ಸಂವಿಧಾನ ಮಹತ್ವ ಎಲ್ಲರೂ ತಿಳಿದಿರಬೇಕು: ಶ್ರೀನಿವಾಸ್‌

| Published : Feb 09 2024, 01:46 AM IST

ಸಂವಿಧಾನ ಮಹತ್ವ ಎಲ್ಲರೂ ತಿಳಿದಿರಬೇಕು: ಶ್ರೀನಿವಾಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಯೊಬ್ಬ ಭಾರತೀಯನೂ ಸಂವಿಧಾನದಲ್ಲಿ ಅಡಕವಾಗಿರುವ ಹಕ್ಕು ಮತ್ತು ಕರ್ತವ್ಯಗಳ ಮಹತ್ವದ ಬಗ್ಗೆ ತಿಳುವಳಿಕೆ ಹೊಂದಿರಬೇಕು ಎಂದು ಗುಬ್ಬಿ ಶಾಸಕ ಎಸ್. ಶ್ರೀನಿವಾಸ್ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಪ್ರತಿಯೊಬ್ಬ ಭಾರತೀಯನೂ ಸಂವಿಧಾನದಲ್ಲಿ ಅಡಕವಾಗಿರುವ ಹಕ್ಕು ಮತ್ತು ಕರ್ತವ್ಯಗಳ ಮಹತ್ವದ ಬಗ್ಗೆ ತಿಳುವಳಿಕೆ ಹೊಂದಿರಬೇಕು ಎಂದು ಗುಬ್ಬಿ ಶಾಸಕ ಎಸ್. ಶ್ರೀನಿವಾಸ್ ಕರೆ ನೀಡಿದರು.

ಗುಬ್ಬಿ ಪಟ್ಟಣ ಪಂಚಾಯತಿ ಬಳಿ ಸಂವಿಧಾನ ಜಾಗೃತಿ ಜಾಥಾ ಸ್ತಬ್ಧಚಿತ್ರ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಂವಿಧಾನ ರಚನೆಯಾಗಿ 75 ವರ್ಷಗಳ ಸಂದಿರುವ ಸವಿ ನೆನಪಿಗಾಗಿ ರಾಜ್ಯದಾದ್ಯಂತ ಈ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರಿಗೂ ಸಂವಿಧಾನದ ಆಶಯಗಳ ಬಗ್ಗೆ ತಿಳುವಳಿಕೆ ನೀಡಲು ಹಮ್ಮಿಕೊಂಡಿರುವ ಈ ಜಾಥಾ ಉತ್ತಮ ಕಾರ್ಯಕ್ರಮವಾಗಿದೆ. ತಾಲೂಕಿನ ಎಲ್ಲಾ ಗ್ರಾಮಪಂಚಾಯತಿಗಳಲ್ಲಿ ಈ ಸ್ತಬ್ಧಚಿತ್ರ ವಾಹನ ಸಂಚರಿಸಿ ಸಂವಿಧಾನದ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಉಪನ್ಯಾಸಕ ಯತೀಶ್ ಕುಮಾರ್ ಸಂವಿಧಾನ ಪೀಠಿಕೆ ಬೋಧಿಸಿದರು. ಪಟ್ಟಣದ ಮಹಿಳೆಯರು ಸಂವಿಧಾನ ಜಾಗೃತಿ ಜಾಥ ಸ್ತಬ್ಧಚಿತ್ರ ವಾಹನವನ್ನು ಪೂರ್ಣ ಕುಂಭದಿಂದ ಬರಮಾಡಿಕೊಂಡು ಮುಂದಿನ ಗ್ರಾಮಪಂಚಾಯತಿಗೆ ಬೀಳ್ಕೊಟ್ಟರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಆರತಿ, ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ವಿ. ಪರಮೇಶ್ ಕುಮಾರ್‌, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮಂಜುಳಾದೇವಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವೀಣಾ ಬಿ.ಎಸ್. ಹಾಗೂ ಸ್ಥಳೀಯ ಜನಪ್ರತಿನಿಧಿಗಳು, ದಲಿತ ಮುಖಂಡರು, ವಿದ್ಯಾರ್ಥಿಗಳು, ಮಾಜಿ ಸೈನಿಕರು ಮತ್ತು ತಾಲೂಕು ಮಟ್ಟದ ಅಧಿಕಾರಿ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಅಂಗವಾಗಿ ಗುಬ್ಬಿ ಪಟ್ಟಣದ ಶ್ರೀ ಚನ್ನಬಸವೇಶ್ವರ ದೇವಸ್ಥಾನದ ಆವರಣದಲ್ಲಿ ವೀರಗಾಸೆ ಕುಣಿತ, ಸನಾದಿ ವಾದ್ಯ, ತಮಟೆ ವಾದ್ಯ, ಚೌಡಿಕೆ ವಾದ್ಯ, ಹರೆ ವಾದ್ಯ, ಕಹಳೆ ವಾದನ, ಡೊಳ್ಳುಕುಣಿತ, ಸೈಕಲ್ ಜಾಥ, ವಿದ್ಯಾರ್ಥಿಗಳಿಂದ ವಿವಿಧ ವೇಷಭೂಷಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ನಂತರ ಜಿ. ಹೊಸಹಳ್ಳಿ, ಕುನ್ನಾಲ, ಎಸ್.ಕೊಡಿಗೇಹಳ್ಳಿ, ಚೆಂಗಾವಿ, ಮಾವಿನಹಳ್ಳಿ, ಇಡಗೂರು ಗ್ರಾಮ ಪಂಚಾಯತಿಗಳಿಗೆ ತೆರಳಿದ ಸ್ತಬ್ಧಚಿತ್ರ ವಾಹನದ ಮೂಲಕ ಸಂವಿಧಾನದ ಪರಿಕಲ್ಪನೆಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.ಸಂವಿಧಾನದಿಂದ ಸಮಾನತೆ

ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ನೇತೃತ್ವದಲ್ಲಿ ರಚಿತವಾಗಿರುವ ನಮ್ಮ ಭಾರತ ಸಂವಿಧಾನವು ಎಲ್ಲರೂ ಸಮಾನತೆಯಿಂದ ಬದುಕಲು ಅವಕಾಶ ನೀಡಿದೆ ಎಂದು ಕೊರಟಗೆರೆ ತಾಲೂಕು ಬಿ.ಡಿ. ಪುರ ಗ್ರಾಮಪಂಚಾಯತಿ ಸದಸ್ಯ ಸಿದ್ಧಲಿಂಗಯ್ಯ ಅವರು ತಿಳಿಸಿದರು.

ಬಿ.ಡಿ. ಪುರ ಗ್ರಾಮಪಂಚಾಯತಿಯಲ್ಲಿ ಸಂವಿಧಾನ ಜಾಥಾ ಸ್ತಬ್ಧಚಿತ್ರ ವಾಹನಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಸಂವಿಧಾನವು ನಮಗೆ ಶಿಕ್ಷಣ, ಧಾರ್ಮಿಕ, ಸ್ವಾತಂತ್ರ್ಯ ಸಮಾನತೆ, ಹಕ್ಕುಗಳನ್ನು ನೀಡಿದ್ದು, ಹಕ್ಕುಗಳ ಬಗ್ಗೆ ನಾವೆಲ್ಲ ಅರಿತು ಸಮಾಜದಲ್ಲಿ ಬದುಕಿದಾಗ ಮಾತ್ರ ಸಂವಿಧಾನಕ್ಕೆ ಗೌರವ ನೀಡಿದಂತಾಗುತ್ತದೆ ಎಂದು ತಿಳಿಸಿದರು.

ಬಿ.ಡಿ.ಪುರ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಭಾರತಿ ಸಂವಿಧಾನ ಪೀಠಿಕೆಯನ್ನು ಬೋಧಿಸಿದರು. ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಮಂಜುನಾಥ್ ಸಂವಿಧಾನದ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಗ್ರಮಪಂಚಾಯತಿ ಅಧ್ಯಕ್ಷ ಜಗದೀಶ್, ಅಭಿವೃದ್ಧಿ ಅಧಿಕಾರಿ ಶಿವಕುಮಾರ್‌, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಯಮುನ, ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು, ಶಾಲಾ ಮಕ್ಕಳು, ಜನಪ್ರತಿನಿಧಿಗಳು ಹಾಜರಿದ್ದರು.

ಬಿ.ಡಿ. ಪುರ ಸರ್ಕಾರಿ ಶಾಲೆಯ ಕಿರಣ್ ಕುಮಾರ್‌ ಮತ್ತು ನರಸಿಂಹರಾಜು ಎಂಬ ೮ ಮತ್ತು ೯ನೇ ತರಗತಿ ವಿದ್ಯಾರ್ಥಿಗಳಿಂದ ವೀರಗಾಸೆ, ತಮಟೆ, ಕೀಲು ಕುದುರೆ ಪ್ರದರ್ಶನ; ಮಕ್ಕಳಿಂದ ಅಂಬೇಡ್ಕರ್‌ ಹಾಗೂ ಮಹಾತ್ಮಗಾಂಧೀಜಿ ವೇಷಭೂಷಣ, ದಲಿತ ಮುಖಂಡರಿಂದ ಕ್ರಾಂತಿಗೀತೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಗ್ರಾಮ ಪಂಚಾಯಿತಿ ವತಿಯಿಂದ ಶಾಲಾ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ಇದಕ್ಕೂ ಮುನ್ನ ತಾಲ್ಲೂಕಿನ ಅರಸಾಪುರ ಗ್ರಾಮ ಪಂಚಾಯತಿಯಲ್ಲಿ ಸಂಚರಿಸಿದ ಸ್ತಬ್ಧಚಿತ್ರ ವಾಹನವನ್ನು ಗ್ರಾಮದ ಮಹಿಳೆಯರು ಪೂರ್ಣಕುಂಭಗಳಿಂದ ಸ್ವಾಗತಿಸಿ ಸಂಭ್ರಮದಿಂದ ಬರಮಾಡಿಕೊಂಡರು. ಅರಸಾಪುರ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕಿ ಸರೋಜಮ್ಮ ಅವರು ಸಂವಿಧಾನ ಪೀಠಿಕೆಯನ್ನು ವಾಚಿಸಿದರು. ಪಂಚಾಯತಿ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷೆ ಸಿದ್ದಗಂಗಮ್ಮ, ಗ್ರಾಮ ಪಂಚಾಯಿತಿ ಸದಸ್ಯರು, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪೃಥ್ವಿಬಾ, ವಿದ್ಯಾರ್ಥಿಗಳು, ಸಾರ್ವಜನಿಕರು, ಗ್ರಾಮದ ಮುಖಂಡರು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ನಂತರ ದೊಡ್ಡಸಾಗ್ಗೆರೆ, ಮಾವತ್ತೂರು, ತೀತ, ಅಂಚೆಹಳ್ಳಿ ಗ್ರಾಮ ಪಂಚಾಯತಿಗಳಿಗೆ ತೆರಳಿದ ಸ್ತಬ್ಧಚಿತ್ರ ವಾಹನದ ಮೂಲಕ ಸಂವಿಧಾನದ ಆಶಯಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.