ಆಸಕ್ತಿಯಿಂದ ವಿದ್ಯಾಬ್ಯಾಸ ಮಾಡಿ

| Published : Feb 09 2024, 01:46 AM IST

ಸಾರಾಂಶ

ಎಸ್ಎಸ್ಎಲ್‌ಸಿ ಪರೀಕ್ಷೆ ಪ್ರತಿ ವಿದ್ಯಾರ್ಥಿಯ ಜೀವನದ ಪ್ರಾರಂಭಿಕ ಹಂತ, ಅದನ್ನು ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಗೋಕಾಕ

ವಿದ್ಯಾರ್ಥಿಗಳು ವಿದ್ಯೆಯನ್ನು ಆಸ್ತಕಿಯಿಂದ ಪಡೆದರೆ ಜೀವನದಲ್ಲಿ ಸುಖ ತಾನಾಗಿಯೇ ಬರುತ್ತದೆ ಎಂದು ತಹಸೀಲ್ದಾರ ಡಾ.ಮೋಹನ ಭಸ್ಮೆ ಹೇಳಿದರು. ಗುರುವಾರ ನಗರದಲ್ಲಿ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದವರು ಗೋಕಾಕ ವಲಯದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಒಂದು ದಿನದ ಚೈತನ್ಯ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಸ್ಎಸ್ಎಲ್‌ಸಿ ಪರೀಕ್ಷೆ ಪ್ರತಿ ವಿದ್ಯಾರ್ಥಿಯ ಜೀವನದ ಪ್ರಾರಂಭಿಕ ಹಂತ, ಅದನ್ನು ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಶರೀರ ಮತ್ತು ಆತ್ಮ ಎರಡು ಏಕಾಗ್ರತೆಯಿಂದ ಇಟ್ಟುಕೊಂಡು ಪಾಠ ಕಲಿತರೆ ಮಾತ್ರ ವಿದ್ಯಾರ್ಥಿಗಳು ಒಳ್ಳೆಯ ಭವಿಷ್ಯ ರೂಪಿಕೊಳ್ಳಬಹುದು ಎಂದರು.

ಜೀವನದಲ್ಲಿ ಕಷ್ಟ ಕಾರ್ಪಣ್ಯಗಳು ಬಂದ ಹಾಗೆ ವಿದ್ಯಾರ್ಥಿ ಜೀವನದಲ್ಲಿ ಸಹ ಕಷ್ಟಗಳು ಬರುತ್ತವೆ. ಅದನ್ನು ಸಮರ್ಥವಾಗಿ ಎದುರಿಸಬೇಕು. ಮಾನಸಿಕವಾಗಿ ಸ್ಥೈರ್ಯ ತುಂಬಿಕೊಂಡು ವಿದ್ಯಾರ್ಥಿಗಳು ಓದಬೇಕು. ಕಾರ್ಯಾಗಾರದಲ್ಲಿ ಹೇಳಿದ ಪಾಠಗಳನ್ನು ತಮ್ಮ ಜೀವನದಲ್ಲಿಯೂ ಸಹ ಅಳವಡಿಸಿಕೊಂಡರೆ 100ಕ್ಕೆ 100 ರಷ್ಟು ಫಲಿತಾಂಶ ತರಲು ಸಾಧ್ಯ ಎಂದ ಅವರು ಸಮಾಜ ಚನ್ನಾಗಿ ಇರಬೇಕಾದರೆ ತಾವು ಮೊದಲು ಚನ್ನಾಗಿ ಇರಬೇಕು ಎಂದು ಹೇಳಿದರು.

ಈ ವೇಳೆ ಧಾರವಾಡ ಮತ್ತು ಹುಬ್ಬಳ್ಳಿಯಿಂದ ಆಗಮಿಸಿದ್ದ ಮಂಜುನಾಥ್ ಗಾಳಿಮರಡಿ ಹಾಗೂ ಪ್ರಶಾಂತ್ ಪಾಟೀಲ ಅವರು ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಕೌಶಲ್ಯಗಳ ಬಗ್ಗೆ ತರಬೇತಿ ನೀಡಿದರು. ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ, ನಗರಸಭೆ ಸದಸ್ಯ ಜಯಾನಂದ ಹುಣ್ಣಚ್ಯಾಳಿ ಇದ್ದರು.