ಟೈಲರ್‌ಗಳಿಗೆ ಸಹಾಯಹಸ್ತ ಯೋಜನೆಯಡಿ ಸೌಲಭ್ಯ

| Published : Dec 31 2024, 01:00 AM IST

ಸಾರಾಂಶ

ಈ ಹಿಂದೆ ಟೈಲರ್ಸ್‌ ಹೊಲಿಯುವ ಬಟ್ಟೆಗಳಿಗೆ ಬಹಳ ಬೇಡಿಕೆ ಇತ್ತು. ಆದರೆ ಈಗ ರೆಡಿಮೇಡ್‌ ಬಟ್ಟೆಗಳಿಂದ ಟೈಲರ್ಸ್‌ ವೃತ್ತಿಗೆ ಕುತ್ತು ಬಂದಿದೆ. ಅತಿ ಹೆಚ್ಚು ಬಡವ ಅಥವಾ ಮಧ್ಯಮ ವರ್ಗದವರಿರುವ ಟೈಲರ್ಸ್‌ ಇದರಿಂದ ಜೀವನ ನಿರ್ವಹಣೆಗೆ ತೊಂದರೆ ಅನುಭವಿಸಬೇಕಾಗಿ ಬಂದಿದೆ. ಆದ್ದರಿಂದ ಟೈಲರ್‌ಗಳಿಗೆ ಸೌಲಭ್ಯ ಕಲ್ಪಿಸುವ ಅಗತ್ಯವಿದೆ.

ಕನ್ನಡಪ್ರಭ ವಾರ್ತೆ ಮಾಲೂರು

ಸೌಲಭ್ಯದ ಕೊರತೆ ನಡುವೆಯೂ ಟೈಲರಿಂಗ್‌ ಮೂಲಕ ವ್ಯಕ್ಯಿಯ ವ್ಯಕ್ತಿತ್ವ ಹೆಚ್ಚಿಸಿ ಸಮಾಜದಲ್ಲಿ ಸುಂದರತೆ ಮೂಡಿಸಲು ಶ್ರಮಿಸುವ ಟೈಲರ್‌ ವೃತ್ತಿ ಬಾಂಧವರಿಗೆ ಹೆಚ್ಚಿನ ಸೌಲಭ್ಯ ಒದಗಿಸಲು ಕಾರ್ಮಿಕ ಸಚಿವರೂಡನೆ ಚರ್ಚಿಸಿ ಅನುಕೂಲ ಕಲ್ಪಿಸಲಾಗುವುದು ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ಅವರು ಪಟ್ಟಣದ ಮಾರುತಿ ಬಡಾವಣೆಯ ಭೋವಿ ಸಮುದಾಯದ ಭವನದಲ್ಲಿ ಕರ್ನಾಟಕ ರಾಜ್ಯ ಟೈಲರ್ಸ್‌ ಆಸೋಷಿಯೇಷನ್‌ ವತಿಯಿಂದ ಮಾಲೂರು ತಾಲೂಕಿನ ನೂತನ ಸಮಿತಿಗೆ ಚಾಲನೆ ನೀಡಿ ಮಾತನಾಡಿದರು.

ಟೈಲರ್ಗಳಿಗೆ ಅಗತ್ಯ ಸೌಲಭ್ಯ

ಈ ಹಿಂದೆ ಟೈಲರ್ಸ್‌ ಹೊಲಿಯುವ ಬಟ್ಟೆಗಳಿಗೆ ಬಹಳ ಬೇಡಿಕೆ ಇತ್ತು. ಆದರೆ ಈಗ ರೆಡಿಮೇಡ್‌ ಬಟ್ಟೆಗಳಿಂದ ಟೈಲರ್ಸ್‌ ವೃತ್ತಿಗೆ ಕುತ್ತು ಬಂದಿದೆ. ಅತಿ ಹೆಚ್ಚು ಬಡವ ಅಥವಾ ಮಧ್ಯಮ ವರ್ಗದವರಿರುವ ಟೈಲರ್ಸ್‌ ಇದರಿಂದ ಜೀವನ ನಿರ್ವಹಣೆಗೆ ತೊಂದರೆ ಅನುಭವಿಸಬೇಕಾಗಿ ಬಂದಿದೆ. ಈ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆಯ ಮುಖಾಂತರ ಅಂಬೇಡ್ಕರ್‌ ಸಹಾಯಹಸ್ತ ಯೋಜನೆಯಡಿ ಟೈಲರ್ಸ್‌ ಗಳಿಗೆ ವಿವಿಧ ರೀತಿಯ ಸೌಲಭ್ಯ ಸವಲತ್ತು ಗಳನ್ನು ಒದಗಿಸಲು ಸರ್ಕಾರದೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

