ಸಾರಾಂಶ
ಹೊಸಪೇಟೆ: ಜಾನಪದ ಕಲೆ ಮೂಲಕ ಜನಸಾಮಾನ್ಯರಿಗೆ ಆರೋಗ್ಯ ಸೇವೆಗಳ ಕುರಿತು ಅರಿವು ಮೂಡಿಸಲು ಎಲ್ಲ ಕಲಾತಂಡಗಳು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕನ್ನಡ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಮಂಗಳವಾರ ಕನ್ನಡ ವಿಶ್ವವಿದ್ಯಾಲಯದ ಭುವನ ವಿಜಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಲಬುರಗಿ ವಿಭಾಗೀಯ ಮಟ್ಟದ ಜಾನಪದ ಕಲಾತಂಡಗಳ ತರಬೇತಿ ಕಾರ್ಯಾಗಾರಕ್ಕೆ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳು ಸಾರ್ವಜನಿಕರ ಗಮನಕ್ಕೆ ಬರಲಿ ಎಂಬ ಉದ್ದೇಶದಿಂದ ಜಾಹೀರಾತು, ಆಡಿಯೋ ಜೀಂಗಲ್ಸ್, ಎಲ್‌ಇಡಿ ಮೂಲಕ ವಿಡಿಯೋ ಬಿತ್ತರಿಸುವುದು ಹೀಗೆ ವಿವಿಧ ಬಗೆಗಳಲ್ಲಿ ಮಾಹಿತಿ ನೀಡಲಾಗುತ್ತದೆ. ಗ್ರಾಮೀಣ ಭಾಗದ ಜನ ಸಾಮಾನ್ಯರಿಗೆ ಜಾನಪದ ಕಲಾತಂಡಗಳ ಮೂಲಕ ನೀಡುವ ಅರಿವು ಸುಲಭವಾಗಿ ಸಿಗಲಿದ್ದು, ಈ ಹಿನ್ನೆಲೆಯಲ್ಲಿ ಜಾನಪದಕ್ಕೆ ಒತ್ತು ನೀಡಲಾಗುತ್ತಿದೆ.
ಸಂಸ್ಕೃತಿ ಮತ್ತು ಸಂಸ್ಕಾರದ ವಿಚಾರಗಳನ್ನು ಜನರಿಂದ ಜನರಿಗೆ ಹೇಳಬೇಕಾದ ಜನಪದ ಕಲೆಗಿರುವ ಗಮ್ಮತ್ತು ಬೇರೆ ಕಲೆಗಿಲ್ಲ. ಭಾರತೀಯ ಸಂಸ್ಕೃತಿಯಲ್ಲಿ ಜಾನಪದ ಕಲೆಗೆ ಅತ್ಯಂತ ಪ್ರಾಮುಖ್ಯತೆ ಇದೆ ಎಂದರು.ದೇಶ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣ ಮತ್ತು ಆರೋಗ್ಯ ಪ್ರಮುಖ ಪಾತ್ರ ವಹಿಸಲಿವೆ. ಜೀವನದಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯ ಸೇವೆಗಳು ಅತ್ಯಂತ ಮಹತ್ವದ್ದಾಗಿವೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಮೂಲಕ ಅನುಷ್ಠಾನವಾಗುತ್ತಿರುವ ಸರ್ಕಾರದ ವಿವಿಧ ಯೋಜನೆಗಳು, ಸೇವೆಗಳು, ಕಾರ್ಯಕ್ರಮಗಳ ಸದುಪಯೋಗ, ರೋಗಗಳು ಮತ್ತು ಅವುಗಳ ಜಾಗೃತಿ, ಪರಿಹಾರದ ಬಗ್ಗೆ ಜಾನಪದ ಕಲೆ ಮೂಲಕ ತಿಳಿಸಿದಾಗ ಪ್ರತಿಯೊಬ್ಬ ನಾಗರಿಕರ ಮತ್ತು ವಿಶೇಷವಾಗಿ ಗ್ರಾಮೀಣ ಭಾಗದ ಸಾರ್ವಜನಿಕರ ಗಮನ ಸೆಳೆಯುವಂತಾಗುತ್ತದೆ. ಈ ಉದ್ದೇಶದಿಂದ ಜಾನಪದ ಕಲಾತಂಡಗಳ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಮಾತನಾಡಿ, ಅನಕ್ಷರಸ್ಥರಿಗೆ ಜನಪದ ಕಲೆ ಮೂಲಕ ಆರೋಗ್ಯ ಜಾಗೃತಿ ಮೂಡಿಸಲು ಸರ್ಕಾರ, ಆರೋಗ್ಯ ಇಲಾಖೆಯು ಕಾರ್ಯಕ್ರಮವನ್ನು ರೂಪಿಸಿದೆ. ಅನಕ್ಷರಸ್ಥರಿಗೆ ಲಿಪಿಗಿಂತ ಭಾಷೆ ಹೆಚ್ಚು ಸಂವಹನವನ್ನು ನೀಡುತ್ತದೆ. ಜಾನಪದ ಕಲೆ ನೋಡುವ ಮತ್ತು ಭಾಷೆಯಲ್ಲಿ ಕೇಳುವ ಕಲಾ ಪ್ರಕಾರಗಳಾಗಿದ್ದು, ಇಂತಹ ಕಲಾ ಪ್ರಕಾರಗಳ ಮೂಲಕ ಅರಿವು ಮೂಡಿಸಲು ಸಾಮಾನ್ಯರಿಗೆ ಪ್ರಭಾವಿಸುತ್ತವೆ. ಕನ್ನಡ ವಿಶ್ವವಿದ್ಯಾಲಯವು ಆರಂಭಗೊಂಡು ಇಂದಿಗೆ 33 ವರ್ಷಗಳು ಕಳೆದಿವೆ. ಜನಪದ ಮತ್ತು ಬುಡಕಟ್ಟು ಕಲೆಗಳ ಬಗ್ಗೆ ಉತ್ತಮ ಸಂಶೋಧನೆಗಳನ್ನು ಮಾಡಿ, ಪುಸ್ತಕಗಳನ್ನು ಪ್ರಕಟಿಸಿ, ವಿಚಾರ ಸಂಕಿರಣಗಳು ಹಾಗೂ ಉಪನ್ಯಾಸಗಳನ್ನು ಏರ್ಪಡಿಸಿದೆ. ಜನಪದ ಸಾಹಿತ್ಯದ ಮಹತ್ವವನ್ನು ಜನಸಾಮಾನ್ಯರಿಗೆ ಹಾಗೂ ವಿದ್ಯಾವಂತರಿಗೆ ತಲುಪಿಸುವಲ್ಲಿ ದೊಡ್ಡ ಪ್ರಯತ್ನ ಕನ್ನಡ ವಿವಿ ಮಾಡಿದೆ ಎಂದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಬಿ. ಜಂಬಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಭೀಮಪ್ಪ ಲಾಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಲ್.ಆರ್. ಶಂಕರ್ ನಾಯ್ಕ್, ಸಂಪನ್ಮೂಲ ವ್ಯಕ್ತಿಗಳಾದ ಮಹೇಶ ಪಾಟೀಲ್ ಹಾಗೂ ವಿಶ್ವನಾಥ ಪಾಟೀಲ್ ಮತ್ತಿತರರಿದ್ದರು. ಹೊಸಪೇಟೆ ತಾಲೂಕು ಆರೋಗ್ಯಾಧಿಕಾರಿ ಡಾ. ಭಾಸ್ಕರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ದೊಡ್ಡಮನಿ ನಿರ್ವಹಿಸಿದರು.