ಸಾರಾಂಶ
ಕೊಪ್ಪಳ: ವಿದ್ಯಾರ್ಥಿ ಜೀವನದಲ್ಲಿ ಎಸೆಸೆಲ್ಸಿ ಪ್ರಮುಖ ಘಟ್ಟ ಆಗಿದ್ದು, ಅಭ್ಯಾಸಗೈದು ಉತ್ತಮ ಅಂಕ ಪಡೆಯಬೇಕು ಎಂದು ಆರ್ಯವೈಶ್ಯ ಸಂಘದ ಅಧ್ಯಕ್ಷ ರಾಘವೇಂದ್ರ ಪಾನಘಂಟಿ ಹೇಳಿದರು.ತಾಲೂಕಿನ ಭಾಗ್ಯನಗರದ ಪಾನಂಟಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾದಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶನಿವಾರ ಆಯೋಜಿಸಿದ್ದ ಜೀವನೋಪಾಯ ಕ್ರಮ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಆರ್ಯವೈಶ್ಯ ಸಮಾಜ ಅಭಿವೃದ್ಧಿ ಹೊಂದಬೇಕು. ಶೈಕ್ಷಣಿಕವಾಗಿ ಅಭಿವೃದ್ಧಿಯಾದರೆ ಮಾತ್ರ ಸಾಮಾಜಿಕವಾಗಿ ಸದೃಢರಾಗಲು ಸಾದ್ಯ. ಎಸ್.ಎಸ್.ಎಲ್.ಸಿಯಲ್ಲಿ ಉತ್ತಮ ಅಂಕ ಪಡೆಯಬೇಕು ಎಂಬ ಹಂಬಲ ಇರಬೇಕು. ನಿತ್ಯ ಎಲ್ಲ ವಿಷಯಗಳನ್ನು ಬಿಡದೇ ಅಭ್ಯಾಸ ಮಾಡಬೇಕು ಎಂದರು.ಮಕ್ಕಳ ಶೈಕ್ಷಣಿಕ ಭವಿಷ್ಯದಲ್ಲಿ ಎಸ್.ಎಸ್.ಎಲ್.ಸಿ ಪ್ರಮುಖ ಹಂತ. ನಮ್ಮ ಜಿಲ್ಲೆಯೂ ಕಳೆದ ವರ್ಷ 15ನೇ ಸ್ಥಾನ ಪಡೆದು ಉತ್ತಮ ಹಂತದಲ್ಲಿದೆ. ಈ ವರ್ಷ ಟಾಪ್ 10ರೊಳಗೆ ಬರಬೇಕಿದೆ. ಇದಕ್ಕೆ ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಣ ಸಂಸ್ಥೆಗಳು ಶ್ರಮಿಸಬೇಕು. ಸಮುದಾಯ ಸಂಘಟನೆಯಿಂದಲೂ ಕಾರ್ಯಾಗಾರ ಹಮ್ಮಿಕೊಂಡಿರುವುದು ಮಕ್ಕಳ ಶೈಕ್ಷಣೀಕ ಭವಿಷ್ಯದ ಹಿತದೃಷ್ಟಿಯಿಂದ ಎಂದರು.ಮಹಾಸಭಾದ ಜಿಲ್ಲಾಧ್ಯಕ್ಷ ಶ್ರೀನಿವಾಸ ಗುಪ್ತಾ ಮಾತನಾಡಿ, ಶಾಲಾ ಶಿಕ್ಷಣದ ಜತೆಗೆ ಸಾಮಾನ್ಯ ಜ್ಞಾನ ಮುಖ್ಯ. ಇದರಿಂದ ಜೀವನದಲ್ಲಿ ಯಶಸ್ಸು ಕಾಣಲು ಅನುಕೂಲವಾಗಲಿದೆ. ವಿದೇಶಿ ಶಿಕ್ಷಣ ಪದ್ಧತಿ ಹಾಗೂ ನಮ್ಮ ದೇಶದ ಶಿಕ್ಷಣ ಪದ್ಧತಿಗೆ ವ್ಯತ್ಯಾಸವಿದೆ. ವಿದೇಶದಲ್ಲಿ ಮಕ್ಕಳು 14 ವರ್ಷ ಇರುವಾಗಲೇ ಮುಂದೇ ತಾವೇನಾಗಬೇಕೆಂದು ಗುರಿ ಇಟ್ಟುಕೊಳ್ಳುತ್ತಾರೆ. 20ನೇ ವಯಸ್ಸಿಗೆ ಬರುವಷ್ಟರಲ್ಲಿ ಗುರಿ ತಲುಪುತ್ತಾರೆ. ಅದರಂತೆ ನಮ್ಮ ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಗುರಿ ಇಟ್ಟುಕೊಳ್ಳಬೇಕು ಎಂದರು.ಶೈಕ್ಷಣಿಕ ಸಲಹೆಗಾರ ಜಗನ್ನಾಥ ನಾಡಿಗೇರ ವಿದ್ಯಾರ್ಥಿಗಳಿಗೆ ಫಲಿತಾಂಶ ಸುಧಾರಣೆ, ಅಧ್ಯಯನ ವಿಧಾನ, ವಿಷಯ ಗ್ರಹಿಕೆ ಕುರಿತು ಮಾಹಿತಿ ಹಾಗೂ ತರಬೇತಿ ನೀಡಿದರು.ಅಧ್ಯಕ್ಷತೆಯನ್ನು ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾ ಅಧ್ಯಕ್ಷ ಎಸ್.ಸುನಿಲ್ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಭೀಮರಾಜ್ ಜೀವಿ, ಪ್ರಮುಖರಾದ ಚರನ್, ಕೆ.ಆರ್.ಎನ್, ರಾಕೇಶ ಪಾನಂಟಿ, ರಾಘವೇಂದ್ರ ಚಿತ್ರಾಲಿ, ಅರುಣ್ ಕುಮಾರ್ ಶೆಟ್ಟರ, ಗೀರಿಶ್ ಪಾನಗಂಟಿ, ನಾರಾಯಣ ಕುರುಗೋಡ, ಅರುಣ ಕುಮಾರ್ ಶೆಟ್ಟರ್ ಇತರರಿದ್ದರು.