ಅಪಘಾತ ವಿಮೆ ,ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ಆರೋಗ್ಯ ವಿಮೆ ಯೋಜನೆಗಳನ್ನು ಪಕ್ಕದ ಕೇರಳ,ತಮಿಳುನಾಡು ರಾಜ್ಯದಲ್ಲಿ ಜಾರಿ ಇದ್ದು, ಅದನ್ನು ನಮ್ಮ ರಾಜ್ಯದಲ್ಲಿ ಸಹ ಒದಗಿಸುವಂತೆ ಟೈಲರ್ಸ್‌ ಆಸೋಷಿಯೇಷನ್‌ ರಾಜ್ಯಾಧ್ಯಕ್ಷರು ಮನವಿ ಮಾಡಿದ್ದು, ಈ ಸಂಬಂಧ ವಿಧಾನಸಭಾ ಸ್ವೀಕರ್‌ ಯು.ಟಿ.ಖಾದಿರ್‌ ಹಾಗೂ ಮುಖ್ಯಮಂತ್ರಿಗಳೂಡನೆ ಚರ್ಚಿಸುವುದಾಗಿ ತಿಳಿಸಿದರು. ಶಾಸಕರು ಪಟ್ಟಣದಲ್ಲಿ ಸಮಿತಿಯ ಚಟುವಟಿಕೆಗಳಿಗಾಗಿ ನಿವೇಶನ ಬೇಕೆಂದು ಮನವಿ ಸಲ್ಲಿಸಿದರೆ ಅಭಿವೃದ್ಧಿ ಪ್ರಾಧಿಕಾರದಿಂದ ಶೇ.50 ರಷ್ಟು ಹಣ ಕಟ್ಟಿಸಿಕೊಂಡು ನಿವೇಶನ ಮಂಜೂರು ಮಾಡಿಸಿಕೊಡುವುದಾಗಿ ತಿಳಿಸಿದರು.ವೈದ್ಯಕೀಯ ಸೌಲಭ್ಯ ಕಲ್ಪಿಸಿ

ಟೈಲರ್ಸ್‌ ಆಸೋಷಿಯೇಷನ್‌ ರಾಜ್ಯಾಧ್ಯಕ್ಷ ಬಿ.ಎ.ನಾರಾಯಣ್‌ ಮಾತನಾಡಿ, 40 ವರ್ಷ ಮೇಲ್ಪಟ್ಟ ವೃತ್ತಿಪರ ಟೈಲರ್ಸ್‌ ಗಳಿಗೆ ನಿರತವಾಗಿ ಆರೋಗ್ಯ ಸಮಸ್ಯೆ ಎದುರಿಸವಂತಾಗಿದೆ ಎಂದ ರಾಜ್ಯಾಧ್ಯಕ್ಷರು ರಾಜ್ಯಸರ್ಕಾರವು ನಿರ್ಲಕ್ಷಕ್ಕೆ ಒಳಗಾಗಿರುವ ಟೈಲರ್ಸ್‌ ಗಳಿಗೆ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ಸಮಿತಿ ನೂತನ ವರ್ಷದ ಕ್ಯಾಲೆಂಟರ್‌ ಅನ್ನು ಗಣ್ಯರು ಬಿಡುಗಡೆ ಮಾಡಿದರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ್‌, ಪುರಸಭೆ ಸದಸ್ಯ ಆರ್.ವೆಂಕಟೇಶ್‌ ,ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಧುಸೂಧನ್‌ ,ಕೆ.ಪಿ.ಸಿ.ಸಿ.ಸದಸ್ಯ ಪ್ರದೀಪ್‌ ರೆಡ್ಡಿ , ರಾಜ್ಯ ಟೈಲರ್ಸ್‌ ಆಸೋಷಿಯೇಷನ್‌ ನ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್‌ ಕುಮಾರ್‌ , ಕೋಶಾಧಿಕಾರಿ ರಾಮಚಂದ್ರ, ತಾಲೂಕು ಘಟಕದ ಅಧ್ಯಕ್ಷ ಉಪೇಂದ್ರ ಇನ್ನಿತರರು ಇದ್ದರು.