ಶ್ರಮದ ಬದುಕಿಗೆ ಕಾಯಕ ಜೀವಿ ಒಕ್ಕಲಿಗ ಮುದ್ದಣ ಮಾರ್ಗದರ್ಶಿ

| Published : Dec 31 2024, 01:00 AM IST

ಶ್ರಮದ ಬದುಕಿಗೆ ಕಾಯಕ ಜೀವಿ ಒಕ್ಕಲಿಗ ಮುದ್ದಣ ಮಾರ್ಗದರ್ಶಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗ ಬಸವಕೇಂದ್ರ ಮುರುಘಾಮಠದಲ್ಲಿ ನಡೆದ ಒಕ್ಕಲಿಗ ಮುದ್ದಣ್ಣ ಜಯಂತಿ ಆಚರಣೆಯಲ್ಲಿ ಡಾ.ಬಸವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಶ್ರಮದ ಬದುಕಿಗೆ 12ನೇ ಶತಮಾನದ ಕಾಯಕ ಜೀವಿ ಒಕ್ಕಲಿಗ ಮುದ್ದಣ್ಣ ಮಾರ್ಗದರ್ಶಿ ಎಂದು ಚಿತ್ರದುರ್ಗದ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಮುರುಘರಾಜೇಂದ್ರ ಬೃಹನ್ಮಠದ ಮುರುಗಿಯ ಶಾಂತವೀರ ಮಹಾ ಸ್ವಾಮಿಗಳವರ ಲೀಲಾ ವಿಶ್ರಾಂತಿ ತಾಣದ ಮುಂಭಾಗದಲ್ಲಿ ಸೋಮವಾರ ಏರ್ಪಡಿಸಿದ್ದ ಒಕ್ಕಲಿಗರ ಮುದ್ದಣ್ಣನವರ ಜಯಂತಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮಣ್ಣಲ್ಲಿ ಮಣ್ಣಾಗಿ ದುಡಿದು ಚಿನ್ನದಂತಹ ಬದುಕು ಕಟ್ಟಿಕೊಳ್ಳುವ ಪರಮ ಸತ್ಯವನ್ನು ತೋರಿಸಿಕೊಟ್ಟಿದ್ದಾರೆ ಎಂದರು.

ಬೇಸಾಯದ ಪರಿಭಾಷೆಯಲ್ಲಿ ಆಧ್ಯಾತ್ಮಿಕ ವಿಷಯಗಳನ್ನು ತಮ್ಮ ವಚನಗಳಲ್ಲಿ ಪ್ರಸ್ತಾಪಿಸುತ್ತ ಜಂಗಮ ದಾಸೋಹ ನಡೆಸುವುದು ಒಕ್ಕಲಿಗ ಮುದ್ದಣ್ಣನವರ ನಿತ್ಯ ವ್ರತವಾಗಿತ್ತು. ಒಮ್ಮೆ ರಾಜರು ಇವರಿಗೆ ತೆರಿಗೆಯನ್ನು ಕೇಳಿದಾಗ ಕೊಡದೆ ಆ ಹಣವನ್ನು ದಾಸೋಹಕ್ಕಾಗಿ ವಿನಯೋಗಿಸುವ ಪಥ ಅನುಸರಿಸಿದವರು. ಪರಮ ಜ್ಞಾನಿಗಳು ಸಂಶೋಧಕರಾದವರು ಒಂದು ಹೂವನ್ನು ಕಂಡಾಗ ಅದರ ಬಗ್ಗೆ ವರ್ಣನೆಗೆ, ಸಂಶೋಧನೆಗೆ ತೊಡಗುತ್ತಾರೆ. ಹಾಗೆಯೇ ಈ ಪ್ರಪಂಚವನ್ನು ನೋಡಿ ಅದರ ಮೂಲ ಯಾವುದು? ಈ ಜಗತ್ತು ಹೇಗೆ ನಿರ್ಮಾಣವಾಯಿತು? ಏಕೆ ನಿರ್ಮಾಣವಾಯಿತು ಎಂಬ ಸಂಶೋಧನೆಗೆ ತೊಡಗಿದವರು ಒಂದು ದಿನ ಆ ಪರಮಸತ್ಯ, ಪರಮಾತ್ಮನನ್ನು ಅರಿತು ಅವಿರಳಾನಂದನವನ್ನು ಪಡೆಯುತ್ತಾರೆ. ಅಂತಹ ಶರಣರಲ್ಲಿ ಒಕ್ಕಲಿಗ ಮುದ್ದಣ್ಣ ಒಬ್ಬರೆಂದರು.

