ಹಳಿಯಾಳ: ಕಾಳಿನದಿ ನೀರಾವರಿ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬ ಖಂಡಿಸಿ ಕಬ್ಬು ಬೆಳೆಗಾರರ ಸಂಘಟನೆ ಹಾಗೂ ರೈತ ಹಿತರಕ್ಷಣಾ ಸಮಿತಿಯ ಮುಂದಾಳತ್ವದಲ್ಲಿ ನೀರಿಗಾಗಿ ಹೆಜ್ಜೆ ಎಂಬ ಪಾದಯಾತ್ರೆ ಹೋರಾಟ ಶುಕ್ರವಾರ ಸಂಜೆ ಆರಂಭಗೊಂಡಿತು.
ಪಾದಯಾತ್ರೆಯಲ್ಲಿ ತಾಲೂಕಿನ ವಿವಿಧ ಸ್ವಯಂ ಸೇವಾ ಸಂಘಟನೆಗಳು ಹಾಗೂ ಸರ್ವ ಪಕ್ಷದ ಕಾರ್ಯಕರ್ತರು ಸೇರಿ ನೂರಾರು ಜನರು ಪಾಲ್ಗೋಂಡರು. ರೈತರು ನಿರೀಕ್ಷಿತ ಪ್ರಮಾಣದಲ್ಲಿ ಸೇರದೇ ಇರುವುದರಿಂದ ಹಾಗೂ ರಾಜ್ಯಮಟ್ಟದ ರೈತ ಮುಖಂಡರು ಆಗಮನ ವಿಳಂಬವಾಗಿದ್ದರಿಂದ ಪಾದಯಾತ್ರೆಯು ತಡವಾಗಿ ಆರಂಭಗೊಂಡಿತು.ಫೆ. 27ರಿಂದ ಮಾರ್ಚ್ 9ರ ವರೆಗೆ 11 ದಿನಗಳವರೆಗೆ ತಾಲೂಕಿನಾದ್ಯಂತ ನಡೆಯಲಿರುವ ಪಾದಯಾತ್ರೆಯು ಮೊದಲ ದಿನ ಛತ್ರನಾಳ, ಬಾಣಸಗೇರಿ ಗ್ರಾಮಗಳ ಮೂಲಕ ಬಿ.ಕೆ. ಹಳ್ಳಿಯಲ್ಲಿ ಗ್ರಾಮಕ್ಕೆ ತಲುಪಿ ವಾಸ್ತವ್ಯ ಹೂಡಿ ಬಹಿರಂಗ ಸಭೆಯನ್ನು ನಡೆಸಲಿದೆ.
ಪಾದಯಾತ್ರೆಯ ಆರಂಭದಲ್ಲಿ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ನಾಗೇಂದ್ರ ಜಿವೋಜಿ "ಕಳೆದ ಐದು ದಶಕಗಳಿಂದ ಮಹತ್ವದ ಖಾತೆಯನ್ನು ಹೊಂದಿದ್ದ ದೇಶಪಾಂಡೆಯವರು ಮನಸ್ಸು ಮಾಡಿದರೆ ನೀರಾವರಿ ಯೋಜನೆಯು ಯಾವತ್ತೋ ಆಗಬೇಕಾಗಿತ್ತು. ನೀರಾವರಿ ಯೋಜನೆ ದೇಶಪಾಂಡೆಯವರ ಕನಸು ಮನಸ್ಸಿನಲ್ಲಿಯೂ ಇದ್ದಿರಲಿಲ್ಲ. ರೈತರು ಆರಂಭಿಸಿರುವ ಹೋರಾಟ ಪ್ರತಿಭಟನೆಗೆ ಮಣಿದು ಅವರು ಒಲ್ಲದ ಮನಸ್ಸಿನಿಂದ ಈ ಯೋಜನೆಗೆ ಕೈಹಾಕಿದ್ದಾರೆ ಹೊರತು, ಅವರಿಗೆ ಈ ಯೋಜನೆ ಪ್ರಾರಂಭಿಸುವ ಇಚ್ಛೆಯೇ ಇಲ್ಲ. ಇದಕ್ಕೆ ಎಂಟು ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ನೀರಾವರಿ ಯೋಜನೆಯೇ ಸಾಕ್ಷಿಯೆಂದು ಟೀಕಿಸಿದರು.ಮನಸ್ಸಿಲ್ಲಹಳಿಯಾಳ ಕ್ಷೇತ್ರದ ಋಣ ತೀರಿಸಲು ನನಗೆ ಅಸಾಧ್ಯ ಎಂದು ಬಾಯಿ ಮಾತಿಗೆ ಹೇಳುವ ಅವರು ಕಾಳಿನದಿ ನೀರಾವರಿ ಯೋಜನೆಯನ್ನು ಸಕಾಲದಲ್ಲಿ ಪ್ರಾರಂಭಿಸಿ ತಮ್ಮ ಘನತೆ ವರ್ಚಸ್ಸನ್ನು ಹೆಚ್ಚಿಸಬೇಕಾಗಿತ್ತು ಎಂದರು.
