ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಒಂದಾಗಿ ಕಾರ್ಯನಿರ್ವಹಿಸಬೇಕು. ಪಕ್ಷದ ಮೂಲಭೂತ ಮೌಲ್ಯಗಳು ಹಾಗೂ ಗುರಿಯನ್ನು ಸಾಧಿಸಲು ವ್ಯಕ್ತಿಗತ ಭಿನ್ನಾಭಿಪ್ರಾಯಗಳನ್ನು ಬಿಟ್ಟು, ಸಾಮೂಹಿಕ ನಾಯಕತ್ವದೊಂದಿಗೆ ಶ್ರಮಿಸಬೇಕು ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಪರಮ ಗಂಗಾಧರ್ ಹೇಳಿದರು.ತಾಲೂಕಿನ ಶ್ರವಣಬೆಳಗೊಳದಲ್ಲಿ ಬಿಜೆಪಿ ಘರ್ ವಾಪಸಿ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ಯಶಸ್ಸು ಒಬ್ಬೊಬ್ಬ ಕಾರ್ಯಕರ್ತರ ಬದ್ಧತೆ, ಶ್ರಮ ಹಾಗೂ ಸಹಕಾರದ ಮೇಲೆ ಆಧಾರಿತವಾಗಿದೆ. ಸಂಘಟನೆಯಲ್ಲಿ ಏಕತೆ ಇಲ್ಲದಿದ್ದರೆ ಯಾವುದೇ ಗುರಿ ಸಾಧ್ಯವಿಲ್ಲ. ಪಕ್ಷವನ್ನು ಸಧೃಢವಾಗಿ ಕಟ್ಟಿ ಗ್ರಾಮ ಮಟ್ಟದಿಂದಲೇ ಕಾರ್ಯಕರ್ತರನ್ನು ಒಗ್ಗೂಡಿಸಿ ಸಂಘಟನೆ ಮಾಡಬೇಕು. ತಾಲೂಕು ಬಿಜೆಪಿ ರೈತ ಮೋರ್ಚಾ ಮಾಜಿ ಉಪಾಧ್ಯಕ್ಷ ಪೂಮಡಿಹಳ್ಳಿ ನಟರಾಜ್‌ರವರು ಪಕ್ಷದ ತತ್ವಸಿದ್ಧಾಂತಗಳನ್ನು ಒಪ್ಪಿ ಘರ್ ವಾಪಸಿ ಆಗಿರುವುದು ಸಂತಸ ತಂದಿದೆ. ಅವರೊಂದಿಗೆ ನಾವೆಲ್ಲ ಒಟ್ಟಾಗಿ ಇರುತ್ತೇವೆ. ಈಗಾಗಲೇ ಸ್ಥಳೀಯ ಚುನಾವಣೆ ಸಮೀಪಿಸುತ್ತಿದ್ದು ಅವರು ಕಾರ್ಯಕರ್ತರೊಂದಿಗೆ ಕೆಲಸ ಮಾಡಲು ಆರಂಭಿಸಿರುವುದು ಪಕ್ಷಕ್ಕೆ ಬಲ ತಂದಿದೆ ಎಂದರು.
ಬಿಜೆಪಿಗೆ ಪುನರ್ ಸೇರ್ಪಡೆಗೊಂಡ ಪೂಮಡಿಹಳ್ಳಿ ನಟರಾಜ್ ಮಾತನಾಡಿ, ಕೆಲವು ಭಿನ್ನಾಭಿಪ್ರಾಯಗಳಿಂದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಬೇಕಾಯಿತು. ಮುಂದಿನ ದಿನಗಳಲ್ಲಿ ಬಿಜೆಪಿ ಸಂಘಟನೆಯ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕರ್ತರೊಂದಿಗೆ ಜತೆಯಾಗಿ ಕೆಲಸ ಮಾಡುತ್ತೇನೆ ಎಂದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ನಂಬಿಹಳ್ಳಿ, ತಾಲೂಕು ಪ್ರಧಾನ ಕಾರ್ಯದರ್ಶಿ ಹಿರಿಬಿಳ್ತಿ ನಾಗೇಶ್ ಮಾತನಾಡಿದರು. ಸಭೆಯಲ್ಲಿ ಎಸ್.ಜೆ.ಭಾಸ್ಕರಾಚಾರ್, ತಾಲೂಕು ಯುವಮೋರ್ಚ ಮುಖಂಡರಾದ ವಡ್ಡರಳ್ಳಿ ಪ್ರಸನ್ನ, ಕಾರ್ಯದರ್ಶಿ ಶ್ರವಣ್ ಜಿ., ಹೋಬಳಿ ಯುವಮೊರ್ಚ ಅಧ್ಯಕ್ಷ ಮನುಗೌಡ, ಸುಂಡಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಕುಂಭೇನಹಳ್ಳಿ ಮಂಜುಶೆಟ್ಟಿ, ಹೊಸಹಳ್ಳಿ ಸತೀಶ್, ನಾಗರಾಜ್, ಹಾಲುಮತ್ತಿಘಟ್ಟ ಆನಂದ್, ಶ್ರೀನಿವಾಸ್, ಅಕ್ಷತ್ ಮುಂತಾದವರಿದ್ದರು.