ಅತಿವೃಷ್ಟಿ, ಸಂಕಷ್ಟದಲ್ಲೇ ವರ್ಷ ಸವೆಸಿದ ಹಾವೇರಿ ಅನ್ನದಾತ

| Published : Dec 31 2024, 01:00 AM IST

ಅತಿವೃಷ್ಟಿ, ಸಂಕಷ್ಟದಲ್ಲೇ ವರ್ಷ ಸವೆಸಿದ ಹಾವೇರಿ ಅನ್ನದಾತ
Share this Article
  • FB
  • TW
  • Linkdin
  • Email

ಸಾರಾಂಶ

ವರ್ಷಾರಂಭದಲ್ಲಿ ಭೀಕರ ಬರ, ಜೂನ್‌ ಬಳಿಕ ನಿಲ್ಲದ ಮಳೆ, ನೆರೆಯಿಂದ ಬೆಳೆ ಹಾನಿ, ಕೊಚ್ಚಿ ಹೋದ ರೈತರ ಬದುಕು...ಹೀಗೆ ಜಿಲ್ಲೆಯ ಅನ್ನದಾತನ ಪಾಲಿಗೆ ನೆಮ್ಮದಿಯಿಲ್ಲದ ವರ್ಷದ ಸಾಲಿಗೆ 2024ನೇ ಇಸ್ವಿ ಕೂಡ ಸೇರಿತು. ನ್ಯಾಯಯುತವಾಗಿ ಬರಬೇಕಿದ್ದ ಪರಿಹಾರಕ್ಕೂ ರೈತರು ಬೀದಿಗಿಳಿದು ಹೋರಾಟ ನಡೆಸುವ ಪರಿಸ್ಥಿತಿ ಬಂದಿರುವುದು ದುರ್ದೈವದ ಸಂಗತಿ.

ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ ಹಾವೇರಿ

ವರ್ಷಾರಂಭದಲ್ಲಿ ಭೀಕರ ಬರ, ಜೂನ್‌ ಬಳಿಕ ನಿಲ್ಲದ ಮಳೆ, ನೆರೆಯಿಂದ ಬೆಳೆ ಹಾನಿ, ಕೊಚ್ಚಿ ಹೋದ ರೈತರ ಬದುಕು... ಹೀಗೆ ಜಿಲ್ಲೆಯ ಅನ್ನದಾತನ ಪಾಲಿಗೆ ನೆಮ್ಮದಿಯಿಲ್ಲದ ವರ್ಷದ ಸಾಲಿಗೆ 2024ನೇ ಇಸ್ವಿ ಕೂಡ ಸೇರಿತು. ನ್ಯಾಯಯುತವಾಗಿ ಬರಬೇಕಿದ್ದ ಪರಿಹಾರಕ್ಕೂ ರೈತರು ಬೀದಿಗಿಳಿದು ಹೋರಾಟ ನಡೆಸುವ ಪರಿಸ್ಥಿತಿ ಬಂದಿರುವುದು ದುರ್ದೈವದ ಸಂಗತಿ.

ನೈಸರ್ಗಿಕ ವಿಕೋಪ, ಹವಾಮಾನ ವೈಪರೀತ್ಯದಿಂದ ಇತ್ತೀಚಿನ ವರ್ಷಗಳಲ್ಲಿ ರೈತರು ನೆಮ್ಮದಿಯಿಂದ ಇದ್ದ ದಿನಗಳೇ ಕಡಿಮೆ. ಒಂದು ವರ್ಷ ಬರಗಾಲದಿಂದ ತತ್ತರಿಸಿದರೆ, ಮತ್ತೊಂದು ವರ್ಷ ರಣಚಂಡಿ ಮಳೆಗೆ ಮನೆ- ಮಠಗಳನ್ನು ಕಳೆದುಕೊಂಡು ರೈತರು ಹೈರಾಣಾಗುತ್ತಿದ್ದಾರೆ. ಈ ಸಾಲಿಗೆ 2024ನೇ ಇಸ್ವಿ ಕೂಡ ಸೇರಿದಂತಾಗಿದೆ. ಜಿಲ್ಲೆಯಲ್ಲಿ ಈ ವರ್ಷ ಜೂನ್‌ನಲ್ಲಿ ಶುರುವಾದ ಮಳೆ ಅಕ್ಟೋಬರ್‌ ಅಂತ್ಯದವರೆಗೂ ಸುರಿದಿದೆ. ಅದರಲ್ಲೂ ಕೆಲವು ದಿನಗಳ ಕಾಲ ನಿರಂತರವಾಗಿ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಹರಿದಿರುವ ವರದಾ, ತುಂಗಭದ್ರಾ, ಧರ್ಮಾ, ಕುಮದ್ವತಿ ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೆರೆಕಟ್ಟೆಗಳು ಭರ್ತಿಯಾಗಿ ಹೊಲಗದ್ದೆಗಳಿಗೆ ನೀರು ನುಗ್ಗಿತು. ಹೊಲದಲ್ಲಿದ್ದ ಬೆಳೆ ಮಳೆಯಿಂದ ಕೊಳೆತು ಹಾಳಾಯಿತು. ಬಿತ್ತಿದಷ್ಟು ಬೆಳೆ ಕೂಡ ರೈತರ ಕೈಸೇರದೇ ಅನ್ನದಾತ ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಯಿತು.

