ನವಭಾರತ ನಿರ್ಮಾಣದಲ್ಲಿ ಪಟೇಲರ ಪಾತ್ರ ಅಪಾರ: ಪ್ರೊ. ಸುಧಾ ಕೌಜಗೇರಿ

| Published : Nov 11 2025, 02:15 AM IST

ಸಾರಾಂಶ

ಭಾರತ ಸ್ವಾತಂತ್ರ್ಯ, ರಾಜಕೀಯ ಏಕೀಕರಣ ಮತ್ತು ನವಭಾರತದ ಸರ್ವತೋಮುಖ ಅಭಿವೃದ್ಧಿಗೆ ಸಂಪೂರ್ಣ ಅರ್ಪಿಸಿಕೊಂಡ ಪಟೇಲರ ಬದುಕು, ಸಾಧನೆ, ಕೊಡುಗೆಗಳು ಸದಾಕಾಲ ಸ್ಮರಣೀಯ.

ಗದಗ: ಸರ್ದಾರ್ ವಲ್ಲಭಭಾಯಿ ಪಟೇಲರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸ್ವತಂತ್ರ ಭಾರತದ ಮೊದಲ ಉಪಪ್ರಧಾನಮಂತ್ರಿ, ಗೃಹ ಸಚಿವರಾಗಿ 565ಕ್ಕೂ ಹೆಚ್ಚು ರಾಜಸಂಸ್ಥಾನಗಳನ್ನು ಭಾರತದ ಒಕ್ಕೂಟಕ್ಕೆ ಸೇರಿಸುವಲ್ಲಿ ನಿರ್ವಹಿಸಿದ ತಂತ್ರ ಮತ್ತು ಕೌಶಲ್ಯಗಳನ್ನು ಭಾರತೀಯರು ಯಾವುದೇ ಕಾಲಕ್ಕೂ ಮರೆಯಲು ಸಾಧ್ಯವಿಲ್ಲ ಎಂದು ಪ್ರೊ. ಸುಧಾ ಕೌಜಗೇರಿ ತಿಳಿಸಿದರು.

ತಾಲೂಕಿನ ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಎನ್ಎಸ್ಎಸ್ ಘಟಕದಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನ ಹಾಗೂ ರಾಷ್ಟ್ರೀಯ ಐಕ್ಯತಾ ದಿನದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇತಿಹಾಸ ಪ್ರಾಧ್ಯಾಪಕ ಪ್ರೊ. ಅಪ್ಪಣ್ಣ ಹಂಜೆ ಮಾತನಾಡಿ, ಭಾರತ ಸ್ವಾತಂತ್ರ್ಯ, ರಾಜಕೀಯ ಏಕೀಕರಣ ಮತ್ತು ನವಭಾರತದ ಸರ್ವತೋಮುಖ ಅಭಿವೃದ್ಧಿಗೆ ಸಂಪೂರ್ಣ ಅರ್ಪಿಸಿಕೊಂಡ ಪಟೇಲರ ಬದುಕು, ಸಾಧನೆ, ಕೊಡುಗೆಗಳು ಸದಾಕಾಲ ಸ್ಮರಣೀಯ. ವಿದ್ಯಾರ್ಥಿಗಳು ಅವರ ಜೀವನ ಮೌಲ್ಯಗಳು, ಆದರ್ಶಗಳನ್ನು ಓದಿಕೊಂಡು ಸರಳ ಬದುಕು, ದೃಢ ನಿರ್ಧಾರ, ರಾಷ್ಟ್ರ ಸೇವೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಈ ವೇಳೆ ಸಾಂಸ್ಕೃತಿಕ ವಿಭಾಗದ ಸಂಯೋಜಕ ರಮೇಶ ಹುಲಕುಂದ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಹುಸೇನಬಾಷಾ ಹಾಗೂ ಸುಭಾಸ ಹರಿಹರ ಮಾತನಾಡಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಐರನ್ ರೆಸೊಲ್ವ್, ಐರನ್ ನೇಷನ್ ವಿಷಯಗಳ ಕುರಿತು ಪ್ರಬಂಧ ಸ್ಪರ್ಧೆ, ವೈವಿಧ್ಯತೆಯಲ್ಲಿ ಏಕತೆ ಭಾರತದ ದೊಡ್ಡ ಶಕ್ತಿ ಮತ್ತು ಅದರ ದೊಡ್ಡ ಪರಿಹಾರ ವಿಷಯದ ಕುರಿತು ಚರ್ಚಾಸ್ಪರ್ಧೆ, ಭಾರತೀಯ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರೂಪಿಸುವಲ್ಲಿ ಪಟೇಲರ ಪಾತ್ರ ಹಾಗೂ ಸರ್ದಾರ್ ಪಟೇಲರು ಮತ್ತು ಸೇವಾ ಮನೋಭಾವ ವಿಷಯಗಳ ಕುರಿತು ಉಪನ್ಯಾಸಗಳು, ಪೋಸ್ಟರ್, ಬ್ಯಾನರ್, ಪಟಗಳ ತಯಾರಿಕೆ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಿಗೆ ಪ್ರಶಸ್ತಿ ಪತ್ರ, ಬಹುಮಾನಗಳನ್ನು ವಿತರಿಸಲಾಯಿತು.

ಪ್ರೊ. ಲಕ್ಷ್ಮಣ ಮುಳಗುಂದ ರಾಷ್ಟ್ರೀಯ ಐಕ್ಯತಾ ದಿನದ ಪ್ರತಿಜ್ಞಾವಿಧಿ ಬೋಧಿಸಿದರು. ಎನ್ಎಸ್ಎಸ್ ಸ್ವಯಂ ಸೇವಕರು ಕಾರ್ಯಕ್ರಮ ನಡೆಸಿಕೊಟ್ಟರು.