ಸಿರಿ, ಸಂಪದ, ದನ, ಕನಕ ಅಧಿಕಾರ ಅಂತಸ್ತುಗಳೇ ಬದುಕಿನ ಗುರಿಯಲ್ಲ. ಈ ಪ್ರಾಪಂಚಿಕ ವಿಷಯಗಳ ಗಳಿಕೆಯಿಂದ ದೊರೆಯುವ ಸುಖವು ಅತ್ಯಂತ ಕ್ಷಣಿಕವಾದದ್ದು. ಆದರೆ ಪರಮ ಸತ್ಯ ಪರಮಾತ್ಮನ ಸಾಕ್ಷಾತ್ಕಾರ ಶಾಶ್ವತವಾದದ್ದು. ಅಂಗವೇ ಭೂಮಿಯಾಗಿ ಅಂಥ ಆತ್ಮಾನಂದವನ್ನು ಪಡೆಯುವುದಕ್ಕೆ ನಾವೆಲ್ಲರೂ ಬದುಕಿನ ಭೌತಿಕ ದೇಹಾರೋಗ್ಯ ಚಟುವಟಿಕೆಯ ಕೃಷಿಯ ಜತೆಗೆ ಆಧ್ಯಾತ್ಮಿಕ ಕೃಷಿ ಮಾಡಬೇಕು ಎಂದು ಮುದ್ದಣ್ಣ ಹೇಳುತ್ತಾರೆ ಎಂದರು.

ನಿವೃತ್ತ ಪ್ರಾಚಾರ್ಯ, ಜಾಗತಿಕ ಲಿಂಗಾಯತ ಮಹಾಸಭಾದ ಮುಖ್ಯಸ್ಥ ಜಿ.ಟಿ.ನಂದೀಶ್ ಮಾತನಾಡಿ, ನುಡಿಗೆ ತಕ್ಕ ನಡೆ ಇರಬೇಕಾಗುತ್ತದೆ. ಹಾಗೆ ಜ್ಞಾನಕ್ಕೆ ತಕ್ಕ ಕ್ರಿಯೆ ಇಲ್ಲದಿದ್ದರೆ ಅವರ ಜೀವನ ವ್ಯರ್ಥವೆಂದು ಒಕ್ಕಲಿಗ ಮುದ್ದಣನವರು ತಮ್ಮ ಜೀವನ ಮತ್ತು ಕಾಯಕದ ಮೂಲಕ ನಡೆದು ತೋರಿ ಸಾರಿದ್ದಾರೆ. ತಾನು ನಂಬಿದ ಬದುಕಿನ ಆಧಾರದ ವ್ಯವಸಾಯದ ಜೊತೆಗೆ ಆಧ್ಯಾತ್ಮಿಕ ಕೃಷಿ ಮಾಡುತ್ತ 12ನೇ ಶತಮಾನದ ಬಸವಾದಿ ಶಿವಶರಣರ ಸಂಕುಲದಲ್ಲಿದ್ದು ತಮ್ಮದೇ ಆದ ಇರುವಿಕೆ ತೋರಿಸಿದ ಮಹನೀಯರಾಗಿದ್ದರೆ ಎಂದು ಬಣ್ಣಿಸಿದರು.

ನಿಪ್ಪಾಣಿ ಬಸವ ಕೇಂದ್ರದ ಮಲ್ಲಿಕಾರ್ಜುನ ಸ್ವಾಮೀಜಿ, ಜಾಗತಿಕ ಲಿಂಗಾಯತ ಮಹಾಸಭಾದ ಬಸವರಾಜ ಕಟ್ಟಿ, ಜೆ.ಎಸ್ ಮುರುಘೇಶ್, ಪ್ರಾಧ್ಯಾಪಕರಾದ ಡಾ.ಆನಂದ್, ನವೀನ್ ಮಸ್ಕಲ್, ನಾಗಲಾಂಬಿಕಾ, ಎಸ್‌ಜೆಎಂ ಕನ್ನಡ ಶಾಲೆಯ ಮುಖ್ಯ ಶಿಕ್ಷಕ ವೀರಭದ್ರಪ್ಪ, ನಿವೃತ್ತ ಪ್ರಾಚಾರ್ಯ ಟಿ.ಪಿ.ಜ್ಞಾನಮೂರ್ತಿ ಸೇರಿ ಶಾಲಾ ಕಾಲೇಜುಗಳ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.