ವಕೀಲರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿದೆ

| Published : Sep 20 2025, 01:01 AM IST

ಸಾರಾಂಶ

ಸಮಾಜ ನಿರ್ಮಾಣ ಮಾಡುವಲ್ಲಿ ವಕೀಲರ ಪಾತ್ರ ಮಹತ್ತರವಾಗಿದ್ದು, ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎನ್ ಕುಮಾರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಸಮಾಜ ನಿರ್ಮಾಣ ಮಾಡುವಲ್ಲಿ ವಕೀಲರ ಪಾತ್ರ ಮಹತ್ತರವಾಗಿದ್ದು, ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎನ್ ಕುಮಾರ್ ತಿಳಿಸಿದರು.

ಗುಬ್ಬಿ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕಾಲಕ್ಕೆ ತಕ್ಕಂತೆ ಹೊಸ ಕಾನೂನುಗಳನ್ನು ರಚಿಸುವುದು ಅನಿವಾರ್ಯವಾಗಿದೆ. ಅವುಗಳ ಜ್ಞಾನವನ್ನು ಪಡೆದುಕೊಂಡು ವೃತ್ತಿಯಲ್ಲಿ ನಿರತರಾಗಬೇಕು. ಇಲ್ಲವಾದಲ್ಲಿ ವೃತ್ತಿಯ ಘನತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ವಕೀಲರು ಸಾಮಾಜಿಕ ಕಳಕಳಿ ಇಟ್ಟುಕೊಂಡು ವೃತ್ತಿ ನಿರತರಾದಲ್ಲಿ ಜನಮನದಲ್ಲಿ ಉಳಿದು ನ್ಯಾಯಾಂಗದ ಬಗ್ಗೆ ಗೌರವ ಹೆಚ್ಚಾಗಲು ಸಾಧ್ಯವಾಗುವುದು. ವಕೀಲ ವೃತ್ತಿಯೂ ಉದಾತ್ತವಾದ ವೃತ್ತಿಯಾಗಿದ್ದು, ಹಣ ಸಂಪಾದನೆಯ ಜೊತೆಗೆ ಸಾಮಾಜಿಕ ಪರಿಸ್ಥಿತಿಯ ಅರಿವು ಇರಬೇಕು ಎಂದು ಹೇಳಿದರು.

ಹಿರಿಯ ವಕೀಲರು ಕಿರಿಯ ವಕೀಲರಿಗೆ ಮಾರ್ಗದರ್ಶನ ನೀಡುತ್ತಾ ಅರಿವು ಮೂಡಿಸಬೇಕಿದೆ. ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸುವ ಸಾರ್ಥಕ ಸೇವೆ ಮಾಡುವತ್ತ ವಕೀಲರು ಗಮನಹರಿಸಬೇಕು. ದೇಶದ ಸ್ವಾತಂತ್ರ್ಯ ಪೂರ್ವದಿಂದ ಇಂದಿನವರೆಗೂ ದೇಶ ಕಟ್ಟುವಲ್ಲಿ ವಕೀಲರ ಪಾತ್ರ ಮಹತ್ತರವಾಗಿದೆ ಎನ್ನುವುದನ್ನು ಅರಿಯಬೇಕು ಎಂದು ಹೇಳಿದರು.

