ಸುಳ್ಳು ಪ್ರಮಾಣಪತ್ರದಿಂದ ಪರಿಶಿಷ್ಟ ಪಂಗಡದವರ ಹಕ್ಕಿಗೆ ಧಕ್ಕೆ: ನೀರಗಂಟಿ ವೀರೇಶ್

| Published : Sep 26 2025, 01:01 AM IST

ಸುಳ್ಳು ಪ್ರಮಾಣಪತ್ರದಿಂದ ಪರಿಶಿಷ್ಟ ಪಂಗಡದವರ ಹಕ್ಕಿಗೆ ಧಕ್ಕೆ: ನೀರಗಂಟಿ ವೀರೇಶ್
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರವು ಹಲವು ಜಾತಿಗಳನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಪಟ್ಟಿಗೆ ಸೇರಿಸಲು ನಡೆಸುತ್ತಿರುವ ಹುನ್ನಾರ ಖಂಡಿಸಿ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕು ಘಟಕದ ಪದಾಧಿಕಾರಿಗಳು ಗುರುವಾರ ಕಂಪ್ಲಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಕಂಪ್ಲಿ: ರಾಜ್ಯ ಸರ್ಕಾರವು ಹಲವು ಜಾತಿಗಳನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಪಟ್ಟಿಗೆ ಸೇರಿಸಲು ನಡೆಸುತ್ತಿರುವ ಹುನ್ನಾರ ಖಂಡಿಸಿ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕು ಘಟಕದ ಪದಾಧಿಕಾರಿಗಳು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಮಹಾಸಭಾದ ತಾಲೂಕು ಅಧ್ಯಕ್ಷ ನೀರಗಂಟಿ ವೀರೇಶ್ ಮಾತನಾಡಿ, ರಾಜ್ಯಾದ್ಯಂತ ಅನೇಕ ಜಾತಿಯವರು ಪರಿಶಿಷ್ಟ ಪಂಗಡಕ್ಕೆ ಸೇರಲು ಸುಳ್ಳು ಜಾತಿ ಪ್ರಮಾಣಪತ್ರ ಪಡೆಯುತ್ತಿದ್ದಾರೆ. ಇದನ್ನು ತಡೆಯಲು ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಇನ್ನೂ ಯಾವುದೇ ಗಂಭೀರ ಕ್ರಮ ಕೈಗೊಂಡಿಲ್ಲ. ವಿಶೇಷವಾಗಿ ಬೀದರ್, ಕಲ್ಬುರ್ಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಪ್ರವರ್ಗ-1ರಲ್ಲಿ ಬರುವ ಬೆಸ್ತ, ಅಂಬಿಗ, ಕಬ್ಬಲಿಗ, ಕಬ್ಬೇರ, ಕೋಲಿ ಮೊದಲಾದ ಜಾತಿಯವರು ತಳವಾರ ಅಥವಾ ಪರಿವಾರ ಎಂಬ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದುಕೊಂಡು ಸರ್ಕಾರದ ಸೌಲಭ್ಯಗಳನ್ನು ಕಬಳಿಸುತ್ತಿದ್ದಾರೆ. 2020ರಿಂದ ಇದುವರೆಗೆ 2 ಲಕ್ಷಕ್ಕೂ ಹೆಚ್ಚು ಸುಳ್ಳು ಪ್ರಮಾಣಪತ್ರಗಳನ್ನು ಪಡೆದು ನೈಜ ಪರಿಶಿಷ್ಟ ಪಂಗಡದವರ ಹಕ್ಕಿಗೆ ಧಕ್ಕೆ ತಂದಿದ್ದಾರೆ. ಇದು ದೊಡ್ಡ ಅನ್ಯಾಯವಾಗಿದ್ದು, ಸುಳ್ಳು ಪ್ರಮಾಣಪತ್ರ ನೀಡಿದ ಅಧಿಕಾರಿಗಳ ಮೇಲೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇನ್ನು ಪರಿಶಿಷ್ಟ ಪಂಗಡ ಪಟ್ಟಿಯಲ್ಲಿರುವ ನಾಯಕ, ಪರಿವಾರ, ನಾಯಕ ತಳವಾರ ಈ ಬುಡಕಟ್ಟು ಜನಾಂಗಗಳ ಹಕ್ಕನ್ನು ಬೇರೆ ಜಾತಿಯವರು ದೋಚುವ ಪ್ರಯತ್ನ ಮಾಡುತ್ತಿದ್ದಾರೆ. ಸರ್ಕಾರ ತಕ್ಷಣವೇ ಈ ನಕಲಿ ಪ್ರಮಾಣಪತ್ರಗಳನ್ನು ರದ್ದುಪಡಿಸಿ, ಮುಂದಿನ ದಿನಗಳಲ್ಲಿ ಇಂತಹ ದುರುದ್ದೇಶಿ ಕೆಲಸಗಳಿಗೆ ಅವಕಾಶ ನೀಡಬಾರದು. ಇಲ್ಲವಾದಲ್ಲಿ ರಾಜ್ಯಾದ್ಯಂತ ತೀವ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಾಲ್ಮೀಕಿ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಮುಖ್ಯ ರಸ್ತೆ ಮಾರ್ಗವಾಗಿ ಸಂಚರಿಸಿ ಅಂಬೇಡ್ಕರ್ ವೃತ್ತದ ಬಳಿ ಸಮಾವೇಶಗೊಂಡಿತು. ಇದೆ ವೇಳೆ ತಹಸೀಲ್ದಾರ್ ಜೂಗಲ ಮಂಜುನಾಯಕ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ವಾಲ್ಮೀಕಿ ಸಮುದಾಯದ ಮುಖಂಡರಾದ ಬಿ. ನಾರಾಯಣಪ್ಪ, ಡಿ. ಈರಣ್ಣ, ಎನ್. ರಾಮಾಂಜನೇಯಲು, ಡಾ. ವೆಂಕಟೇಶ್, ಬಿ. ಅಂಬಣ್ಣ, ವಾಲ್ಮೀಕಿ ರಾಘವೇಂದ್ರ, ಪಿ. ವೀರೇಶ್, ವಾಲ್ಮೀಕಿ ಈರಣ್ಣ, ತಿಮ್ಮಪ್ಪ ನಾಯಕ, ಪೈಲ್ವಾನ್ ವೀರೇಶ್, ಕೊಟ್ಟಾಲ್ ನಾಗಭೂಷಣ, ನಾಯಕರ ವೆಂಕೋಬಾ ಇತರರಿದ್ದರು.