ಅಪಾರ ಹಾನಿ: ಪ್ರಸಕ್ತ ವರ್ಷ ಜೂನ್ ತಿಂಗಳಲ್ಲಿ ಆದ ಅತಿವೃಷ್ಟಿಯಿಂದ ಜಿಲ್ಲೆಯ ವರದಾ, ತುಂಗಭದ್ರಾ ನದಿಗಳ ಹರಿವಿನ ಪ್ರಮಾಣ ಹೆಚ್ಚಾಗಿ ನದಿ ತೀರದ ಜಮೀನುಗಳು ಜಲಾವೃತಗೊಂಡು ಅಪಾರ ಪ್ರಮಾಣದಲ್ಲಿ ಬೆಳೆಗಳು ಹಾನಿಗೊಂಡು ರೈತರು ಸಂಕಷ್ಟ ಎದುರಿಸುವಂತಾಯಿತು. ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಅಂದಾಜು ₹೨೮೦.೮೪ ಲಕ್ಷ ಮೊತ್ತದ ೩೮೨೮ ರೈತರ ೩೩೦೪ ಹೆಕ್ಟೇರ್ ಕೃಷಿ ಬೆಳೆ ಹಾಗೂ ₹೪೫೧.೧೬ ಲಕ್ಷ ಮೊತ್ತದ ೧೧೮೯ ರೈತರ ೪೭೪.೯೦ ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಮಳೆಯಿಂದ ಐದು ಮನೆಗಳು ಸಂಪೂರ್ಣ, ೧೧ ಮನೆಗಳಿಗೆ ತೀವ್ರಹಾನಿ, ೧೪೪೪ ಮನೆಗಳಿಗೆ ಭಾಗಶಃ ಹಾನಿ ಸೇರಿ ೧೪೬೦ ಮನೆಗಳಿಗೆ ಹಾನಿಯಾಗಿದೆ. ೧೫ ದನದ ಕೊಟ್ಟಿಗೆಗಳಿಗೆ ಹಾನಿಯಾಗಿದೆ ಹಾಗೂ ೧೩ ರಸ್ತೆ ಸಂಪರ್ಕಗಳು ಕಡಿತಗೊಂಡವು.

ಕೊಚ್ಚಿಹೋದ ಬಾಲಕ: ಅ.೧೭ರಂದು ಸುರಿದ ರಣಚಂಡಿ ಮಳೆಗೆ ಹಾವೇರಿ ನಗರದ ಚರಂಡಿಯಲ್ಲಿ ಬಾಲಕನೊಬ್ಬ ಕೊಚ್ಚಿ ಹೋದ ಘಟನೆ ನಡೆಯಿತು. ನಿವೇದನ ಗುಡಗೇರಿ (೧೨) ಎಂಬ ಬಾಲಕ ಚರಂಡಿಯಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿರುವುದು ಈ ವರ್ಷದ ಮಳೆಯ ಆರ್ಭಟಕ್ಕೆ ಸಾಕ್ಷಿ. ಇದೂ ಸೇರಿದಂತೆ ಈ ವರ್ಷ ಏಳು ಜನರು ಮಳೆಯಿಂದ ಜೀವ ತೆತ್ತಿದ್ದಾರೆ. ಜಿಲ್ಲೆಯಲ್ಲಿ ೦.೭ ಕಿ.ಮೀ. ರಾಜ್ಯ ಹೆದ್ದಾರಿ, ೮.೭೦ ಕಿ.ಮೀ.ಮುಖ್ಯ ಜಿಲ್ಲಾ ರಸ್ತೆ, ೫೧.೪೬ ಕಿ.ಮೀ.ಗ್ರಾಮೀಣ ರಸ್ತೆ, ೮ ಸಣ್ಣ ಸೇತುವೆಗಳು, ಒಂದು ಕೆರೆ, ೩೩೯ ವಿದ್ಯುತ್ ಕಂಬಗಳು, ೧೮ ಟ್ರಾನ್ಸಫಾರ್ಮರ್‌ಗಳು, ೧.೪೨ ಕಿ.ಮೀ. ವಿದ್ಯುತ್ ತಂತಿ ಹಾಗೂ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳು ಸೇರಿದಂತೆ ಅಂದಾಜು ₹ ೧೭೯೭.೪೭ ಲಕ್ಷ ಮೊತ್ತದ ಹಾನಿ ಸಂಭವಿಸಿದೆ.

