ಸಾರಾಂಶ
- ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳಿಗೆ ಕಾನೂನು ಅರಿವು ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಸಮಾಜದಲ್ಲಿನ ಪ್ರತಿಯೊಬ್ಬರಿಗೂ ಕಾನೂನಿನ ಅರಿವಿರಬೇಕು. ನನಗೆ ಕಾನೂನಿನ ಅರಿವಿಲ್ಲ ಎಂದು ಅಪರಾಧ ಮಾಡಿದರೆ ಕ್ಷಮೆ ಇಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಟಿ.ರಘುನಾಥ್‌ಗೌಡ ಹೇಳಿದರು.
ಗುರುವಾರ ತಾಲೂಕಿನ ಅಳಲಗೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲೂಕು ಕಸಾಪ ಆಶ್ರಯದಲ್ಲಿ ಮಕ್ಕಳ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಗು ಹೊಟ್ಟಿ ಯಲ್ಲಿರುವುದರಿಂದ ಹಿಡಿದು ಬೆಳೆದು, ದೊಡ್ಡವನಾಗಿ ಸಾಯುವವರೆಗೂ ಕಾನೂನು ಅನ್ವಯವಾಗುತ್ತದೆ. ಮಕ್ಕಳು ಅತಿ ಯಾದ ಮೊಬೈಲ್ ಗೀಳಿಗೆ ಇಳಿಯದೆ ಉಪಯೋಗಕ್ಕೆ ಎಷ್ಟು ಬೇಕೋ ಅಷ್ಟು ಸಮಯ ಮಾತ್ರ ಒಳ್ಳೆಯ ವಿಚಾರಗಳಿಗೆ ಮೊಬೈಲ್ ಬಳಸಬೇಕು. ವ್ಯಾಟ್ಸಪ್, ಫೇಸ್ ಬುಕ್‌ಗಳಲ್ಲಿ ಹೆಣ್ಣು ಮಕ್ಕಳು , ಮಹಿಳೆಯರು ಫೋಟೋಗಳನ್ನು ವಿನಾ ಕಾರಣ ಹಾಕಬಾರದು. ಅಪ್ರಾಪ್ತರು ವಾಹನ ಚಲಾಯಿಸುವಂತಿಲ್ಲ. ಅಪ್ರಾಪ್ತ ಮಕ್ಕಳಿಗೆ ವಾಹನ ನೀಡಿದರೆ ಅವರ ಪೋಷಕರಿಗೆ ದಂಡ ವಿಧಿಸಲಾಗುವುದು. ಬಾಲ್ಯ ವಿವಾಹ ನಡೆದರೆ ಕೂಡಲೇ ಕಾನೂನು ಸೇವೆಗಳ ಸಮಿತಿ ಅಥವಾ ಸಿಡಿಪಿಒ ಅವರಿಗೆ ಸಂಪರ್ಕಿಸಿ ಮಾಹಿತಿ ನೀಡಬೇಕು. ಮಾಹಿತಿ ನೀಡಿದವರ ಹೆಸರು ಗೌಪ್ಯವಾಗಿಡಲಾಗುವುದು. ಎಲ್ಲರೂ ಕಾನೂನನ್ನು ಸರಿಯಾದ ರೀತಿಯಲ್ಲಿ ಪಾಲನೆ ಮಾಡಿದರೆ ಅಪರಾಧ ನಿಯಂತ್ರಿಸಬಹುದು. ದ್ವಿಚಕ್ರ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ತಮ್ಮ ಜೀವ ರಕ್ಷಣೆಗೆ ಹೆಲ್ಮೆಟ್ ಧರಿಸಬೇಕು. ವಾಹನದ ಇನ್ಸೂರೆನ್ಸ್ ಕಟ್ಟಬೇಕು. ವಾಹನ ದಾಖಲೆಗಳನ್ನು ಕಡ್ಡಾಯವಾಗಿ ಇಟ್ಟುಕೊಳ್ಳಬೇಕು. ಮಕ್ಕಳು ವಿದ್ಯಾರ್ಥಿ ದೆಸೆಯಿಂದಲೇ ಕಾನೂನಿನ ಬಗ್ಗೆ ಅರಿವು ಹೊಂದಿರಬೇಕು ಎಂದರು.