ಪುನರ್ವಸು ಮಳೆ ಅಬ್ಬರ : ಶಿವಮೊಗ್ಗ ನಗರದಲ್ಲಿ ಮೈದುಂಬಿ ಹರಿಯುತ್ತಿರುವ ತುಂಗಾ ನದಿ

| Published : Jul 18 2024, 01:43 AM IST / Updated: Jul 18 2024, 11:40 AM IST

ಪುನರ್ವಸು ಮಳೆ ಅಬ್ಬರ : ಶಿವಮೊಗ್ಗ ನಗರದಲ್ಲಿ ಮೈದುಂಬಿ ಹರಿಯುತ್ತಿರುವ ತುಂಗಾ ನದಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ನಗರದಲ್ಲಿ ಮೈದುಂಬಿ ಹರಿಯುತ್ತಿರುವ ತುಂಗಾ ನದಿಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಬುಧವಾರ ಕೋರ್ಪಲಯ್ಯ ಛತ್ರ ಮಂಟಪದ ಬಳಿ ತುಂಗೆಗೆ ಬಾಗೀನ ಅರ್ಪಿಸಿದರು.

  ಶಿವಮೊಗ್ಗ  : ಜಿಲ್ಲೆಯಲ್ಲಿ ಪುನರ್ವಸು ಮಳೆ ಅಬ್ಬರ ಮುಂದುವರೆದಿದ್ದು, ಹೊಸನಗರ, ತೀರ್ಥಹಳ್ಳಿ, ಸಾಗರದಲ್ಲಿ ಭಾರೀ ವರ್ಷಧಾರೆಯಾಗುತ್ತಿದೆ. ಶೃಂಗೇರಿ, ಆಗುಂಬೆ ಸುತ್ತಮುತ್ತ ಧಾರಕಾರ ಮಳೆ ಸುರಿದಿದ್ದು, ತುಂಗಾ ನದಿ ಉಕ್ಕಿ ಹರಿಯುತ್ತಿದೆ, ಜಲಾಶಯದಿಂದ ಹೊರಬಿಡುತ್ತಿರುವ ನೀರಿನ ಪ್ರಮಾಣವೂ ಕೂಡ ಹೆಚ್ಚಾಗಿದೆ.

ಬುಧವಾರ ಬೆಳಗಿನ ಮಾಹಿತಿಯಂತೆ ಡ್ಯಾಂ ನ ಒಳಹರಿವು 70,497 ಕ್ಯುಸೆಕ್ ಇದ್ದು, ಈಗಾಗಲೇ ಡ್ಯಾಂ ಗರಿಷ್ಠ ಮಟ್ಟ ತಲುಪಿರುವುದರಿಂದ 71,910 ಕ್ಯುಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ. ತುಂಗಾ ಜಲಾಶಯದಿಂದ ಅಧಿಕ ಪ್ರಮಾಣದ ನೀರು ಹೊರ ಬರುತ್ತಿರುವುದರಿಂದ ಶಿವಮೊಗ್ಗ ನಗರದ ಮೂಲಕ ಹಾದು ಹೋಗಿರುವ ತುಂಗಾ ನದಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನದಿಯಂಚಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ.

ಅಪಾಯದ ಮಟ್ಟ ತೋರ್ಪಡಿಸುವ ಕೋರ್ಪಳಯ್ಯನ ಛತ್ರದ ಬಳಿಯಿರುವ ಮಂಟಪ ಈಗಾಗಲೇ ಮುಳುಗಿದ್ದು, ಇದರ ಮೇಲೆ ಸುಮಾರು 3 ಅಡಿಯಷ್ಟು ನೀರು ಹರಿಯುತ್ತಿದೆ.

