ಕಾಡಾನೆಗೆ ಕಣ್ಣಿನ ದೃಷ್ಟಿ ದೋಷ: ಸಾಕಾನೆಗಳ ಮೂಲಕ ಕಾರ್ಯಾಚರಣೆ!

| Published : Dec 15 2023, 01:30 AM IST

ಕಾಡಾನೆಗೆ ಕಣ್ಣಿನ ದೃಷ್ಟಿ ದೋಷ: ಸಾಕಾನೆಗಳ ಮೂಲಕ ಕಾರ್ಯಾಚರಣೆ!
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹಾರಂಗಿ ಹಿನ್ನೀರಿನ ವ್ಯಾಪ್ತಿಯ ಸಜ್ಜಳ್ಳಿ ಸಮೀಪದಲ್ಲಿ ದೃಷ್ಟಿ ಕಳೆದುಕೊಂಡು ಕಳೆದ 20 ದಿನಗಳಿಂದ ಕಾಡಾನೆಯೊಂದು ಅಡ್ಡಾಡುತ್ತಿದೆ. ಕೆಲವೊಂದು ಬಾರಿ ಯಡವನಾಡು-ಐಗೂರು ಮುಖ್ಯ ರಸ್ತೆಯಲ್ಲೇ ಓಡಾಡುತ್ತಿದ್ದು, ಈ ಭಾಗದ ಸಾರ್ವಜನಿಕರು ಆತಂಕಗೊಂಡಿದ್ದರು.

ವಿಘ್ನೇಶ್ ಎಂ. ಭೂತನಕಾಡುಕನ್ನಡಪ್ರಭ ವಾರ್ತೆ ಮಡಿಕೇರಿ

ಕಣ್ಣಿನ ದೃಷ್ಟಿ ದೋಷ ಉಂಟಾಗಿರುವ ಪರಿಣಾಮ ಹೆಣ್ಣು ಕಾಡಾನೆಯೊಂದು ಮುಖ್ಯ ರಸ್ತೆ ಹಾಗೂ ಅರಣ್ಯದಂಚಿನಲ್ಲಿ ಓಡಾಡುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಸೆರೆ ಹಿಡಿದು ಹಾರೈಕೆ ಮಾಡಲು ಅರಣ್ಯ ಇಲಾಖೆ ಚಿಂತನೆ ನಡೆಸಿದ್ದು, ಹಾರಂಗಿ ಸಾಕಾನೆ ಶಿಬಿರದ ಮೂರು ಸಾಕಾನೆಗಳನ್ನು ಬಳಸಿಕೊಳ್ಳಲಾಗಿದೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹಾರಂಗಿ ಹಿನ್ನೀರಿನ ವ್ಯಾಪ್ತಿಯ ಸಜ್ಜಳ್ಳಿ ಸಮೀಪದಲ್ಲಿ ದೃಷ್ಟಿ ಕಳೆದುಕೊಂಡು ಕಳೆದ 20 ದಿನಗಳಿಂದ ಕಾಡಾನೆಯೊಂದು ಅಡ್ಡಾಡುತ್ತಿದೆ. ಕೆಲವೊಂದು ಬಾರಿ ಯಡವನಾಡು-ಐಗೂರು ಮುಖ್ಯ ರಸ್ತೆಯಲ್ಲೇ ಓಡಾಡುತ್ತಿದ್ದು, ಈ ಭಾಗದ ಸಾರ್ವಜನಿಕರು ಆತಂಕಗೊಂಡಿದ್ದರು.

ದೃಷ್ಟಿ ಕಳೆದುಕೊಂಡಿರುವುದರಿಂದ ಕಾಡಾನೆಯನ್ನು ಸೆರೆ ಹಿಡಿದು ಸೂಕ್ತ ಚಿಕಿತ್ಸೆ ನೀಡುವಂತೆ ಈ ಭಾಗದ ಸಾರ್ವಜನಿಕರು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆಗೆ ಮುಂದಾಗಿದ್ದು, ಹಾರಂಗಿ ಸಾಕಾನೆ ಶಿಬಿರದ ಈಶ್ವರ, ಏಕದಂತ, ವಿಜಯ ಮೂರು ಸಾಕಾನೆಗಳನ್ನು ಕರೆತರಲಾಗಿದೆ. ಇದರೊಂದಿಗೆ ಆನೆಯ ಮಾವುತರು, ಕಾವಾಡಿಗರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ, ಆರ್‌ಆರ್‌ಟಿ ಹಾಗೂ ಎಲಿಫ್ಯಾಂಟ್ ಟಾಸ್ಕ್ ಫೋರ್ಸ್‌ನ ಸುಮಾರು 30 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

