ಪ್ರತಿಯೊಬ್ಬರು ಗಿಡಮರ ಬೆಳೆಸಿ

| Published : Jul 18 2024, 01:43 AM IST

ಸಾರಾಂಶ

ಪ್ರಾಚೀನ ಕಾಲದಿಂದಲೂ ದೇಶದಲ್ಲಿ ಮರಗಿಡಗಳಿಗೆ ವಿಶೇಷ ಪ್ರಾಶಸ್ತ್ಯ, ಮನ್ನಣೆ

ಗದಗ: ಗದಗ ನಗರದ ಆದರ್ಶ ಶಿಕ್ಷಣ ಸಂಸ್ಥೆ ವಾಣಿಜ್ಯ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕದಿಂದ ಗದಗ ತಾಲೂಕಿನ ದತ್ತು ಗ್ರಾಮ ಅಂತೂರು ಬೆಂತೂರು ಪ್ರಾಥಮಿಕ ಶಾಲಾ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮ ಜರುಗಿತು.

ಎಸ್‌ಡಿಎಂಸಿ ಅಧ್ಯಕ್ಷ ಬಿ.ಎ. ಮನಕವಾಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸದಸ್ಯ ಆರ್.ಬಿ. ಬಿರಸಲದ ಮಾತನಾಡಿ, ಪ್ರಾಚೀನ ಕಾಲದಿಂದಲೂ ದೇಶದಲ್ಲಿ ಮರಗಿಡಗಳಿಗೆ ವಿಶೇಷ ಪ್ರಾಶಸ್ತ್ಯ, ಮನ್ನಣೆ ನೀಡಲಾಗುತ್ತಿದೆ. ದೇವತೆಗಳು, ನೀರು, ಸಸ್ಯಗಳು, ಅರಣ್ಯ ವೃಕ್ಷಗಳು ನಮ್ಮ ಪ್ರಾರ್ಥನೆ ಮನ್ನಿಸಲಿ. ಅವರ ಅನುಗ್ರಹ ನಮ್ಮನ್ನು ಸದಾ ರಕ್ಷಿಸಲಿ ಎಂದು ಭಾರತದ ಋಷಿಮುನಿಗಳು ಪ್ರಾರ್ಥಿಸುತ್ತಿದ್ದರು. ವೃಕ್ಷಗಳನ್ನು ದೇವರ ಸಮಾನ ಎಂದು ಆರಾಧಿಸುತ್ತಿದ್ದರು. ಇಂದಿಗೂ ಅಶ್ವತ್ಥ ಬನ್ನಿ ಎಕ್ಕ ಇತ್ಯಾದಿ ಗಿಡ ಮರ ಪೂಜಿಸುವುದನ್ನು ನಾವು ಕಾಣಬಹುದು ಅದಕ್ಕಾಗಿ ಪ್ರತಿಯೊಬ್ಬರೂ ಗಿಡಗಳನ್ನು ಬೆಳೆಸಬೇಕು ಎಂದರು.

ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಪ್ರೊ.ಬಿ.ಪಿ. ಜೈನರ ಮಾತನಾಡಿ, ಬರಿ ವರ್ಷಕ್ಕೊಮ್ಮೆ ವಾರ್ಷಿಕ ಶಿಬಿರ ಮಾಡುವ ಮೂಲಕ ದತ್ತು ಗ್ರಾಮಗಳನ್ನು ಸ್ವೀಕರಿಸುವ ಬದಲು ಇಡೀ ವರ್ಷವೂ ಆ ಗ್ರಾಮಕ್ಕೆ ಶಾಲೆಗೆ ಪರಿಸರ ಆರೋಗ್ಯ ಶಿಕ್ಷಣ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಸ್ವಯಂ ಸೇವಕರಿಗೆ ತಿಳಿಸುತ್ತಾ ದಿನೇ ದಿನೇ ಜಗತ್ತಿನಲ್ಲಿ ಜನಸಂಖ್ಯೆ ಹೆಚ್ಚತೊಡಗಿತು. ವ್ಯವಸಾಯಕ್ಕೆ ದನಕರುಗಳ ಮೇವಿಗೆ ಭೂಮಿ ಸಾಲದಾಗುತ್ತಿದೆ. ಕಡಿದ ಮರಕ್ಕೆ ಸಮನಾಗಿ ಮರಗಳನ್ನು ಬೆಳೆಸುವ ಪ್ರವೃತ್ತಿ ಜನರಲ್ಲಿ ಇಲ್ಲದಂತಾಯಿತು. ಹೊಸದಾಗಿ ಸಸಿ ನೆಟ್ಟು ಅರಣ್ಯ ಬೆಳೆಸುವುದರಿಂದ ಪರಿಸರ ಮಾಲಿನ್ಯ ತಡೆಯುವುದರ ಅಗತ್ಯ ಜನರಲ್ಲಿ ಕಂಡುಬಂದಿತು. ಹೊಸ ಸಸಿ ಬೆಳೆಸಿ ಜೀವ ಉಳಿಸಿಕೊಳ್ಳಿ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲೆಯ ದೈಹಿಕ ನಿರ್ದೇಶಕ ಅಂಗಡಿ, ಸಂತೋಷ ಮನಕವಾಡ, ಬಸವರಾಜ ಜೈನರ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಮನೋಜ್ ದಲಬಂಜನ್, ಶಿವಯೋಗಿ ಗಡ್ಡದ್ಮಠ, ಆದರ್ಶ ಅಕ್ಕಿ, ಸ್ವಯಂ ಸೇವಕ ಶಶಾಂಕ, ಸಂಗಮೇಶ, ಮೇಘ, ರಂಜಿತ, ವರ್ಷ, ಆಕಾಶ್, ಫಕೀರಜ್ಜ ಶಾಲಾ ಮಕ್ಕಳು ಉಪಸ್ಥಿತರಿದ್ದರು.