ಮಾದಕ ವಸ್ತು ಬಳಕೆ, ಸಾಗಾಟ ತಡೆಗೆ ಸರ್ವರ ಸಹಕಾರವಿರಲಿ-ಚನ್ನಯ್ಯ ದೇವೂರ

| Published : Jun 23 2025, 11:51 PM IST

ಮಾದಕ ವಸ್ತು ಬಳಕೆ, ಸಾಗಾಟ ತಡೆಗೆ ಸರ್ವರ ಸಹಕಾರವಿರಲಿ-ಚನ್ನಯ್ಯ ದೇವೂರ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದಲ್ಲಿ ಮಾದಕ ವಸ್ತುಗಳ ಬಳಕೆ ಮತ್ತು ಅಕ್ರಮ ಸಾಗಾಟ ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆ ಜತೆಗೆ ಸಾರ್ವಜನಿಕರು, ಪೋಷಕರು ಸೇರಿದಂತೆ ಇಂದಿನ ಯುವಜನತೆಯ ಸಹಕಾರವು ಅತ್ಯವಶ್ಯಕವಾಗಿದೆ ಎಂದು ಪಿಎಸ್‌ಐ ಚನ್ನಯ್ಯ ದೇವೂರ ತಿಳಿಸಿದರು.

ಶಿರಹಟ್ಟಿ:ಸಮಾಜದಲ್ಲಿ ಮಾದಕ ವಸ್ತುಗಳ ಬಳಕೆ ಮತ್ತು ಅಕ್ರಮ ಸಾಗಾಟ ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆ ಜತೆಗೆ ಸಾರ್ವಜನಿಕರು, ಪೋಷಕರು ಸೇರಿದಂತೆ ಇಂದಿನ ಯುವಜನತೆಯ ಸಹಕಾರವು ಅತ್ಯವಶ್ಯಕವಾಗಿದೆ ಎಂದು ಪಿಎಸ್‌ಐ ಚನ್ನಯ್ಯ ದೇವೂರ ತಿಳಿಸಿದರು. ಪಟ್ಟಣದ ಬಿ.ಎಫ್. ಪೂಜಾರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗದಗ ಜಿಲ್ಲಾ ಪೊಲೀಸ್, ಶಿರಹಟ್ಟಿ ಪೊಲೀಸ್ ಠಾಣೆ ವತಿಯಿಂದ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ವಿರೋಧಿ ದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಭವಿಷ್ಯತ್ತಿನ ಉತ್ತಮ ಪ್ರಜೆಗಳಾಗಲು ಹಾಗೂ ಉತ್ತಮ ಸಮಾಜ ನಿರ್ಮಿಸಲು ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ಹರಿಸಬೇಕು. ಯಾವುದೇ ಕಾರಣಕ್ಕೂ ಮಾದಕ ವಸ್ತುಗಳ ವ್ಯಸನಿಗಳಾಗಬಾರದು. ಕುಟುಂಬದ ಮೇಲೆ ಗಂಭೀರ ಪರಿಣಾಮ ಬೀರುವುದರಿಂದ ಮಾದಕ ವಸ್ತುಗಳಿಂದ ಜಾಗೃತರಾಗಿರಬೇಕು. ಸ್ವಸ್ಥ ಸಮಾಜದಲ್ಲಿ ಆರೋಗ್ಯವಂತ ಜೀವನ ನಡೆಸಬೇಕು ಎಂದು ಕರೆ ನೀಡಿದರು. ಮಾದಕ ವಸ್ತುಗಳ ದುಶ್ಚಟಗಳಿಗೆ ಇತ್ತೀಚಿನ ವರ್ಷಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಹೆಚ್ಚು ಬಲಿಯಾಗುತ್ತಿದ್ದಾರೆ. ಮಾದಕ ವಸ್ತುಗಳ ಬಳಕೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರೊಂದಿಗೆ ಸಮಾಜದಲ್ಲಿ ಅಹಿತಕರ ಘಟನೆಗಳು ನಡೆಯಲು ಕಾರಣವಾಗುತ್ತದೆ ಎಂದರು. ಪ್ರಸ್ತುತ ಸಮಾಜದಲ್ಲಿ ಯುವ ಸಮುದಾಯ ಮಾದಕ ವಸ್ತುಗಳ ಸೇವನೆ ದಾಸರಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮಾದಕ ವಸ್ತುಗಳ ಸೇವನೆ ವ್ಯಕ್ತಿಯನ್ನು ಕುಟುಂಬ ತ್ಯಜಿಸುತ್ತದೆ. ಅಲ್ಲದೇ ಸಮಾಜ ಕೂಡ ಆತನನ್ನು ಧಿಕ್ಕರಿಸುತ್ತದೆ. ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗದೇ ಸಮಾಜಕ್ಕೆ ಒಳಿತನ್ನು ಬಯಸುವ ವ್ಯಕ್ತಿಗಳಾಗಿ ಹೊರ ಹೊಮ್ಮಬೇಕು ಎಂದು ಕರೆ ನೀಡಿದರು.ಮಾದಕ ವಸ್ತುಗಳ ಉಪಯೋಗ ಸಾಮಾನ್ಯವಾಗಿ ಪ್ರಪಂಚದಾದ್ಯಂತ ಕಂಡು ಬರುವ ಒಂದು ದೊಡ್ಡ ಪಿಡುಗು. ಇದು ಗಂಡು-ಹೆಣ್ಣು ಬಡವ- ಶ್ರೀಮಂತ ಎನ್ನುವ ಯಾವುದೇ ಭೇದ-ಭಾವವಿಲ್ಲದೆ ಎಲ್ಲೆಡೆಯೂ ಕಂಡು ಬರುವ ತೊಂದರಯಾಗಿದೆ. ಮಾದಕ ವಸ್ತುಗಳ ಚಟವು ವ್ಯಕ್ತಿಯ ಮೆದುಳಿನ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಯಾವೊಬ್ಬ ವಿದ್ಯಾರ್ಥಿಗಳು ಕೂಡ ದುಶ್ಚಟಕ್ಕೆ ಬಲಿಯಾಗಬಾರದು ಎಂದು ಸಲಹೆ ನೀಡಿದರು. ಇತ್ತಿತ್ತಲಾಗಿ ಮಾದಕ ವಸ್ತುಗಳ ವ್ಯಸನ ಮಾನಸಿಕ ಕಾಯಿಲೆಯಾದಂತಾಗಿದ್ದು, ಇದರ ವಿರುದ್ಧ ಯುವಜನರಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ. ಯುವ ಜನತೆ ಫ್ಯಾಷನ್ ಹೆಸರಿನಲ್ಲಿ ದುಶ್ಚಟಗಳಿಗೆ ಬಲಿಯಾಗಬಾರದು. ಇದರಿಂದ ಮಾನಸಿಕ, ದೈಹಿಕ ಹಾಗೂ ಸಾಮಾಜಿಕವಾಗಿ ವ್ಯಕ್ತಿಯ ಮೇಲೆ ದುಷ್ಟರಿಣಾಮಗಳು ಉಂಟಾಗುತ್ತವೆ. ಮದ್ಯ, ತಂಬಾಕು, ಬೀಡಿ, ಸಿಗರೇಟ್, ಗುಟ್ಕಾ, ಗಾಂಜಾ, ಅಫೀಮು, ನಿದ್ರಾಜನಕ ಮಾತ್ರೆಗಳು ಮಾದಕ ವಸ್ತುಗಳಾಗಿವೆ. ಯುವಕರು, ವಿದ್ಯಾರ್ಥಿಗಳು ಇಂಥ ಚಟಗಳಿಂದ ದೂರವಿರಬೇಕು ಎಂದರು. ಕಾಲೇಜ್‌ ಪ್ರಾಚಾರ್ಯ ಬಿ.ಜಿ. ಗಿರಿತಮ್ಮಣ್ಣವರ ಮಾತನಾಡಿ, ಮಾದಕ ವಸ್ತುಗಳ ವ್ಯಸನ ಯುವ ಜನತೆ ಮೇಲೆ ಪರಿಣಾಮ ಬೀರುತ್ತಿದೆ. ಸಂತೋಷ, ಗೆಳೆಯರ ಒತ್ತಡ, ನೋವು ನಿವಾರಣೆ ನೆಪ, ಆಧುನಿಕ ಜೀವನ ಶೈಲಿ ಅನುಕರಣೆ ಮಾಡಲು ವಿದ್ಯಾರ್ಥಿಗಳು ವ್ಯಸನಕ್ಕೆ ತುತ್ತಾಗುತ್ತಾರೆ. ಇದರಿಂದ ಹಿಂಸಾತ್ಮಕ ನಡುವಳಿಕೆ, ಕಾನೂನು ಬಾಹೀರ ಕೃತ್ಯಗಳು, ರಸ್ತೆ ಅಪಘಾತಗಳು ಸಂಭವಿಸುತ್ತವೆ. ವಿದ್ಯಾರ್ಥಿಗಳು ಇಂಥ ವಸ್ತುಗಳಿಂದ ದೂರವಿರಬೇಕು ಎಂದು ತಿಳಿಸಿದರು.ಮಾದಕ ವಸ್ತುಗಳ ಸೇವನೆಗೆ ಒಮ್ಮೆ ಒಳಗಾದರೆ ಅವುಗಳಿಂದ ಹೊರಬರುವುದು ಕಷ್ಟ. ಇದು ಮನುಷ್ಯನ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರಲಿದೆ. ಮದ್ಯಪಾನ, ಧೂಮಪಾನದಂತಹ ದುಶ್ಚಟಗಳಿಗೆ ಹದಿಹರೆಯದ ವಯಸ್ಸಿನವರು ಒಳಗಾಗುತ್ತಿರುವುದು ನೋವಿನ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ನಂತರ ಪಿಎಸ್‌ಐ ಚನ್ನಯ್ಯ ದೇವೂರ ಅವರು ಪಟ್ಟಣದ ಬಸ್ ನಿಲ್ದಾಣ, ಔಷಧ ಅಂಗಡಿ, ಜನನಿಬಿಡ ಸ್ಥಳಗಳಲ್ಲಿ ಈ ಕುರಿತು ಜಾಗೃತಿ ಮೂಡಿಸಿದರು. ಪೊಲೀಸ್ ಇಲಾಖೆಯ ಲೋಕೇಶ ಲಮಾಣಿ ಹಾಗೂ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.