ಬುಧವಾರವೂ ನಿರಂತವಾಗಿ ಮಳೆ ಸುರಿದ್ದು, ಇದೇ ರೀತಿ ಮಳೆ ಮುಂದುವರೆದು ಜಲಾಶಯದ ಹೊರಹರಿವು ಹೆಚ್ಚಾದರೆ ನಗರದ ನದಿಪಾತ್ರದ ತಗ್ಗು ಪ್ರದೇಶಗಳಲ್ಲಿನ ಜನವಸತಿ ಪ್ರದೇಶಗಳು ಜಲಾವೃತವಾಗುವ ಆತಂಕ ಎದುರಾಗಿದೆ. ಈಗಾಗಲೇ ಮಹಾನಗರ ಪಾಲಿಕೆ ಆಡಳಿತವು ಜಲಾವೃತ ಸಾಧ್ಯತೆಯಿರುವ ಪ್ರದೇಶಗಳ ನಿವಾಸಿಗಳಿಗೆ ಎಚ್ಚರಿಕೆಯ ಸಂದೇಶ ನೀಡಿದೆ. *ಇಂದೂ ರೆಡ್ ಅಲರ್ಟ್: ಜಿಲ್ಲೆಯ ಹಲವಡೆ ಕಳೆದೊಂದು ವಾರದಿಂದ ನಿರಂತವಾಗಿ ಮಳೆ ಸುರಿಯುತ್ತಿದ್ದು, ಹವಾಮಾನ ಇಲಾಖೆಯು ಇನ್ನೂ ಕೆಲ ದಿನಗಳವರೆಗೆ ಮಳೆ ಮುಂದುವರಿಕೆ ಮುನ್ಸೂಚನೆ ನೀಡಿದೆ. ಜು.18ರಂದು ಭಾರೀ ವರ್ಷಧಾರೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದು, ಮತ್ತೇ ರೆಡ್ ಅಲರ್ಟ್ ಘೋಷಣೆ ಮಾಡಿದೆ.

ತೀರ್ಥಹಳ್ಳಿ, ಸಾಗರ, ಹೊಸನಗರ ತಾಲೂಕುಗಳು ಅಕ್ಷರಶಃ ತೊಯ್ದು ತೊಪ್ಪೆಯಾಗಿವೆ. ನದಿಗಳು ಮೈದುಂಬಿ ಹರಿಯುತ್ತಿದ್ದು, ಪ್ರವಾಹ ಭೀತಿ ಸೃಷ್ಟಿಸುವ ಸಾಧ್ಯತೆಗಳು ಎದುರಾಗಿವೆ. ತುಂಗಾ, ಶರಾವತಿ, ವರದಾ, ಮಾಲತಿ, ದಂಡಾವತಿ ನದಿಗಳು ಉಕ್ಕಿ ಹರಿಯುತ್ತಿವೆ. ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಆತಂಕ ಸೃಷ್ಟಿಸಿವೆ.

ಕುಮದ್ವತಿ ನದಿ ನೀರು ಹೆಚ್ಚಳವಾಗಿರುವುದರಿಂದ ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯ ಭರ್ತಿಯಾಗಿದೆ. ಸಾಗರದ ಕೊಲ್ಲಿಬಚ್ಚಲು ಆಣೆಕಟ್ಟು ಗರಿಷ್ಠ ಮಟ್ಟ ತಲುಪಿದೆ. ಲಿಂಗನಮಕ್ಕಿ, ತುಂಗಾ ಹಾಗೂ ಭದ್ರಾ ಜಲಾಶಯಕ್ಕೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದೆ.

*ಹೊಸನಗರದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ

ಹೊಸನಗರ ತಾಲೂಕಿನಲ್ಲಿ ವ್ಯಾಪಕ ಮಳೆ ಹಿನ್ನೆಲೆ ಮಕ್ಕಳ ಸುರಕ್ಷತೆ ದೃಷ್ಠಿಯಿಂದ ಜು.18ರಂದು ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿ ತಹಸೀಲ್ದಾರ್‌ ರಶ್ಮೀ ಹಾಲೇಶ್‌ ಆದೇಶಿಸಿದ್ದಾರೆ. ತುಂಬಿದ ತುಂಗೆಗೆ ಶಾಸಕರಿಂದ ಬಾಗಿನ ಅರ್ಪಣೆ: ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೈದುಂಬಿ ಹರಿಯುತ್ತಿರುವ ತುಂಗಾ ನದಿಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಬುಧವಾರ ಕೋರ್ಪಲಯ್ಯ ಛತ್ರ ಮಂಟಪದ ಬಳಿ ತುಂಗೆಗೆ ಸಾಂಪ್ರದಾಯಿಕವಾಗಿ ಪೂಜೆಸಲ್ಲಿಸಿ, ಬಾಗೀನ ಅರ್ಪಿಸಿದರು.

ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಸರಾಸರಿ 41 ಮಿ.ಮೀ ಮಳೆ ಸುರಿದಿದ್ದು, ಶಿವಮೊಗ್ಗದಲ್ಲಿ 18. 40 ಮಿ.ಮೀ, ಭದ್ರಾವತಿ 16.60 ಮಿ.ಮೀ, ತೀರ್ಥಹಳ್ಳಿಯಲ್ಲಿ 81 ಮಿ.ಮೀ, ಸಾಗರದಲ್ಲಿ 64.20 ಮಿ.ಮೀ, ಶಿಕಾರಿಪುರದಲ್ಲಿ 16.80 ಮಿ.ಮೀ, ಸೊರಬದಲ್ಲಿ 28.30 ಮಿ.ಮೀ, ಹೊಸನಗರದಲ್ಲಿ 66. 70 ಮಿ.ಮೀ. ಮಳೆಯಾಗಿರುವುದು ವರದಿಯಾಗಿದೆ.

ಭಾರೀ ಮಳೆಗೆ ಕುಸಿದ ಮನೆ ಗೋಡೆ

ರಿಪ್ಪನ್‍ಪೇಟೆ: ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸಮೀಪದ ಕೋಡೂರು ಗ್ರಾಮದ ಮಸೀದಿ ರಸ್ತೆಯ ಮಸೀದಿ ಧರ್ಮಗುರುಗಳ ವಾಸದ ಮನೆ ಗೋಡೆ ಕುಸಿತಗೊಂಡಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವಿಷಯ ತಿಳಿಯುತ್ತಿದ್ದಂತೆ ಕೋಡೂರು ಗ್ರಾಪಂ ಅಡಳಿತ ವರ್ಗ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಪರಿಹಾರ ಭರಿಸುವ ಭರವಸೆ ನೀಡಿದ್ದಾರೆ.

ತ್ಯಾಗರ್ತಿ, ಹೊಸಂತೆ ಗ್ರಾಮಗಳಲ್ಲಿ ಮನೆಗೆ ಹಾನಿ

ತ್ಯಾಗರ್ತಿ: ಸಾಗರ ತಾಲೂಕಿನ ತ್ಯಾಗರ್ತಿ ಗ್ರಾಮದ ವಾಸಿಯಾದ ಲಕ್ಷ್ಮಮ್ಮ ವೆಂಕಟೇಶಪ್ಪ ಇವರ ವಾಸದ ಮನೆಯು ಪುನರ್ವಸು ಮಳೆಗೆ ಭಾಗಶಃ ಹಾನಿಯಾಗಿದೆ. ಸ್ಥಳಕ್ಕೆ ಸ್ಥಳೀಯ ಗ್ರಾಮಾಡಳಿತ ಭೇಟಿ ನೀಡಿ ಪರಿಶೀಲಿಸಿದರು.

ಸಾಗರ ತಾಲೂಕಿನ ಆನಂದಪುರ ಹೋಬಳಿಯ ಹೊಸಂತೆ ಗ್ರಾಮದ ಗಂಗಾಧರ ಎಂಬುವವರ ಕೊಟ್ಟಿಗೆಮನೆ ಮಳೆಯಿಂದ ಸಂಪೂರ್ಣ ಹಾನಿಯಾಗಿದ್ದು ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪ್ರಶಾಂತ್, ಉಪಾಧ್ಯಕ್ಷರಾದ ಸುಜಾತ ಲೋಕೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶೇಖರಪ್ಪ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದರು.ಶಿಥಿಲಗೊಂಡ ಸೇತುವೆ ಕೈಪಿಡಿಗೆ ಹಾನಿ