ಕಾಡಾನೆಯ ಕಣ್ಣಿನ ಭಾಗಕ್ಕೆ ಗುಂಡು ತಗುಲಿರುವುದರಿಂದಾಗಿ ದೃಷ್ಟಿ ದೋಷ ಉಂಟಾಗಿರಬಹುದು ಎಂದು ಪಶು ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಾಕಾನೆಗಳ ಮೂಲಕ ಕಾಡಾನೆಯೊಂದಿಗೆ ಸ್ನೇಹ ಬೆಳೆಸುವಂತೆ ಮಾಡಿ ಅದನ್ನು ಉಪಾಯದಿಂದ ಸೆರೆ ಹಿಡಿದು ಹಾರಂಗಿ ಸಾಕಾನೆ ಶಿಬಿರಕ್ಕೆ ಕರೆ ತಂದು ಅಲ್ಲಿಯೇ ಚಿಕಿತ್ಸೆ ಹಾಗೂ ಆರೈಕೆ ಮಾಡಲು ಚಿಂತಿಸಲಾಗಿದೆ.ಸದ್ಯಕ್ಕೆ ಕಾಡಾನೆ ಒಂಟಿಯಾಗಿ ಸಜ್ಜಳ್ಳಿ ವ್ಯಾಪ್ತಿಯಲ್ಲೇ ಓಡಾಡುತ್ತಿದ್ದು, ಮೂರು ಸಾಕಾನೆಗಳು ಹಾಗೂ ಸಿಬ್ಬಂದಿ ಬೀಡುಬಿಟ್ಟಿದ್ದು ಕಾಡಾನೆಯ ಚಲನವಲನವನ್ನು ಪರಿಶೀಲಿಸಲಾಗುತ್ತಿದೆ. ದೃಷ್ಟಿ ದೋಷ ಉಂಟಾಗಿರುವ ಪರಿಣಾಮ ಕಾಡಾನೆ ಆಹಾರವನ್ನು ಕೂಡ ತಿನ್ನಲಾಗದೆ ದುರ್ಬಲವಾಗಿದೆ. ಇದರಿಂದಲೇ ಸಜ್ಜಳ್ಳಿಯ ಆಸುಪಾಸಿನಲ್ಲಿ ಓಡಾಡುತ್ತಿದೆ. ಸಾಕಾನೆಗಳೊಂದಿಗೆ ಕಾಡಾನೆಗೆ ಮೇವು ನೀಡುವ ನಿಟ್ಟಿನಲ್ಲಿ ಭತ್ತ, ಬೆಲ್ಲವನ್ನು ಕೂಡ ಕಾರ್ಯಾಚರಣೆಯಲ್ಲಿ ತೆಗೆದುಕೊಂಡು ಹೋಗಲಾಗಿದ್ದು, ಕಾಡಾನೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಅರಣ್ಯ ಇಲಾಖೆ ಕೆಲಸ ಮಾಡುತ್ತಿದೆ.

ಗುಂಡೇಟು ಬಿದ್ದಿರುವ ಸಾಧ್ಯತೆ!ಕಾಡಾನೆಯ ಕಣ್ಣಿನ ಭಾಗಕ್ಕೆ ಕೋವಿ ಗುಂಡೇಟು ತಗಲಿರುವ ಪರಿಣಾಮ ಕಾಡಾನೆ ತನ್ನ ದೃಷ್ಟಿಯನ್ನು ಕಳೆದುಕೊಂಡಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಒಂದು ಕಣ್ಣಿಗೆ ಗುಂಡು ತಗಲಿದ್ದು, ಮತ್ತೊಂದು ಕಣ್ಣು ಸ್ವಲ್ಪ ಮಾತ್ರ ದೃಷ್ಟಿ ಶಕ್ತಿಯನ್ನು ಹೊಂದಿರಬಹುದು ಇದರಿಂದಲೇ ಕಾಡಾನೆಗೆ ಆಹಾರ ದೊರಕದೆ ದುರ್ಬಲಗೊಳ್ಳಲು ಕಾರಣವಾಗಿದೆ.ಕಳೆದ ಕೆಲವು ದಿನಗಳಿಂದ ಒಂಟಿ ಕಾಡಾನೆಯೊಂದು ಮುಖ್ಯ ರಸ್ತೆಯಲ್ಲಿ ಓಡಾಡುತ್ತಿತ್ತು. ದೃಷ್ಟಿ ದೋಷ ಉಂಟಾಗಿರುವುದರಿಂದ ಅದು ಇಲ್ಲೇ ಓಡಾಡುತ್ತಿದೆ. ಆದ್ದರಿಂದ ಇದನ್ನು ಸೆರೆ ಹಿಡಿದು ಸ್ಥಳಾಂತರ ಮಾಡಿ ಅರಣ್ಯ ಇಲಾಖೆ ಸೂಕ್ತ ಚಿಕಿತ್ಸೆ ನೀಡಬೇಕು. ಇಲ್ಲೇ ಓಡಾಡುವಂತೆ ಬಿಟ್ಟರೆ ಊರಿನವರಿಗೆ ಸಮಸ್ಯೆಯಾಗುತ್ತದೆ. । ಅವಿಲಾಶ್, ಕಾಜೂರು ನಿವಾಸಿ

----------------ಕಾಡಾನೆಯು ತನ್ನ ಕಣ್ಣಿನ ದೃಷ್ಟಿ ಶಕ್ತಿಯನ್ನು ಕಳೆದುಕೊಂಡಿದೆ. ಆಹಾರ ಇಲ್ಲದ ಪರಿಣಾಮ ದೇಹ ಕೂಡ ದುರ್ಬಲವಾಗಿದೆ. ಈ ಹಿನ್ನೆಲೆಯಲ್ಲಿ ಆನೆಯನ್ನು ಆರೈಕೆ ಮಾಡುವ ಸಲುವಾಗಿ ಸಾಕಾನೆಗಳನ್ನು ಸ್ಥಳಕ್ಕೆ ಕರೆಸಲಾಗಿದ್ದು, ಕಾಡಾನೆಯೊಂದಿಗೆ ಸ್ನೇಹ ಬೆಳೆಸುವಂತೆ ಮಾಡಿ ಸೆರೆ ಹಿಡಿದು ಹಾರಂಗಿ ಸಾಕಾನೆ ಶಿಬಿರಕ್ಕೆ ಸ್ಥಳಾಂತರಿಸಿ ಹಾರೈಕೆ ಮಾಡಲಾಗುತ್ತದೆ.

। ಚಿಟ್ಟಿಯಪ್ಪ, ಪಶು ವೈದ್ಯರು