ರೈತರ ಹೋರಾಟ: ಜಿಲ್ಲೆಯಲ್ಲಿ ಬರ, ನಿರಂತರ ಅತಿವೃಷ್ಟಿಗೆ ಸಿಲುಕಿದ ಅನ್ನದಾತರ ಸಂಕಷ್ಟಕ್ಕೆ ತಕ್ಷಣ ಸ್ಪಂದನೆ ದೊರೆಯಬೇಕಿತ್ತು. ಸರ್ಕಾರ ರೈತರಿಗೆ ನೆರವು ನೀಡಬೇಕಿತ್ತು. ಆದರೆ, ಹೋರಾಟ ಮಾಡದೇ ಏನೂ ಸಿಗುವುದಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಮೊದಲೇ ಸಂಕಷ್ಟದಲ್ಲಿರುವ ರೈತರು ಪರಿಹಾರಕ್ಕೂ ಬೀದಿಗಿಳಿಯುವ ಪರಿಸ್ಥಿತಿ ಬಂದಿರುವುದು ಖೇದಕರ ಸಂಗತಿ. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ರೈತರು ಈ ವರ್ಷ ಎರಡು ಬಾರಿ ಜಿಲ್ಲಾಡಳಿತ ಭವನದ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದರು. ಜನವರಿ ತಿಂಗಳಲ್ಲಿ ೬ ದಿನ ಹೋರಾಟ ನಡೆಸಿದ ರೈತರು ಗಣರಾಜ್ಯೋತ್ಸವದ ಧ್ವಜಾರೋಹಣ ನಮ್ಮಿಂದಲೇ ಎಂದು ಗುಡುಗಿದ್ದರು. ಇದರ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ರೈತ ನಾಯಕರನ್ನು ಕರೆಸಿ ಬೇಡಿಕೆ ಈಡೇರಿಸುವ ಭರವಸೆ ಮೇರೆಗೆ ಧರಣಿ ಹಿಂಪಡೆದಿದ್ದರು. ಅದರ ಮುಂದುವರಿದ ಭಾಗ ಡಿ. ೭ರಿಂದ ೧೨ ದಿನಗಳ ಕಾಲ ಮತ್ತೆ ಧರಣಿ ನಡೆಸಿದ್ದರು. ಇದರ ಪರಿಣಾಮ ಸರ್ಕಾರದ ಭಾಗವಾದ ಸಚಿವರು ರೈತ ನಾಯಕರನ್ನು ಬೆಳಗಾವಿ ಅಧಿವೇಶನ ಸ್ಥಳಕ್ಕೆ ಕರೆಸಿಕೊಂಡು ಸೌಹಾರ್ದ ಮಾತುಕತೆ ನಡೆಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ಆದರೆ ವರ್ಷ ಪೂರ್ಣಗೊಂಡರೂ ರೈತರ ಬೇಡಿಕೆ ಇನ್ನೂ ಬೇಡಿಕೆಯಾಗಿಯೇ ಉಳಿದಿರುವುದು ದೌರ್ಭಾಗ್ಯವೇ ಸರಿ. ಈ ವರ್ಷದ ಕಹಿ ಘಟನೆಗಳನ್ನು ಮರೆತು 2025ನೇ ಇಸ್ವಿ ಸುಖಮಯವಾಗಿರಲಿ ಎಂಬ ಆಶಯದೊಂದಿಗೆ ರೈತರು ಹೊಸ ವರ್ಷದ ಸ್ವಾಗತಕ್ಕೆ ಅಣಿಯಾಗಿದ್ದಾರೆ.

ಸಾಹಿತಿ, ಕಲಾವಿದರಿಗೆ ಪ್ರಶಸ್ತಿಯ ಗರಿ: ಹಾವೇರಿಯ ಹಾವನೂರು ಪ್ರತಿಷ್ಠಾನದ ವಿರೂಪಾಕ್ಷಪ್ಪ ಹಾವನೂರ ಅವರು ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದ್ದರೆ, ಬ್ಯಾಡಗಿ ಪಟ್ಟಣದ ಮಹಿಳಾ ಸಾಹಿತಿ ಸಂಕಮ್ಮ ಸಂಕಣ್ಣನವರ ಅವರು ಕರ್ನಾಟಕ ಸಂಭ್ರಮ-೫೦ ಸುವರ್ಣ ಮಹೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶಿಗ್ಗಾಂವಿ ತಾಲೂಕಿನ ಬೆಳಗಲಿ ಗ್ರಾಮದ ಮೂರ್ತಿ ತಯಾರಕ ಮಾನಪ್ಪ ಬಡಿಗೇರ ಅವರಿಗೆ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಗೌರವ ಪ್ರಶಸ್ತಿ ಒಲಿದು ಬಂದಿದ್ದರೆ, ಬ್ಯಾಡಗಿ ಪಟ್ಟಣದ ಕಲಾವಿದ ಮರಿಯಪ್ಪ ಹೊನ್ನಮ್ಮನವರು ಶಿಲ್ಪಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. 30ಎಚ್‌ವಿಆರ್‌1, 1ಎ