ತೀರ್ಥಹಳ್ಳಿ: ತಾಲೂಕಿನಲ್ಲಿ ಪುನರ್ವಸು ಮಳೆಯ ಅಬ್ಬರ ಕೊಂಚ ಇಳಿಮುಖವಾಗಿದ್ದರೂ ನದಿತೊರೆಗಳಲ್ಲಿ ನೀರಿನ ಮಟ್ಟ ಒಂದೇ ರೀತಿಯಿದೆ. ಗಾಳಿ ಮಳೆಗೆ ಮನೆಗಳು ಕುಸಿಯುತ್ತಿದ್ದು ಕಾಡಿನಲ್ಲಿ ಗಿಡಮರಗಳು ತರಗೆಲೆಗಳಂತೆ ನೆಲಕ್ಕುರುಳುತ್ತಿವೆ. ನಾಲೂರು ಗ್ರಾಪಂ ವ್ಯಾಪ್ತಿಯ ಮಳವಾಡಿಗೆ ಹೋಗುವ ಕಿರಿದಾದ ಸೇತುವೆ ಮಳೆಯಿಂದಾಗಿ ಶಿಥಿಲಗೊಂಡಿದ್ದು ಕೈಪಿಡಿಗೆ ಹಾನಿಯಾಗಿದೆ.

ಕಳೆದ 24 ತಾಸುಗಳ ಅವಧಿಯಲ್ಲಿ ಆಗುಂಬೆಯಲ್ಲಿ 220 ಮಿ.ಮೀ ಮಳೆಯಾಗಿದೆ. ಮೇಗರವಳ್ಳಿಯಲ್ಲಿ 198.4, ಆರಗದಲ್ಲಿ 102, ದೇವಂಗಿ 82, ಅಗ್ರಹಾರ ಹೋಬಳಿಯ ಅರಳಸುರುಳಿಯಲ್ಲಿ 110, ತೀರ್ಥಹಳ್ಳಿ 86.2, ಮಂಡಗದ್ದೆ 76.4, ಮೃಗವಧೆಯಲ್ಲಿ 82.6 ಹಾಗೂ ಹುಂಚದಕಟ್ಟೆಯಲ್ಲಿ ಅತಿ ಕಡಿಮೆ 61.4 ಮಿ,ಮೀ ಮಳೆಯಾಗಿದೆ. ಪಟ್ಟಣದ ಜನವಸತಿ ಪ್ರದೇಶವಾದ ಮಿಲ್‍ಕೇರಿಯಲ್ಲಿ ವಿದ್ಯುತ್ ಮಾರ್ಗದ ಮೇಲೆ ತೆಂಗಿನ ಮರ ಬಿದ್ದು ವಿದ್ಯುತ್ ಕಂಬ ತುಂಡಾಗಿದ್ದು ಸಂಪರ್ಕದಲ್ಲಿ ವ್ಯತ್ಯಯವಾಗಿತ್ತು. ಅದೃಷ್ಟವಶಾತ್ ಮರ ಬಿದ್ದ ವೇಳೆ ರಸ್ತೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೆ ಅಪಾಯ ಸಂಭವಿಲ್ಲಾ.

ಮೇಗರವಳ್ಳಿ ಗ್ರಾಪಂ ವ್ಯಾಪ್ತಿಯ ಹನಸ ಗ್ರಾಮದ ಲೀಲಾವತಿ ಭುಜಂಗ ಶೆಟ್ಟಿಯವರ ವಾಸದ ಮನೆಯ ಗೋಡೆ ಕುಸಿದಿದೆ. ಪಟ್ಟಣ ಸಮೀಪದ ಗಾಂಧಿನಗರದ ಪೂರ್ಣಿಮಾ ಮನೆ ಕುಸಿದಿದ್ದು ಗಂಭೀರ ಹಾನಿ ಸಂಭವಿಸಿದೆ. ಮಂಗಳವಾರ ಸುರಿದ ಮಳೆಗೆ ತೀರ್ಥಮತ್ತೂರು ಗ್ರಾಮದ ಗಣೇಶ ವಾಸದ ಮನೆಯ ಹಿಂಭಾಗ ಕುಸಿದಿದ್ದು ಗ್ರಾಪಂ ಉಪಾಧ್ಯಕ್ಷ ಗಿರೀಶ್ ಹಾಗೂ ಪಿಡಿಒ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.