ಸಾರಾಂಶ
ಧಾರವಾಡ:
ಗ್ರಾಮೀಣ ಅಭಿವೃದ್ಧಿಗೆ ಸರ್ಕಾರದಿಂದ ಬಿಡುಗಡೆ ಆಗುವ ಅನುದಾನದ ಪ್ರತಿ ಪೈಸೆ ಸದುಪಯೋಗವಾಗಬೇಕು. ಯೋಜನೆಗೆ ಅನುಗುಣವಾಗಿ ಹಣ ಬಳಕೆ ಆಗಬೇಕು. ಅಭಿವೃದ್ಧಿಯಲ್ಲಿ ತಾರತಮ್ಯ ಬೇಡ. ಎಲ್ಲರನ್ನು ಸಮಾನವಾಗಿ ಕಂಡಾಗ ಮಾತ್ರ ಅಭಿವೃದ್ಧಿಗೆ ವೇಗ ಮತ್ತು ಸ್ಪಂದನೆ ಸಿಗುತ್ತದೆ ಎಂದು ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಹೇಳಿದರು.ಜಿಲ್ಲಾ ಪಂಚಾಯಿತಿಯಲ್ಲಿ ಬೆಳಗಾವಿ ವಿಭಾಗ ಮಟ್ಟದ ಎಲ್ಲ ಜಿಲ್ಲೆಗಳ 2026-27ನೇ ಸಾಲಿನ ಜಿಲ್ಲಾ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯನ್ನು ಸೋಮವಾರ ಜರುಗಿಸಿದ ಅವರು, ನಮ್ಮ ಅಭಿವೃದ್ಧಿ ನಮ್ಮ ಸಹಭಾಗಿತ್ವದಲ್ಲಿ ಎಂಬ ಬಲವಾದ ನಂಬಿಕೆ ಸಾಮಾನ್ಯ ಜನರಲ್ಲಿ ಮೂಡಬೇಕು. ಇದಕ್ಕಾಗಿ ಯೋಜನೆಗಳ ವಿಕೇಂದ್ರಿಕರಣ, ಅಧಿಕಾರದ ವಿಕೇಂದ್ರಿಕರಣ ಆಗಬೇಕು. ಅಂದಾಗ ಪಂಚಾಯಿತಿ ರಾಜ್ಯ ವ್ಯವಸ್ಥೆಗೆ ಸ್ವರೂಪ ಬರುತ್ತದೆ. ಹಳ್ಳಿ ಸ್ವಚ್ಛ ಮಾಡಿದರೆ, ಅದು ಸ್ವರ್ಗವಾಗುತ್ತದೆ. ಗ್ರಾಮಗಳಲ್ಲಿ ಶೌಚಾಲಯ ಹೆಚ್ಚಿಸಿ, ಗ್ರಾಮದ ಸ್ವಚ್ಛತೆಗೆ ತಿಂಗಳಗೊಂದು ದಿನ ಶ್ರಮದಾನ ಮಾಡಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಎಲ್ಲ ಗ್ರಾಮಗಳಲ್ಲಿರಲಿ ಸ್ಮಶಾನ:ಸರ್ಕಾರದ ನಿಯಮಗಳ ಚೌಕಟ್ಟಿನಲ್ಲಿ ಕೆಲಸ ಮಾಡಿ, ಜನರ ಭಾವನೆ ಗೌರವಿಸಿ. ಅವರ ಬೇಡಿಕೆಗಳಿಗೆ ಸ್ಪಂದಿಸಿದರೆ, ಜನರು ನಿಮ್ಮನ್ನು ದೈವಿ ಸ್ವರೂಪದಲ್ಲಿ ಕಾಣುತ್ತಾರೆ. ನಮಗೆ ಸಿಕ್ಕ ಸ್ಥಾನಮಾನ ಜನರ ಪ್ರಗತಿಗೆ ಬಳಸಿಕೊಳ್ಳಬೇಕು ಎಂದ ಪಾಟೀಲರು, ಮಾ. 31ರೊಳಗೆ ಬೆಳಗಾವಿ ವಿಭಾಗದ ಎಲ್ಲ ಗ್ರಾಮಗಳಲ್ಲಿ ಸ್ಮಶಾನ ಸೌಲಭ್ಯ ಸಿಗಬೇಕು. ಇದು ಗ್ರಾಮಗಳ ಮೂಲ ಸೌಕರ್ಯವಾಗಿದ್ದು, ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.
ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಸ್ಥಳೀಯ ಸಂಸ್ಥೆಗಳಿಗೆ ಕಾಯಕಲ್ಪ ನೀಡುವ ಉದ್ದೇಶವಿದೆ. ಸರ್ಕಾರದ ಯೋಜನೆಗಳು ಜನರಿಗೆ ತಲುಪಿಸಲು ಶಾಸಕರೊಂದಿಗೆ, ಜನಪ್ರತಿನಿಧಿಗಳೊಂದಿಗೆ ಅಧಿಕಾರಿಗಳು ಕೈ ಜೋಡಿಸಬೇಕು. ರಾಜ್ಯಕ್ಕೆ ಮಾದರಿ ಆಗಿರುವ ಹೊಲದ ರಸ್ತೆಯು ನವಲಗುಂದ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 300 ಕಿಮೀ ರಷ್ಟಾಗಿದೆ ಎಂದರು.ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ. ಪ್ರಾಸ್ತಾವಿಕ ಮಾತನಾಡಿ, ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ಸಾಕಾರಗೊಳಿಸುವುದು ಮುಖ್ಯ. ಈ ವರ್ಷದಿಂದ ಗ್ರಾಮ, ತಾಲೂಕು, ಜಿಲ್ಲೆಯ ಅಭಿವೃದ್ಧಿಗೆ ಸಾರ್ವಜನಿಕರ ಸಹಭಾಗಿತ್ವ ಮುಖ್ಯವಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ಜಿಲ್ಲಾಭಿವೃದ್ಧಿ ಯೋಜನೆಯ ಕರಡು ವರದಿ ಸಿದ್ಧಗೊಳಿಸಲಾಗುತ್ತಿದೆ ಎಂದು ತಿಳಿಸಿದರು.ಸಭೆಯಲ್ಲಿ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳಾದ ಸಿ.ಎನ್. ಶ್ರೀಧರ, ಕೆ. ಲಕ್ಷ್ಮಿ ಪ್ರಿಯಾ, ಮಹಮ್ಮದ ರೋಷನ್, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಜಿಪಂ ಸಿಇಒಗಳಾದ ಭುವನೇಶ ಪಾಟೀಲ, ರಾಹುಲ್ ಶಿಂಧೆ, ಡಾ. ದೀಲಿಶ್ ಸಶಿ ಇದ್ದರು.
;Resize=(128,128))
;Resize=(128,128))
;Resize=(128,128))