ನಮಗೆ ಯಾರ ಮೇಲೂ ದ್ವೇಷ ಇಲ್ಲ, ನೀರಾವರಿ ಯೋಜನೆ ಯಾಕೇ ವಿಳಂಬವಾಯಿತೆಂಬುದು ನಮ್ಮ ರೈತರಿಗೆ ತಿಳಿಸಬೇಕು. ಅವರನ್ನು ಜಾಗೃತಗೊಳಿಸಬೇಕೆಂದು ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದೆವೆ. ಪ್ರಭಾವಿ ಶಾಸಕರಾದ ಅವರಿಗೆ ಯೋಜನೆಗೆ ಬಂದ ತೊಡಕುಗಳನ್ನು ಬಗೆಹರಿಸುವುದು ದೊಡ್ಡ ವಿಷಯವೇನು ಇಲ್ಲ. ಈ ವಿಷಯವನ್ನು ಪ್ರತಿಯೊಬ್ಬರಿಗೂ ಮನವರಿಕೆ ಮಾಡುತ್ತೆವೆ ಎಂದರು. ಪ್ರತಿಭಟನಾ ಸಭೆಯ ನಂತರ ಪಾದಯಾತ್ರೆಯು ಆರಂಭಗೊಂಡಿತು. ಪಾದಯಾತ್ರೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ (ಕೆ.ಆರ್.ಆರ್.ಎಸ್) ಹಸಿರುಸೇನೆಯ ರಾಜ್ಯಾಧ್ಯಕ್ಷ ಚನ್ನಪ್ಪ ಪೂಜಾರಿ ಹಾಗೂ ಸಂಗಡಿಗರು, ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಸಂದೀಪಕುಮಾರ ಬೊಬಾಟೆ, ತಾಲೂಕು ಅಧ್ಯಕ್ಷ ಶಂಕರ ಕಾಜಗಾರ, ಅಶೋಕ ಮೇಟಿ, ಸುರೇಶ ಶಿವಣ್ಣನವರ, ಸಾತೇರಿ ಗೋಡೆಮನಿ, ರಾಮದಾಸ ಬೆಳಗಾಂವಕರ, ಮಹೇಶ ಪಾಳೇಕರ, ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಜಿ.ಡಿ. ಗಂಗಾಧರ, ಕರವೇ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ ಹಾಗೂ ಸಂಗಡಿಗರು, ವಿಠೋಬಾನ ಭಕ್ತರು, ವಾರಕರಿಗಳು, ಉದ್ಯಮಿ ನಾರಾಯಣ ಠೋಸುರ, ಜಿಲ್ಲಾ ಶರಣ ಸಾಹಿತ್ಯ ಅಧ್ಯಕ್ಷ ಶಿವದೇವ ದೇಸಾಯಸ್ವಾಮಿ ಹಾಗೂ ಇತರರು ಇದ್ದರು.