ಸಾರಾಂಶ
ಕನ್ನಡಪ್ರಭ ವಾರ್ತೆ ಜಮಖಂಡಿ
ನಾಡಹಬ್ಬ ದಸರಾ ಹಬ್ಬವನ್ನು ಭಕ್ತರ ನೇತೃತ್ವದಲ್ಲಿ ಅದ್ಧೂರಿಯಾಗಿ ಆಚರಿಸುವ ಮೂಲಕ ಪ್ರತಿಯೊಬ್ಬರೂ ತನು, ಮನ, ಧನದಿಂದ ಸಹಕಾರ ನೀಡುವ ಮೂಲಕ ಮಾದರಿಯಾಗಿ ಆಚರಿಸೋಣ ಎಂದು ಬಿಡಿಸಿಸಿ ಬ್ಯಾಂಕ ನಿರ್ದೇಶಕ ಏಗಪ್ಪ ಸವದಿ ಹೇಳಿದರು.ನಗರದ ಮುತ್ತಿನಕಂತಿ ಹಿರೇಮಠದ ಸಭಾಭವನದಲ್ಲಿ ಅದ್ಧೂರಿ ನಾಡಹಬ್ಬ ದಸರಾ ಆಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿ ಆಚರಣೆಯಲ್ಲಿ ಹಬ್ಬಗಳ ಆಚರಣೆಗೆ ವಿಶೇಷ ಸ್ಥಾನವಿದೆ. ನಗರದಲ್ಲಿ ನಾಡಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ಮೂಲಕ ಧಾರ್ಮಿಕ ಸೇವೆಗಳಿಗೆ ಹೆಚ್ಚಿನ ಆಧ್ಯತೆ ನೀಡಬೇಕು ಎಂದು ಹೇಳಿದರು.
ಓಲೇಮಠ ಪ.ಪೂ.ಆನಂದ ದೇವರು ಸಾನ್ನಿಧ್ಯ ವಹಿಸಿ ಮಾತನಾಡಿ, ಮುತ್ತಿನಕಂತಿ ಮಠದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮ ವಿಶೇಷವಾಗಿರುತ್ತವೆ. ನಾನು ಕೂಡ ಸೇವಕನಾಗಿ ಶ್ರೀಮಠದ ಭಕ್ತಿಯಲ್ಲಿ ಸೇವೆ ಮಾಡಲು ಸಿದ್ಧನಾಗಿದ್ದು, 9 ದಿನದ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಭಾಗವಹಿ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದು ಹೇಳಿದರು.ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ‍್ಯರು ಮಾತನಾಡಿ, 10 ವರ್ಷಗಳಿಂದ ಶ್ರೀಮಠದಲ್ಲಿ ದಸರಾಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಭಕ್ತರ ವಂತಿಕೆ, ಭಕ್ತರ ಸೇವೆಯಲ್ಲಿ ಸತತವಾಗಿ 9 ದಿನಗಳವರೆಗೆ ಪುರಾಣ, ಉಡಿ ತುಂಬುವುದು, ಪ್ರವಚನ ಸಹಿತ ಧಾರ್ಮಿಕ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿವೆ. ನಾಡಹಬ್ಬ ಮೈಸೂರಿನಲ್ಲಿ ಅದ್ಧೂರಿಯಾಗಿ ಆಚರಣೆಯಾಗುತ್ತಿದ್ದು, ಅದೇ ಮಾದರಿಯಲ್ಲಿ ಶ್ರೀಮಠದಿಂದ ಭಕ್ತರ ನೇತೃತ್ವದಲ್ಲಿ ಆಚರಣೆ ಮಾಡಲಾಗುತ್ತಿದೆ. ಅದ್ಧೂರಿ, ಸಂಭ್ರಮದ ಆಚರಣೆಗೆ ಭಕ್ತರು ಸಮ್ಮತಿ ಸೂಚಿಸಿರುವ ಹಿನ್ನೆಲೆಯಲ್ಲಿ ವೈಭವದ ನಾಡಹಬ್ಬ ದಸರಾ ಆಚರಣೆಗೆ ಸಕಲ ಸಿದ್ಧತೆ ಆರಂಭಿಸಲಾಗುವುದು ಎಂದರು. ವೇದಿಕೆಯಲ್ಲಿ ಜಗದೆಲ್ಲಮ್ಮಾ ದೇವಸ್ಥಾನ ಅರ್ಚಕ ಪೂಜಾರಿ ಹಲವರು ಇದ್ದರು.