ಸಾರಾಂಶ
ಕಂಪನಿ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು । ನಬಾರ್ಡ್ ಬ್ಯಾಂಕ್ ಧೋರಣೆಗೆ ಖಂಡನೆ । ಚಿಕ್ಕಮಗಳೂರಿನಲ್ಲಿ ಮೆರವಣಿಗೆ ನಡೆಸಿದ ರೈತರು,
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಕಿರು ಸಾಲ ಯೋಜನೆಯಡಿ ಸಾಲ ಪಡೆದಿರುವ ಮಹಿಳಾ ಸ್ವಸಹಾಯ ಗುಂಪುಗಳು ಹಾಗೂ ಸಾಲಗಾರರಿಗೆ ಸಾಲ ವಸೂಲಾತಿ ಸಂದರ್ಭದಲ್ಲಿ ಕಿರುಕುಳ ನೀಡುತ್ತಿರುವ ಕಂಪನಿ ಸಿಬ್ಬಂದಿ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಚಿಕ್ಕಮಗಳೂರಿನಲ್ಲಿ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.
ತಾಲೂಕು ಕಚೇರಿಯಿಂದ ಮೆರವಣಿಗೆಯಲ್ಲಿ ಹೊರಟ ರೈತರು ಆಜಾದ್ ಪಾರ್ಕ್ ವೃತ್ತದಲ್ಲಿ ಮೈಕ್ರೋ ಫೈನಾನ್ಸ್‌ಗಳ ವಿರುದ್ಧ ಘೋಷಣೆ ಹಾಕಿ ಪ್ರತಿಭಟನೆ ನಡೆಸಿದರು. ಗ್ರಾಮೀಣ ಹಾಗೂ ಬಡ ಮಹಿಳೆಯರು ಸೇರಿದಂತೆ ಬಡವರ ಆರ್ಥಿಕ ಸಬಲೀಕರಣಕ್ಕಾಗಿ ಜಾರಿಗೆ ತಂದ ಕಿರುಸಾಲ ಯೋಜನೆ ಇತ್ತೀಚಿನ ದಿನಗಳಲ್ಲಿ ಬಡವರ ಕೊರಳಿಗೆ ಉರುಳಾಗಿ ಮಾರ್ಪಟ್ಟಿದೆ. ಈ ಸುಳಿಯಿಂದ ಹೊರ ಬರಲಾಗದೆ ಸಾಲಗಾರರು ಒದ್ದಾಡುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.20 ವರ್ಷಗಳ ಹಿಂದೆ ಈ ಯೋಜನೆಯನ್ನು ಮಹಿಳಾ ಸಬಲೀಕರಣಕ್ಕಾಗಿ ಜಾರಿಗೆ ತರಲಾಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇರಿದಂತೆ ಹಲವು ಕಿರುಸಾಲ ಯೋಜನೆ ಕಂಪನಿಗಳು ಕರ್ನಾಟಕದಾದ್ಯಂತ ಮಹಿಳಾ ಗುಂಪು ಗಳಿಗೆ ಹಾಗೂ ವೈಯುಕ್ತಿಕವಾಗಿ ಸಾಲ ಕೊಡಲು ಪ್ರಾರಂಭಿಸಲಾಯಿತು. ಪ್ರಾರಂಭದಲ್ಲಿ ಸಮಸ್ಯೆ ಅರಿವಿರದ ಮುಗ್ಧರು ಈ ಸಾಲದ ಸುಳಿಯಲ್ಲಿ ಸಿಲುಕಿದ್ದರು.
