ಸಾರಾಂಶ
ಕನ್ನಡಪ್ರಭ ವಾರ್ತೆ ಜಗಳೂರು
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳಲ್ಲಿ ಘೋಷಿಸಿದ ಒಳಮೀಸಲಾತಿ ಅವೈಜ್ಞಾನಿಕವಾಗಿದ್ದು, ಇದರಿಂದ ಬಂಜಾರ ಸಮುದಾಯಕ್ಕೆ ಘೋರ ಅನ್ಯಾಯವಾಗುತ್ತಿರುವುದನ್ನು ಖಂಡಿಸಿ ಸೆ.10 ರಂದು ಬೆಂಗಳೂರಿನ ಫ್ರಿಡಂ ಪಾರ್ಕ್ ನಲ್ಲಿ ಬಂಜಾರ ಸಮುದಾಯದಿಂದ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಸೇವಲಾಲ್ ಬಂಜಾರ ಸಮಾಜದ ತಾಲೂಕು ಉಪಾಧ್ಯಕ್ಷ ಕೃಷ್ಣುಮೂರ್ತಿನಾಯ್ಕ್ ಹೇಳಿದರು.ಪಟ್ಟಣದ ಪರ್ತಕರ್ತರ ಭವನದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೀಸಲಾತಿ ಘೋಷಿಸಿ ಅನ್ಯಾಯ ಮಾಡಿದೆ. ಒಳಮೀಸಲಾತಿ ಹಂಚಿಕೆ ಕೆಲವೇ ಕೆಲವು ಪ್ರಬಲ ಸಮುದಾಯಗಳಿಗೆ ಸಿಂಹಪಾಲು ನೀಡಿದಂತಾಗಿದೆ. ಇದರಿಂದ ಲಂಬಾಣಿ, ಭೋವಿ, ಕೊರಚ, ಕೊರಮ ಮತ್ತು ಅಲೆಮಾರಿ ಸಮುದಾಯಗಳಿಗೆ ಅನ್ಯಾಯವಾಗಿದೆ. ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಲಂಬಾಣಿ, ಭೋವಿ, ಕೊರಚ, ಕೊರಮ ಮತ್ತು ಅಲೆಮಾರಿ ನಾಲ್ಕು ಸಮುದಾಯಗಳಿಗೆ ಶೇ 4.5 ಮೀಸಲಾತಿ ನೀಡಿದ್ದರು. ಈಗ ಬೇಡಜಂಗಮ ಸೇರಿದಂತೆ 59 ಜಾತಿಗಳನ್ನು ಸೇರಿಸಿ ಸಿದ್ದರಾಮಯ್ಯ ನಮ್ಮ ಹಕ್ಕು ಕಸಿದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಹಾಗೂ ಸಹೋದರ ಸಮಾಜಗಳು ಸರಿಯಾದ ಪಾಠ ಕಲಿಸಲಿವೆ ಎಂದು ಎಚ್ಚರಿಕೆ ನೀಡಿದರು.
ನಮಗೆ ನ್ಯಾಯಕೊಡಿ ಇಲ್ಲವೇ ದಯಾ ಮರಣ ಕಲ್ಪಿಸಿ ಕೊಡಿ:ಮುಖಂಡ ಧರ್ಮನಾಯ್ಕ ಮಾತನಾಡಿ ಬಂಜಾರ ಸಮಾಜದ ಯಾವುದೇ ಕಾರಣಕ್ಕೂ ಬಂಜಾರ ಸೇರಿದಂತೆ ಅನ್ಯಾಯಕ್ಕೊಳಗಾದ ಸಮುದಾಯಗಳು ಒಳ ಮೀಸಲಾತಿ ಒಪ್ಪುವುದಿಲ್ಲ. 1919ರಲ್ಲಿ ಮಿಲ್ಲರ್ ವರದಿಯಂತೆ ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಬಂಜಾರ ಸಮುದಾಯದ ಬಡತನ, ಅಲೆಮಾರಿತನ, ನಿಕೃಷ್ಟ ಜೀವನದ ಸ್ಥಿತಿಗತಿ ಆಧರಿಸಿ, ಪರಿಶಿಷ್ಟ ಜಾತಿಗೆ ಸೇರಿಸಿದ್ದಾರೆಯೇ ಹೊರತು, ಸರ್ಕಾರ ಭಿಕ್ಷೆಯಿಂದಲ್ಲ, ನಮ್ಮ ಸಮಾಜದ ಮಕ್ಕಳ ಭವಿಷ್ಯ ತೂಗುಗತ್ತಿ ಮೇಲಿದೆ. ನಮಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ. ಇಲ್ಲವಾದರೆ ನಮಗೆ ದಯಾ ಮರಣ ಕಲ್ಪಿಸಿಕೊಡಿ. ಇಲ್ಲವಾದರೆ ನಮಗೆ ಸರ್ಕಾರ ಮೊದಲು ನ್ಯಾಯ ನೀಡಲಿ ಎಂದು ತಾಕೀತು ಮಾಡಿದರು. ಪಕ್ಷಭೇದ ಮರೆತು ಸರ್ಕಾರದಲ್ಲಿರುವವರು ಸಮಾಜದ ಪರವಾಗಿ ಬಂದು ಹೋರಾಟಕ್ಕೆ ದುಮುಕಬೇಕೆಂದರು.