ಮುಖ್ಯ ಅತಿಥಿಯಾಗಿದ್ದ ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಕಸಾಪ ಸಾಹಿತ್ಯ ಕೇವಲ ಸಾಹಿತ್ಯಕ್ಕೆ ಸೀಮಿತವಾಗಿರದೆ ಸಾಹಿತ್ಯದ ಜೊತೆಯಲ್ಲಿ ಕಾನೂನು ಅರಿವು ಕಾರ್ಯಕ್ರಮಕ್ಕೂ ಕೈ ಜೋಡಿಸಿದೆ. ಸಾಹಿತ್ಯದ ಜೊತೆಗೆ ಮಕ್ಕಳಿಗೆ ಕಾನೂನಿನ ಬಗ್ಗೆಯೂ ಅರಿವು ಮೂಡಿಸುತ್ತಿದೆ. ಸಮಾಜಕ್ಕೆ ಕಾನೂನು ಬಹಳ ಮುಖ್ಯ. ಕಾನೂನು ಇರದಿದ್ದರೆ ನಾವು ಶಾಂತಿ, ನೆಮ್ಮದಿಯಿಂದ ಬದಕಲು ಸಾಧ್ಯವಿಲ್ಲ ಎಂದರು.ವಕೀಲ ಎಸ್.ಎಸ್.ಸಂತೋಷ್‌ಕುಮಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲ ತಾಣಗಳ ಮೂಲಕ ಜನರನ್ನು ಯಾಮಾರಿಸಿ ಹಣ ದೋಚುವ ಕೃತ್ಯಗಳು ಹೆಚ್ಚಾಗುತ್ತಿವೆ. ತಮ್ಮ ಉಪಯೋಗಕ್ಕೆ ಬೇಕಾದಷ್ಟು ಮಾತ್ರ ಜಾಲ ತಾಣಗಳನ್ನು ಬಳಸಿಕೊಳ್ಳಿ. ಅಪ್ರಾಪ್ತರು ಪ್ರೀತಿ, ಪ್ರೇಮದ ಮೋಹದ ಬಲೆಗೆ ಬಿದ್ದು, ತನ್ನ ಅಪ್ರಾಪ್ತ ವಯಸ್ಸಿನಲ್ಲಿಯೇ ಗರ್ಭಧಾರಣೆ ಯಾಗುತ್ತಿರುವ ಪ್ರಕರಣ ಕಾಣುತ್ತಿದ್ದೇವೆ. ಹೆಣ್ಣು ಮಕ್ಕಳು ಅತ್ಯಂತ ಜಾಗರೂಕರಾಗಿರಬೇಕು. ಜೀವನದಲ್ಲಿ ಒಳ್ಳೆಯ ಗುರಿ ಇಟ್ಟುಕೊಂಡು, ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು. ಹಿರಿಯ ಸಿವಿಲ್ ನ್ಯಾಯಧೀಶ ಕೆ.ಟಿ.ರಘುನಾಥ್‌ಗೌಡ ಮಕ್ಕಳೊಂದಿಗೆ ಕಾನೂನಿನ ಬಗ್ಗೆ ಸಂವಾದ ನಡೆಸಿದರು. ಸಭೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ಕಾರ್ತಿಕೇಯನ್, ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲೆ ಪೂರ್ಣಿಮಾ, ಶಿಕ್ಷಕ ಮಹಾತ್ಮಾಗಾಂಧಿ, ವಸತಿ ಶಾಲೆ ಮಕ್ಕಳಿದ್ದರು.