ಸಾರಾಂಶ
ಕನ್ನಡಪ್ರಭ ವಾರ್ತೆ ಪಾವಗಡ
ಕೃಷಿ ಸಾಲದ ಮೇಲೆ ಹೆಚ್ಚಿನ ಬಡ್ಡಿ ವಿಧಿಸಿ ರೈತರಿಂದ ಸಾಲ ವಸೂಲಾತಿಗೆ ಮುಂದಾದ ಬ್ಯಾಂಕ್ ಕ್ರಮ ಹಾಗೂ ದೌರ್ಜನ್ಯ ಖಂಡಿಸಿ, ಗ್ರಾಮೀಣ ಪ್ರದೇಶದ ನೂರಾರು ಮಂದಿ ರೈತರು ಪಟ್ಟಣದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಿದರು.ಬೆಳೆ ವಿಮೆ, ಇತರೆ ಕೃಷಿ ಸಾಲಗಳ ಮೇಲೆ ಶೇ.ಹೆಚ್ಚಿನ ಬಡ್ಡಿ ವಿಧಿಸಿ ವಸೂಲಿಗೆ ಮುಂದಾದ ಕ್ರಮದಿಂದ ರೈತರು ಹೈರಾಣಿಗಿದ್ದು ಬೆಳೆ ನಷ್ಟದಿಂದ ಅಸಲು ಸಾಲ ಕಟ್ಟಲು ಕೊಡ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಕಷ್ಟ ಕಾಲದಲ್ಲಿ 1ಲಕ್ಷ ಸಾಲಕ್ಕೆ ಹೆಚ್ಚಿನ ಬಡ್ಡಿ ವಿಧಿಸಿ ಅಸಲು ಹಾಗೂ ಬಡ್ಡಿ ಸಮೇತ ಕಟ್ಟುವಂತೆ ಬ್ಯಾಂಕ್ ವ್ಯವಸ್ಥಾಪಕ ನೋಟಿಸ್ ನೀಡಿ ಧಮಾಕಿ ಹಾಕುತ್ತಿದ್ದಾರೆ. ಇದರಿಂದ ರೈತರಿಗೆ ಸಮಸ್ಯೆ ಆಗಿದೆ ಎಂದು ತಾಲೂಕಿನ ಸೂಲನಾಯನಹಳ್ಳಿ, ಎತ್ತಿನಹಳ್ಳಿ, ಪೊನ್ನಸಮುದ್ರ, ಸಿಂಗರೆಡ್ಡಿಹಳ್ಳಿ ಬೂದಿಬೆಟ್ಟ, ನಾಗಲಮಡಿಕೆ ವಳ್ಳೂರು ಇತರೆ ಗ್ರಾಮದ ನೂರಾರು ಮಂದಿ ರೈತರು ಪಟ್ಟಣದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗೆ ಮುತ್ತಿಗೆ ಹಾಕಿ ಸಾಲ ವಸೂಲಾತಿಯಲ್ಲಿ ಬ್ಯಾಂಕ್ ವ್ಯವಸ್ಥಾಪಕನ ಕಿರುಕುಳದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪ್ರತಿಭಟನೆ ನೇತೃತ್ವ ವಹಿಸಿ ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ ಮಾತನಾಡಿ, ಕಳೆದ ಮೂರು ನಾಲ್ಕು ವರ್ಷದ ಹಿಂದೆ ಜಮೀನ ಬೆಳೆ ಆಧಾರದ ಮೇಲೆ 4ಲಕ್ಷ ಸಾಲ ಪಡೆದಿದ್ದು,ಬೆಳೆ ನಷ್ಟದಿಂದ ಸಕಾಲಕ್ಕೆ ಸಾಲ ತಿರುವಳಿ ಮಾಡಲು ಸಾಧ್ಯವಾಗಲಿಲ್ಲ. ಈಗ ನಾಲ್ಕು ಲಕ್ಷ ಕೃಷಿ ಸಾಲಕ್ಕೆ ಅಸಲು ಬಿಟ್ಟು 20ಲಕ್ಷ ಬಡ್ಡಿ ವಿಧಿಸಿದ್ದಾರೆ. ಅಸಲು ಬಡ್ಡಿ ಸೇರಿ 24ಲಕ್ಷ ಕಟ್ಟಿ ಅಂತಾ ಸಾಲಗಾರ ರೈತರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಈ ರೀತಿ ಬ್ಯಾಂಕ್‌ನ ವ್ಯವಸ್ಥಾಪಕ ಸಿಬ್ಬಂದಿ ಒತ್ತಡ ಹೇರಿದರೆ, ಸಾಲಕಟ್ಟಲು ಸಾಧ್ಯವಾಗದೇ ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ. ಸಾಲದ ಕಿರುಕುಳದಿಂದ ರೈತ ಆತ್ಮಹತ್ಯೆ ಮಾಡಿಕೊಂಡರೆ ಇದರ ಹೊಣೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳ ಹೊರಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರೈತ ಮುಖಂಡ ವೈ.ಎನ್.ಹೊಸಕೋಟೆ ಎಸ್.ಟಿ.ನಾಗರಾಜ್, ತಿಮ್ಮಾರೆಡ್ಡಿ, ಸೂಲನಾಯಕನಹಳ್ಳಿಯ ಮಂಜು, ಶನಿವಾರಪ್ಪ,ಸುಬ್ರಮಣ್ಯಂ ಹಾಗೂ ರೈತ ಸಂಘದ ನಾರಾಯಣರೆಡ್ಡಿ, ತಾಲೂಕು ಅಧ್ಯಕ್ಷ ಶಿವು, ಜಿಲ್ಲಾ ರೈತ ಸಂಘದ ದಂಡುಪಾಳ್ಯ ರಾಮಾಂಜಿನಪ್ಪ, ರಮೇಶ್, ತಾಳೇ ಮರದಹಳ್ಳಿ ಗೋವಿಂದಪ್ಪ,ನಾಗರಾಜಪ್ಪ ಚಿತ್ತಯ್ಯ ಸದಾಶಿವಪ್ಪ,ಹನುಮಂತರಾಯಪ್ಪ ವೀರಭದ್ರಪ್ಪ, ಮಂಜುನಾಥ್ ಹಾಗೂ ಇತರೆ ಅನೇಕ ಮಂದಿ ರೈತ ಮುಖಂಡರಿದ್ದರು.