ಸೇವಲಾಲ್ ಬಂಜಾರ್ ಸಮಾಜದ ಅಧ್ಯಕ್ಷ ತಿಪ್ಪೇಸ್ವಾಮಿನಾಯ್ಕ ಮಾತನಾಡಿ, ಶ್ರೀ ಸರ್ದಾರ್ಸೇವಾಲಾಲ್ ಸ್ವಾಮೀಜಿ, ಶ್ರೀ ಶಿವಪ್ರಕಾಶ ಸ್ವಾಮೀಜಿ, ಕುಡಿಚಿ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ರಾಜೀವ್, ಮಾಜಿ ಸಂಸದರಾದ ಉಮೇಶ್ ಜಾದವ್ ತಾಂಡ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮಾಜಿ ಶಾಸಕ ಎಂ.ಬಸವರಾಜನಾಯ್ಕ, ಶಿವಪ್ರಕಾಶ್ ಎ.ಎಲ್. ಸೇರಿದಂತೆ ಸಮಾಜದ ಗಣ್ಯರು, ಮುಖಂಡರು, ರಾಜಕೀಯ ಪ್ರತಿನಿಧಿಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುತ್ತಿದೆ ಎಂದರು.ನಾಗಮೋಹನ್ ದಾಸ್ ಆಯೋಗವು ಸಂಗ್ರಹಿಸಿದ ದತ್ತಾಂಶವನ್ನು ಸಾರ್ವಜನಿಕವಾಗಿ ಚರ್ಚೆಗೊಳಪಡಿಸದೇ ತರಾತುರಿಯಲ್ಲಿ ಒಳಮೀಸಲಾತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಆಯೋಗ ನಡೆಸಿದ ಸಮೀಕ್ಷೆ ವೇಳೆ ನಗರ ವಾಸಿಗಳ ಸಮೀಕ್ಷೆ ಸರಿಯಾಗಿ ಮಾಡಿಲ್ಲ. ಅದೇ ರೀತಿ ಗೋವಾ, ಮಹಾರಾಷ್ಟ್ರ ಸೇರಿದಂತೆ ಅನ್ಯ ರಾಜ್ಯ, ದೊಡ್ಡ ಊರು, ಕಾಫಿ ಸೀಮೆ, ಘಟ್ಟ ಪ್ರದೇಶಕ್ಕೆ ಗುಳೇ ಹೋದ, ವಲಸೆ ಹೋಗಿರುವವರನ್ನೇ ಸಮೀಕ್ಷೆಯಲ್ಲಿ ಸೇರಿಸಿಲ್ಲ ಎಂದರು.
ಸೇವಲಾಲ್ ಬಂಜಾರ ಸಮಾಜದ ಮುಖಂಡರಾದ ಜಗಳೂರು ಸತೀಶ ನಾಯ್ಕ, ಕುಮಾರ್ ನಾಯ್ಕ್, ಖಜಾಂಚಿ ಶಿದ್ದೇಶ್ ನಾಯ್ಕ್, ಶಿವಕುಮಾರ್, ಹರೀಶ್, ಹನುಂತನಾಯ್ಕ, ಶ್ರೀನಿವಾಸ್, ಸುರೇಶ್ ನಾಯ್ಕ ಇತರರು ಇದ್ದರು.