ಕನ್ನಡಪ್ರಭವಾರ್ತೆ, ಹಾಸನ
ಆಲೂರು ತಾಲೂಕಿನ ಹೊಸಮಠ ಗ್ರಾಮದ ಸಮೀಪದಲ್ಲಿರುವ ಕ್ರೈಸ್ತರ ಪವಿತ್ರ ಸ್ಥಳವಾದ ಶಿಲುಬೆ ಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಚಟುವಟಿಕೆಗಳು ಸುತ್ತಮುತ್ತಲಿನ ಗ್ರಾಮಗಳ ಜನಜೀವನ ಅಸ್ತವ್ಯಸ್ತಗೊಳಿಸುತ್ತಿವೆ. ಗಣಿಗಾರಿಕೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಭಾರೀ ಸ್ಫೋಟಗಳಿಂದ ಪರಿಸರ ಹಾನಿ ಮಾತ್ರವಲ್ಲದೆ, ಜೀವ-ಆಸ್ತಿಗೂ ಅಪಾಯ ಉಂಟಾಗುತ್ತಿದೆ ಎಂದು ಡಿಸಿ ಕಚೇರಿ ಮುಂದೆ ಗುರುವಾರ ರೈತ ಸಂಘದಿಂದ ಅಹೋರಾತ್ರಿ ಧರಣಿ ಆರಂಭಿಸಲಾಯಿತು.ಇದೆ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಬಾಬು ಮಾಧ್ಯಮದೊಂದಿಗೆ ಮಾತನಾಡಿ, ಸ್ಫೋಟಗಳ ತೀವ್ರತೆ ಹೆಚ್ಚಾಗಿರುವ ಪರಿಣಾಮ ಹೊಸಮಠ ಸೇರಿ ಕಲ್ಲುಕೊಪ್ಪಲು, ಮಟದಕೊಪ್ಪಲು, ಹಾರೋಹಳ್ಳಿ, ನವಿಲಹಳ್ಳಿ, ಬಡಗಿಕೊಪ್ಪಲು, ದಿಣ್ಣೆಕೊಪ್ಪಲು ಗ್ರಾಮಗಳಲ್ಲಿ ಮನೆಗಳ ಗೋಡೆಗಳಲ್ಲಿ ಬಿರುಕುಗಳು ಉಂಟಾಗಿವೆ. ಕೆಲ ಮನೆಗಳಲ್ಲಿ ವಾಸಿಸುವುದೇ ಅಪಾಯಕಾರಿಯಾಗಿದೆ ಎಂದು ನಿವಾಸಿಗಳು ದೂರಿದ್ದಾರೆ. ದಿನನಿತ್ಯ ಸ್ಫೋಟದ ಶಬ್ದದಿಂದ ಜನರು ಭಯಭೀತರಾಗಿದ್ದು, ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂದು ಆರೋಪಿಸಿದರು.
ಗಣಿಗಾರಿಕೆಗೆ ಸಂಬಂಧಿಸಿದ ಭಾರೀ ಲಾರಿ ಮತ್ತು ಯಂತ್ರೋಪಕರಣಗಳ ನಿರಂತರ ಸಂಚಾರದಿಂದ ಗ್ರಾಮಾಂತರ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಈ ಹಿನ್ನೆಲೆಯಲ್ಲಿ ಶಾಲಾ ವಾಹನಗಳು ಗ್ರಾಮಗಳಿಗೆ ಬರಲು ನಿರಾಕರಿಸುತ್ತಿರುವುದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೂ ಭಾರೀ ಅಡಚಣೆ ಉಂಟಾಗಿದೆ. ಮಕ್ಕಳು ಶಾಲೆಗೆ ಹಾಜರಾಗಲು ಕಿಲೋಮೀಟರ್‌ಗಳಷ್ಟು ನಡೆದು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.ಜೊತೆಗೆ ಕಾಡುಪ್ರಾಣಿಗಳ ಸಂಚಾರ ಹೆಚ್ಚಾಗಿದೆ. ಗಣಿಗಾರಿಕೆಯಿಂದ ಉಂಟಾಗುವ ಶಬ್ದ, ಕಂಪನ ಮತ್ತು ಅರಣ್ಯ ಪ್ರದೇಶದ ವ್ಯತ್ಯಯದಿಂದ ಆನೆಗಳು ಸೇರಿ ಕಾಡುಪ್ರಾಣಿಗಳು ಜನವಸತಿ ಪ್ರದೇಶಗಳಿಗೆ ನುಗ್ಗಿ ಬೆಳೆ ಹಾಳು ಮಾಡುತ್ತಿವೆ. ಮಳೆಗಾಲದಲ್ಲಿ ಗಣಿಗಾರಿಕೆಯಿಂದ ಉಂಟಾಗುವ ಧೂಳು ಹಾಗೂ ಕಲುಷಿತ ನೀರು ಕೃಷಿಭೂಮಿಗಳಿಗೆ ಹರಿದುಬಂದು ಭೂಮಿ ಉತ್ಪಾದಕತೆ ಕುಸಿಯುತ್ತಿದೆ. ಕಾಫಿ, ಮೆಣಸು, ಭತ್ತ ಸೇರಿ ಪ್ರಮುಖ ಬೆಳೆಗಳು ಹಾನಿಗೊಳಗಾಗುತ್ತಿದ್ದು, ರೈತರಿಗೆ ಆರ್ಥಿಕ ನಷ್ಟ ಉಂಟಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ಶಿಲುಬೆ ಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆ ತಕ್ಷಣ ನಿಲ್ಲಿಸಬೇಕು ಇಲ್ಲವಾದರೇ ನಮಗೆ ಬೇರೆ ಕಡೆ ಪರ್ಯಾಯ ಸ್ಥಳ ಕೊಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ದಾಸೇಗೌಡ, ವಿಠಲ್, ಪವಿತ್ರ, ಕಾಳಕ್ಕ, ಗಂಗಾಧರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.