ಪ್ರಾರಂಭದಲ್ಲೇ ರೈತ ಸಂಘ ಕಿರುಸಾಲ ಯೋಜನಾ ಕಂಪನಿಗಳು ವಿಧಿಸುವ ಬಡ್ಡಿ, ಚಕ್ರ ಬಡ್ಡಿ, ವಸೂಲಿ ಕ್ರಮಗಳ ವಿರುದ್ಧ ಜನರನ್ನು ಜಾಗೃತಿಗೊಳಿಸುವ ಕಾರ್ಯ ಮಾಡಿತ್ತು. ಆದರೆ, ಕಿರುಸಾಲ ಯೋಜನಾ ಕಂಪನಿಗಳ ಬಣ್ಣದ ಮಾತುಗಳಿಗೆ ಮರುಳಾದ ಮುಗ್ಧ ಬಡ ಜನರು ಸುಲಭವಾಗಿ ಸಿಗುವ ಸಾಲಕ್ಕಾಗಿ ಕಿರುಸಾಲ ಯೋಜನಾ ಕಂಪನಿಗಳ ಮೊರೆ ಹೋದರು. ಈಗ ಕಂಪನಿ ಸಾಲ ವಸೂಲಿಗಾಗಿ ಮನುಷ್ಯತ್ವ ಮರೆತು ವರ್ತಿಸುತ್ತಿದೆ ಎಂದು ಆರೋಪಿಸಿದರು.ನಬಾರ್ಡ್ ಬ್ಯಾಂಕ್ ಪ್ರತಿ ವರ್ಷ ಕೃಷಿಗೆ ಸಾಲ ನೀಡುತ್ತಿದ್ದ ಮೊತ್ತ ಈ ಬಾರಿ ಶೇ. 52 ರಷ್ಟು ಕಡಿತಗೊಳಿಸಿರುವುದು ಕೃಷಿ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈಗಾಗಲೇ ರಾಷ್ಟ್ರೀಕೃತ ಬ್ಯಾಂಕುಗಳು ಕೃಷಿ ಸಾಲ ಕೊಡುವುದನ್ನು ಕಡಿಮೆ ಮಾಡಿ ಬಹಳ ವರ್ಷಗಳೇ ಕಳೆದಿವೆ.ನಬಾರ್ಡ್ ಮುಖಾಂತರ ಕೊಡುತ್ತಿದ್ದ ಸಾಲ ಕಡಿತಗೊಳಿಸಿರುವುದು ರೈತರ ಬದುಕಿನ ಮೇಲೆ ಬರೆ
ಎಳೆ ದಂತಾಗಿದೆ. ಕೃಷಿಕರು ಅನಿವಾರ್ಯವಾಗಿ ಖಾಸಗಿ ಲೇವಾದೇವಿದಾರರ ಕಪಿಮುಷ್ಟಿಯಲ್ಲಿ ಸಿಲುಕಿ ಜಮೀನು, ಮನೆ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತಿದೆ. ನಬಾರ್ಡ್ ಕಡಿತಗೊಳಿ ಸಿರುವ ಸಾಲವನ್ನು ಪುನಃ ತುಂಬಿಕೊಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.ರಿಸರ್ವ್ ಬ್ಯಾಂಕ್‌ನಿಂದ ಮಾನ್ಯತೆ ಪಡೆಯದ ಕಿರುಸಾಲ ಯೋಜನಾ ಕಂಪನಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಸಂಜೆ 6 ಗಂಟೆ ನಂತರ ಯಾವುದೇ ರೈತರ ಮನೆಗೆ ಸಾಲ ವಸೂಲಿಗಾಗಿ ಹೋಗಬಾರದು. ಸಾಲ ತೆಗೆದುಕೊಂಡವರನ್ನು ಬಿಟ್ಟು ಮನೆ ಇತರೆ ಸದಸ್ಯರೊಂದಿಗೆ ಸಾಲದ ವಿಚಾರ ಚರ್ಚಿಸಬಾರದು. ಸಾಲ ವಸೂಲಿಗೆ ಹೋಗುವ ಫೈನಾನ್ಸ್ ಸಿಬ್ಬಂದಿ ಗುರುತಿನ ಚೀಟಿ ಹೊಂದಿರಬೇಕು. ಸಾಲ ಮರುಪಾವತಿ ಮಾಡಲು ಕಾಲಾವಕಾಶ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಪ್ರತಿಭಟನೆ ನಂತರ ಪ್ರಧಾನಮಂತ್ರಿ, ಕೇಂದ್ರದ ಹಣಕಾಸು ಸಚಿವರು ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಗೆ ಚಿಕ್ಕಮಗಳೂರು ತಾಲೂಕು ತಹಸೀಲ್ದಾರ್ ಡಾ. ಸುಮಂತ್ ಮೂಲಕ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಬಸವರಾಜ್, ಜಿಲ್ಲಾಧ್ಯಕ್ಷ ಮಹೇಶ್, ಮಾಜಿ ಅಧ್ಯಕ್ಷ ಗುರುಶಾಂತಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಚಿಕ್ಕಮಗಳೂರು ತಾಲೂಕು ಅಧ್ಯಕ್ಷ ಸುನೀಲ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಉಮೇಶ್, ಕಡೂರು ತಾಲೂಕು ಅಧ್ಯಕ್ಷ ಆನಂದ್, ಪ್ರಧಾನ ಕಾರ್ಯದರ್ಶಿ ವಿನಯ್‌ಕುಮಾರ್, ಪುಟ್ಟಸ್ವಾಮಿಗೌಡ್ರು, ನಾಗೇಶ್ ಹಾಗೂ ರೈತರು ಪಾಲ್ಗೊಂಡಿದ್ದರು.10 ಕೆಸಿಕೆಎಂ 1ಮೈಕ್ರೋ ಫೈನಾನ್ಸ್‌ಗಳ ಉಪಟಳಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿ ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.