ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ ನಗರದ ರಾಜಾಸೀಟ್ ಸಮೀಪವಿದ್ದ ಬೀದಿಬದಿ ಅಂಗಡಿಗಳನ್ನು ತೆರವುಗೊಳಿಸಿದ್ದನ್ನು ಖಂಡಿಸಿ ನಗರಸಭೆ ಎದುರು ವ್ಯಾಪಾರಿಗಳು ಕೈಗೊಂಡಿದ್ದ ಅಹೋರಾತ್ರಿ ಹೋರಾಟದ ಎರಡನೇ ದಿನವಾದ ಶುಕ್ರವಾರ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಸ್ಥಳಕ್ಕಾಗಮಿಸಿ ಸೂಕ್ತ ಕ್ರಮದ ಭರವಸೆ ನೀಡಿದ ಹಿನ್ನೆಲೆ ವ್ಯಾಪಾರಸ್ಥರು ಪ್ರತಿಭಟನೆ ಅಂತ್ಯಗೊಳಿಸಿದ್ದಾರೆ. ಗುರುವಾರ ನಗರಸಭೆ ಅಧ್ಯಕ್ಷೆ, ಸದಸ್ಯರು, ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪೊಲೀಸರ ಸಹಕಾರದೊಂದಿಗೆ ಅಂಗಡಿಗಳನ್ನು ತೆರವುಗೊಳಿಸಿದ್ದರು. ನಂತರ ಇದನ್ನು ವಿರೋಧಿಸಿ ವ್ಯಾಪಾರಿಗಳು ರಾತ್ರಿಯಿಂದಲೇ ಪ್ರತಿಭಟನೆಗೆ ಮುಂದಾದರು. ಪ್ರತಿಭಟನೆ ಮುಂದುವರಿಸಿದ ವ್ಯಾಪಾರಿಗಳು ನಗರ ಸಭೆ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ ನ್ಯಾಯಕ್ಕಾಗಿ ಆಗ್ರಹಿಸಿದರು.ನಗರಸಭೆ ಗುರುತಿಸಿರುವ 3 ಜಾಗಗಳು ಅವೈಜ್ಞಾನಿಕವಾಗಿದ್ದು, ಅಲ್ಲಿಗೆ ಸ್ಥಳಾಂತರವಾಗುವುದಕ್ಕೆ ಒಪ್ಪಿಗೆ ಇಲ್ಲ ಎಂದು ಬಿಗಿಪಟ್ಟು ಹಿಡಿದರು. ಶಾಸಕರು ಆಗಮಿಸಿ ಸಭೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ಬೇಡಿಕೆಯೊಡ್ಡಿದ ಪ್ರತಿಭಟನಾನಿರತರು ನ್ಯಾಯ ಸಿಗುವ ವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಸ್ಥಳಕ್ಕಾಗಮಿಸಿದ ಶಾಸಕ ಮಂಥರ್ ಗೌಡ, ಪ್ರತಿಭಟನಾನಿರತರೊಂದಿಗೆ ಮಾತನಾಡಿ, ಸೂಕ್ತಕ್ರಮ ಕೈಗೊಳ್ಳುವ ಭರವಸೆ ನೀಡಿ ಪ್ರತಿಭಟನೆ ಅಂತ್ಯಗೊಳಿಸುವಂತೆ ಕೋರಿದರು. ಬಳಿಕ ಪೌರಾಯುಕ್ತ ವಿಜಯ ಅವರೊಂದಿಗೆ ಮಾತನಾಡಿ ಚರ್ಚಿಸಿದರು. ಪೊಲೀಸ್ ಇಲಾಖೆ ಆಕ್ಷೇಪ, ಸಾರ್ವಜನಿಕ ದೂರಿನ ಹಿನ್ನೆಲೆ ಅಲ್ಲಿ ವ್ಯಾಪಾರಕ್ಕೆ ಅವಕಾಶವಿರುವುದಿಲ್ಲ. ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಬೇಕೆಂದು ಶಾಸಕರಿಗೆ ಪೌರಾಯುಕ್ತ ವಿಜಯ ಮಾಹಿತಿ ಒದಗಿಸಿದರು. ನಂತರ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಮಂತರ್, ಜಿಲ್ಲಾಧಿಕಾರಿ, ನಗರಸಭೆ ಆಡಳಿತ ಮಂಡಳಿ ಬೀದಿಬದಿ ವ್ಯಾಪಾರಿಗಳ ಸಂಘದ ಪ್ರಮುಖರೊಂದಿಗೆ ಸಭೆ ನಡೆಸಿ ನಿಯಮದ ಪ್ರಕಾರ ವ್ಯಾಪಾರ ಎಲ್ಲಿ ನಡೆಸಬೇಕೆಂಬ ತೀರ್ಮಾನಕ್ಕೆ ಬರಲಾಗುವುದು. ಗುರುತಿಸಿದ ಜಾಗದಲ್ಲಿ ಮೊದಲು ಮೂಲಭೂತ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಸಾರ್ವಜನಿಕರ ದೂರು ಹಿನ್ನೆಲೆ ಕ್ರಮ: ಈ ಸಂಬಂಧ ಪ್ರತಿಕ್ರಿಯಿಸಿರುವ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಪಾದಚಾರಿಗಳ ಓಡಾಟ, ವಾಹನ ಸಂಚಾರ ವಿಚಾರದಲ್ಲಿ ವ್ಯಾಪಕ ದೂರು ಬರುತ್ತಿರುವ ಹಿನ್ನೆಲೆ ಈ ಕ್ರಮಕೈಗೊಂಡಿದ್ದೇವೆ. ತೋಟಗಾರಿಕೆ ಇಲಾಖೆ ಸೇರಿದ ಜಾಗದಲ್ಲಿ ಮೊದಲು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು. ಆ ವೇಳೆ ಆದ ಗಲಾಟೆಯ ಪರಿಣಾಮ ಅಲ್ಲಿಂದ ಅಂದಿನ ಜಿಲ್ಲಾಧಿಕಾರಿ ಅಂಗಡಿ ತೆರವುಗೊಳಿಸಿದ್ದರು. ನಂತರ ರಾಜಾಸೀಟ್ ಆವರಣದ ರಸ್ತೆಬದಿಯಲ್ಲಿ ವ್ಯಾಪಾರಕ್ಕೆ ಮುಂದಾದರು. ಇದರಿಂದ ರಸ್ತೆ ಸಂಚಾರ, ಪಾದಚಾರಿಗಳ ಓಡಾಟಕ್ಕೆ ಸಮಸ್ಯೆಯಾದ ಕಾರಣ ಪರ್ಯಾಯ ಜಾಗ ಗುರುತಿಸಿ ಸ್ಥಳಾಂತರಕ್ಕೆ ಪ್ರಸ್ತಾವನೆ ಬಂದಿತ್ತು. ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಸ್ಪಂದನ ವ್ಯಾಪಾರಿಗಳಿಂದ ಬರುತ್ತಿರಲಿಲ್ಲ ಎಂದರು.ಸ್ಥಳಕ್ಕೆ ತೆರಳಿದ ನಗರಸಭೆ ಅಧಿಕಾರಿಗಳಿಗೆ ಅವಾಚ್ಯ ಶಬ್ದ ನಿಂದನೆಯನ್ನು ವ್ಯಾಪಾರಿಗಳು ಮಾಡಿದ್ದಾರೆ. ಮಡಿಕೇರಿ ಸಂಚಾರಿ ಠಾಣೆಯಿಂದಲೂ ತೆರವಿಗೆ ಪ್ರಸ್ತಾವನೆ ಬಂದಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೆರವಿಗೆ ನಿರ್ಣಯ ಕೈಗೊಳ್ಳಲಾಗಿದೆ. ಸೂಕ್ತಕ್ರಮಕ್ಕೆ ಪೌರಾಯುಕ್ತರಿಗೆ ಜಿಲ್ಲಾಧಿಕಾರಿ ಸೂಚಿಸಿದ್ದರು ಎಂದು ಮಾಹಿತಿ ನೀಡಿದ ಅವರು, ವ್ಯಾಪಾರಿಗಳಿಗೆ ನಗರಸಭೆ ಅನುದಾನಿಂದಲೇ ಸೌಲಭ್ಯ ಒದಗಿಸಿಕೊಡಲಾಗುವುದು ಎಂದರು. ನಗರಸಭೆ ಸದಸ್ಯರಾದ ಅಮೀನ್ ಮೊಹಿಸಿನ್, ಮನ್ಸೂರ್ ಅಲಿ, ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸುಲೇಮಾನ್ ಮತ್ತಿತರರು ಇದ್ದರು.