ಸಾರಾಂಶ
ಹಾಸನದಲ್ಲಿ ಅಧಿಕ ಮಳೆ ಸುರಿಯುತ್ತಿದ್ದು ಸಕಲೇಶಪುರದ ಸಂಕಲಾಪುರ ಮಠದ ಸಂಪರ್ಕ ಸೇತುವೆ ಎತ್ತಿನಹೊಳೆ ನೀರಿನಿಂದ ತುಂಬಿ ಹರಿಯುತ್ತಿದ್ದರೆ, ಪಟ್ಟಣದ ಅರೇಹಳ್ಳಿ ರಸ್ತೆಯ ಸುಧೀರ್ ಎಂಬುವವರ ಮನೆಯ ಹಿಂಭಾಗದ ಗುಡ್ಡ ಕುಸಿದಿದೆ. ಪರಿಣಾಮ ಮನೆ ಅಪಾಯಕ್ಕೆ ಸಿಲುಕಿದೆ. ರಾಷ್ಟ್ರೀಯ ಹೆದ್ದಾರಿ ೭೫ರ ದೊಡ್ಡ ತಪ್ಪಲೆ ಸಮೀಪ ಭೂಕುಸಿತ ಸಂಭವಿಸಿ ಹೆದ್ದಾರಿ ಬಂದ್ ಆಗಿದೆ. ಆಲೂರು, ಸಕಲೇಶಪುರದ ಶಾಲೆಗಳಿಗೆ ಬುಧವಾರ ರಜೆ ಘೋಷಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ೭೫ರ ದೊಡ್ಡ ತಪ್ಪಲೆ ಸಮೀಪ ಘಟನೆ । ಸುಮಾರು ನಾಲ್ಕು ಗಂಟೆಗೂ ಅಧಿಕ ಕಾಲ ಹೆದ್ದಾರಿ ಸಂಚಾರ ಬಂದ್
ಕನ್ನಡಪ್ರಭ ವಾರ್ತೆ ಸಕಲೇಶಪುರಅಧಿಕ ಮಳೆಗೆ ತಾಲೂಕಿನ ಸಂಕಲಾಪುರ ಮಠದ ಸಂಪರ್ಕ ಸೇತುವೆ ಎತ್ತಿನಹೊಳೆ ನೀರಿನಿಂದ ತುಂಬಿ ಹರಿಯುತ್ತಿದ್ದರೆ, ಪಟ್ಟಣದ ಅರೇಹಳ್ಳಿ ರಸ್ತೆಯ ಸುಧೀರ್ ಎಂಬುವವರ ಮನೆಯ ಹಿಂಭಾಗದ ಗುಡ್ಡ ಕುಸಿದಿದೆ. ಪರಿಣಾಮ ಮನೆ ಅಪಾಯಕ್ಕೆ ಸಿಲುಕಿದೆ. ರಾಷ್ಟ್ರೀಯ ಹೆದ್ದಾರಿ ೭೫ರ ದೊಡ್ಡ ತಪ್ಪಲೆ ಸಮೀಪ ಭೂಕುಸಿತ ಸಂಭವಿಸಿದ್ದರಿಂದ ಸುಮಾರು ನಾಲ್ಕು ಗಂಟೆಗೂ ಅಧಿಕ ಕಾಲ ಹೆದ್ದಾರಿ ಸಂಚಾರ ಬಂದ್ ಆಗಿದ್ದು ಸವಾರರು ಪರದಾಟ ನಡೆಸಿದರು. ಸಂಚಾರ ದಟ್ಟಣೆ ನಿರ್ವಹಿಸುವಲ್ಲಿ ಅಧಿಕಾರಿಗಳು ಹರಸಾಹಸಪಟ್ಟರು.
