್ದರು. ಡಾ.ರಾಜು ಕೊಕ್ಕನವರ, ಸೋರಗಾಂವಿ ನಿರೂಪಿಸಿದರು, ಎಮ್.ಪಿ.ಮೇಗಾಡಿ ಸ್ವಾಗತಿಸಿ, ಲೋಕಾಪೂರ ವಂದಿಸಿದರು.