ಕರ್ನಾಟಕ ರಾಜ್ಯ ವಕೀಲ ಪರಿಷತ್ತಿನ ಅಧ್ಯಕ್ಷ ಎಸ್ ಎಸ್ ವಿತ್ತಲಕೋಡ್ ಮಾತನಾಡಿ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ವಕೀಲರ ಸಂಘಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡುವ ಜೊತೆಗೆ ಹೊಸ ಕಾನೂನುಗಳ ಬಗ್ಗೆ ಅರಿವು ಮೂಡಿಸಲು ಕಾರ್ಯಗಾರಗಳನ್ನು ಏರ್ಪಡಿಸಲಾಗುತ್ತಿದೆ.ಕಾನೂನು ಪರಿಣಿತರಾಗಿರುವ ವಕೀಲರು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ವಕೀಲ ಪರಿಷತ್ತಿನ ಕಾನೂನು ಅಕಾಡೆಮಿ ಅಧ್ಯಕ್ಷ ಎಸ್ ಎಫ್ ಗೌತಮ್ ಚಂದ್ ಮಾತನಾಡಿ ಪ್ರತಿ ವರ್ಷ 4 ರಿಂದ 5 ಸಾವಿರ ಯುವ ವಕೀಲರು ನೋಂದಣಿ ಆಗುತ್ತಿದ್ದರೂ ಅರ್ಹತಾ ಪರೀಕ್ಷೆಯಲ್ಲಿ ಪಾಸು ಆಗದೆ ಇರುವುದರಿಂದ ವೃತ್ತಿಯಲ್ಲಿ ಯಶಸ್ಸು ಕಾಣದಂತಾಗಿರುವುದು ದುರಾದೃಷ್ಟಕರ. ಓದಿನ ಜ್ಞಾನ ಹೆಚ್ಚಾದಂತೆ ಕಾನೂನುಗಳ ಬಗ್ಗೆ ಹಿಡಿತ ಸಾಧಿಸಲು ಸಾಧ್ಯವಾಗುವುದು ಎನ್ನುವುದನ್ನು ವಕೀಲರು ಅರಿಯಬೇಕಿದೆ ಎಂದು ತಿಳಿಸಿದರು.

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಅನುಪಮ ಡಿ ಮಾತನಾಡಿ, ವಕೀಲರು ಕಾನೂನು ಪರಿಣಿತಿ ಯನ್ನು ಹೊಂದಿದ್ದಲ್ಲಿ ಕಕ್ಷಿದಾರರಿಗೆ ನ್ಯಾಯ ಒದಗಿಸಲು ಸಾಧ್ಯವಾಗುವುದು. ವಕೀಲರಿಗೆ ವಿಶೇಷ ಕಾರ್ಯಾಗಾರಗಳನ್ನು ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆ ಯಾಗಿದೆ. ಈ ನಿಟ್ಟಿನಲ್ಲಿ ವಕೀಲರಿಗೆ ಅಗತ್ಯವಿರುವ ಎಲ್ಲಾ ಸಹಕಾರ ನೀಡುವುದಾಗಿ ತಿಳಿಸಿದರು.

ಕರ್ನಾಟಕ ರಾಜ್ಯ ವಕೀಲ ಪರಿಷತ್ತಿನ ಸದಸ್ಯ ಆರ್ ರಾಜಣ್ಣ ಮಾತನಾಡಿ ಇಡೀ ರಾಜ್ಯದಲ್ಲಿಯೇ ಗುಬ್ಬಿವಕೀಲರ ಸಂಘವು ನಿರಂತರವಾಗಿ ಕಾರ್ಯಗಾರಗಳನ್ನು ನಡೆಸುತ್ತಿದೆ. ವಕೀಲರ ಸಂಘಕ್ಕೆ ಅಗತ್ಯವಿರುವ ವಕೀಲರ ಭವನ ನಿರ್ಮಾಣಕ್ಕೆ ಪರಿಷತ್ತು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಸದಾ ವಕೀಲರ ಸಂಘದ ಬೆಂಬಲಕಿದ್ದು ಎಲ್ಲಾ ಸಹಕಾರ ನೀಡುವುದಾಗಿ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಪೂರ್ಣಿಮಾ ಕೆ ಯಾದವ್,ಎಸ್ ಪಿ ಕಿರಣ್, ಮೇದ ಪಿ ಎಂ, ವಕೀಲರ ಸಂಘದ ಅಧ್ಯಕ್ಷ ಎಂ ಪಿ ಮೋಹನ್, ಉಪಾಧ್ಯಕ್ಷ ಸಿ ಕೆ ರವೀಂದ್ರ, ಕಾರ್ಯದರ್ಶಿ ಎಂ ಪಿ ರವೀಶ್, ಜಂಟಿ ಕಾರ್ಯದರ್ಶಿ ರಂಗಸ್ವಾಮಿಯ್ಯ, ಖಜಾಂಚಿ ಪಿ ಎಂ ಪುಷ್ಪಾವತಿ,ವಕೀಲರ ಸಂಘದ ಎಲ್ಲಾ ಪದಾಧಿಕಾರಿಗಳು,ವಕೀಲರು ಭಾಗವಹಿಸಿದ್ದರು.