ತಡೆಗೋಡೆ ಕುಸಿತ: ಹೆದ್ದಾರಿ ಕುಸಿಯುವ ಸಾಧ್ಯತೆಸಕಲೇಶಪುರ: ತಾಲೂಕಿನಲ್ಲಿ ಬುಧವಾರ ಸುರಿದ ಬಿರುಗಾಳಿ ಮಳೆಗೆ ಸಾಕಷ್ಟು ಅನಾಹುತ ಸಂಭವಿಸಿದ್ದು ರಾಷ್ಟ್ರೀಯ ಹೆದ್ದಾರಿ ೭೫ರ ಹಲವೆಡೆ ಭಾರಿ ಪ್ರಮಾಣದ ಕುಸಿತ ಸಂಭವಿಸಿದ್ದು ಹೆದ್ದಾರಿ ಸಂಚಾರ ಬಂದ್ ಆಗುವ ಸಾಧ್ಯತೆ ದಟ್ಟವಾಗಿದೆ.ಮಂಗಳವಾರ ಅಲ್ಪ ಪ್ರಮಾಣದಲ್ಲಿ ಹಾನಿಗೊಂಡಿದ್ದ ರಾಷ್ಟ್ರಿಯ ಹೆದ್ದಾರಿ ೭೫ ರಾಟೆಮನೆ ಸಮೀಪದ ಹೆದ್ದಾರಿ ಬುಧವಾರದ ಮಳೆಗೆ ಮತ್ತಷ್ಟು ಹಾನಿಗೊಂಡಿದ್ದು ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ಹಾಕಿದ್ದ ಮಣ್ಣು ಮಳೆ ನೀರಿನಿಂದ ಸಡಿಲಗೊಂಡು ಹೆದ್ದಾರಿಯ ಎರಡು ಬದಿಯ ತಡೆಗೋಡೆ ಕುಸಿದಿರುವ ಪರಿಣಾಮ ಹೆದ್ದಾರಿ ಕುಸಿಯುವ ಸಾಧ್ಯತೆ ದಟ್ಟವಾಗಿದೆ. ಕೊಲ್ಲಹಳ್ಳಿ ಗ್ರಾಮ ಸಮೀಪ ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ಸುಮಾರು ೧೦೦ ಅಡಿ ಎತ್ತರಕ್ಕೆ ತುಂಬಲಾಗಿದ್ದ ಮಣ್ಣು ಮಳೆಯಿಂದ ಕುಸಿಯಲಾರಂಭಿಸಿರುವುದರಿಂದ ಹೆದ್ದಾರಿಯ ಒಂದು ಬದಿ ತಡೆತೋಡೆ ಕುಸಿದಿದೆ. ಇಲ್ಲೂ ಸಹ ಏಕ ಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದಲ್ಲದೆ ಬಾಗೆ ಗ್ರಾಮ ಸಮೀಪ ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ಪ್ರಪಾತಕ್ಕೆ ಮಣ್ಣು ತುಂಬಿ ನಿರ್ಮಿಸಲಾಗಿದ್ದ ಹೆದ್ದಾರಿ ಸಹ ಕುಸಿಯುವ ಹಂತದಲ್ಲಿದೆ. ಪಟ್ಟಣ ಹಾಗೂ ಹೆಬ್ಬಸಾಲೆ, ಹೆನ್ನಲಿ ಗ್ರಾಮ ಸಂಪರ್ಕಿಸುವ ರೈಲ್ವೆ ಸ್ಟೇಷನ್ ಸಮೀಪ ಬೃಹತ್ ಗಾತ್ರದ ಮರ ಉರುಳಿ ಸಂಚಾರ ಬಂದ್ ಆಗಿದ್ದರೆ, ಮಾರನಹಳ್ಳಿ ಗ್ರಾಮದ ಎತ್ತಿನಹೊಳೆ ಚೆಕ್ ಡ್ಯಾಮ್ ಸಮೀಪ ಗ್ರಾಮಸ್ಥರ ಸೌಕರ್ಯಕ್ಕಾಗಿ ನಿರ್ಮಿಸಿದ್ದ ಸೇತುವೆ ಅಧಿಕ ಮಳೆಯಿಂದ ದ್ವಂಸಗೊಂಡಿದೆ. ಪಟ್ಟಣದ ಕುಡಗರಹಳ್ಳಿ ಬಡಾವಣೆಯ ಮರಿಯಮ್ಮ ಎಂಬುವವರ ಮನೆಯ ಕಾಂಪೌಡ್ ಕುಸಿದು ನೆರೆಯ ಮನೆಯ ಮುಸ್ತಾಫ್ ಎಂಬುವವರ ಗರ್ಭಿಣಿ ಪತ್ನಿ ಸಾಹೀರ ಎಂಬುವವರ ಕಾಲಿಗೆ ಪೆಟ್ಟು ಬಿದ್ದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಘಟನೆಯಲ್ಲಿ ಮತ್ತೆರಡು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪಟ್ಟಣದ ಹೊಳೆಮಲ್ಲೇಶ್ವರ ದೇವಸ್ಥಾನದ ಹೊರಪೌಳಿಯ ಮೇಲೆ ಒಣ ಮರಬಿದ್ದು ದೇವಸ್ಥಾನದ ಹೊರಬಾಗ ಜಖಂಗೊಂಡಿದೆ. ಕುಶಾಲನಗರ ಬಡಾವಣೆ ಬಿಲಾಲ್ ಮಸೀದಿ ಸಮೀಪ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿದ್ದು ಮಸೀದಿ ಗೋಡೆ ಹಾನಿಗೊಂಡಿದೆ.ಇಂದು ಸಕಲೇಶಪುರ, ಆಲೂರು ಶಾಲೆಗಳಿಗೆ ರಜೆಹಾಸನ: ಹಾಸನ ಜಿಲ್ಲೆಯಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಹಿನ್ನೆಲೆ ಜು.18ರ ಗುರುವಾರ ಜಿಲ್ಲೆಯ ಎರಡು ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ನಿರಂತವಾಗಿ ಸುರಿಯುತ್ತಿರುವ ಮಳೆ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಸಕಲೇಶಪುರ, ಆಲೂರು ತಾಲೂಕಿನ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ (ಡಿಡಿಪಿಐ) ಎಚ್.ಕೆ.ಪಾಂಡು ಬುಧವಾರ ಆದೇಶಿಸಿದ್ದಾರೆ. ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪಾಂಡು ಆದೇಶದಲ್ಲಿ ತಿಳಿಸಿದ್ದಾರೆ.ಮಲೆನಾಡು ಭಾಗದಲ್ಲಿ ಕಳೆದ ಎರಡು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ಹಲವು ರಸ್ತೆಗಳು ಜಲಾವೃತಗೊಂಡಿವೆ.