ಧರ್ಮ: ಕಾನೂನು ತಜ್ಞರ ಸಲಹೆ ಪಡೆಯಿರಿ

| Published : Sep 20 2025, 01:01 AM IST

ಸಾರಾಂಶ

ರ್ಥಿಕ, ಸಾಮಾಜಿಕ ಗಣತಿ ವೇಳೆ ಮಾನ್ಯತೆ ಇಲ್ಲದೇ ಇರುವ ಧರ್ಮದ ಹೆಸರು ಬರೆಸಿದರೆ ಅದಕ್ಕೆ ಮಾನ್ಯತೆ ಸಿಗುವುದಿಲ್ಲ

ಹುಬ್ಬಳ್ಳಿ: ಸಂವಿಧಾನದಲ್ಲಿ ಆರು ಧರ್ಮಗಳಿಗೆ ಮಾನ್ಯತೆ ನೀಡಲಾಗಿದೆ. ವೀರಶೈವ ಲಿಂಗಾಯತ ಸ್ವತಂತ್ರ ಧರ್ಮವಾಗಬೇಕು ಎಂದು ಪ್ರಯತ್ನ ನಡೆದಿದೆ. ಈ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಇನ್ನೂ ಮಾನ್ಯತೆ ನೀಡಿಲ್ಲ. ಹೀಗಿರುವಾಗ ಈ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆದು ಧರ್ಮದ ಕಾಲಂನಲ್ಲಿ ಏನೆಂದು ನಮೂದಿಸಬೇಕು ಎಂಬುದನ್ನು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ನಿರ್ಧರಿಸಬೇಕು ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಜಗದ್ಗುರುಗಳು ಹೇಳಿದರು.

ಏಕತಾ ಸಮಾವೇಶದಲ್ಲಿ ಮಾತನಾಡಿದ ಅವರು, ಆರ್ಥಿಕ, ಸಾಮಾಜಿಕ ಗಣತಿ ವೇಳೆ ಮಾನ್ಯತೆ ಇಲ್ಲದೇ ಇರುವ ಧರ್ಮದ ಹೆಸರು ಬರೆಸಿದರೆ ಅದಕ್ಕೆ ಮಾನ್ಯತೆ ಸಿಗುವುದಿಲ್ಲ. ವೀರಶೈವ-ಲಿಂಗಾಯತ ಧರ್ಮವಾದರೆ ಉತ್ತಮ, ಆದರೆ ಸದ್ಯ ಆಗಿಲ್ಲ. ಹೀಗಾಗಿ ಕಾನೂನು ತಜ್ಞರ ಸಲಹೆ ಪಡೆಯುವುದು ಉತ್ತಮ. ಈ ಕೆಲಸ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಕಾನೂನು ತಜ್ಞರ ಜೊತೆ ಚರ್ಚಿಸಿ ಧರ್ಮದ ಕುರಿತಂತೆ ನಿರ್ಧಾರ ಕೈಗೊಳ್ಳಬೇಕು ಎಂದರು. ಅಲ್ಲದೇ, ಹೊಸ ಧರ್ಮ ಹುಟ್ಟು ಹಾಕುವುದಕ್ಕಿಂತ ಈಗಿರುವ ಧರ್ಮವನ್ನು ಬೆಳೆಸುವುದು ಉತ್ತಮ. ಹೀಗಾಗಿ, ಕಾನೂನು ತಜ್ಞರ ಸಲಹೆ ಮೇರೆಗೆ ಮುಂದುವರಿಯುವುದು ಉತ್ತಮ ಎಂದರು.

ಸಮಾಜದ ಏಕತೆಗಾಗಿ ಮಹಾಸಭೆ ಕರೆದಾಗ ತಾವೂ ಸೇರಿದಂತೆ ಯಾರೊಬ್ಬರು ಸ್ಥಾನಮಾನ ಗಮನಿಸಿಲ್ಲ. ನಡೆಯುವ ದಾರಿಯಲ್ಲಿ ಸ್ವಲ್ಪ ಏರುಪೇರಾಗಿರಬಹುದು. ಎಲ್ಲರೂ ಸರಿಮಾಡಿಕೊಂಡು ಹೋದರೆ ಸಮಾಜಕ್ಕೆ ಉಜ್ವಲ ಭವಿಷ್ಯವಿದೆ ಎಂದು ಹೇಳಿದರು.