ರೆವಿನ್ಯೂ ಪ್ರೀಮಿಯರ್ ಲೀಗ್: ಪೊನ್ನಂಪೇಟೆ ವಾರಿಯರ್ಸ್ ಚಾಂಪಿಯನ್

| Published : Feb 11 2025, 12:47 AM IST

ಸಾರಾಂಶ

ರೆವಿನ್ಯೂ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಪೊನ್ನಂಪೇಟೆ ವಾರಿಯರ್ಸ್‌ ತಂಡ ಗೆಲುವು ಸಾಧಿಸಿತು. ಸೋಮವಾರಪೇಟೆ ಕಂದಾಯ ಇಲಾಖೆ ತಂಡ ದ್ವಿತೀಯ ಸ್ಥಾನ ಪಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲಾ ಕಂದಾಯ ಇಲಾಖೆ ವತಿಯಿಂದ ನಡೆದ ರೆವಿನ್ಯೂ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪೊನ್ನಂಪೇಟೆ ವಾರಿಯರ್ಸ್ ತಂಡ ಗೆಲವು ಸಾಧಿಸಿತು. ಸೋಮವಾರಪೇಟೆ ಕಂದಾಯ ಇಲಾಖೆ ತಂಡ ದ್ವಿತೀಯ ಸ್ಥಾನ ಪಡೆಯಿತು.

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ 2 ದಿನಗಳ ಕಾಲ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಡಿಕೇರಿ, ವಿರಾಜಪೇಟೆ, ಪೊನ್ನಂಪೇಟೆ, ಸೋಮವಾರಪೇಟೆ, ಕುಶಾಲನಗರ ತಾಲೂಕುಗಳ ಕಂದಾಯ ಇಲಾಖೆ ತಂಡಗಳು ಹಾಗೂ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿ ಕಚೇರಿ ಸಿಬ್ಬಂದಿ ತಂಡ ಸೇರಿದಂತೆ ಒಟ್ಟು 6 ತಂಡಗಳು ಪಾಲ್ಗೊಂಡಿದ್ದವು. ಲೀಗ್ ಮಾದರಿಯಲ್ಲಿ ಪಂದ್ಯಾವಳಿ ನಡೆಯಿತು.

ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಸೋಮವಾರಪೇಟೆ ಕಂದಾಯ ಇಲಾಖೆ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಪೊನ್ನಂಪೇಟೆ ವಾರಿಯರ್ಸ್ ನಿಗದಿತ 5 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 74 ರನ್ ಗಳಿಸಿತು. ತಂಡದ ಪರ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ತರುಣ್ ನಂಜಪ್ಪ ಕೇವಲ 21 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 2 ಬೌಂಡರಿ ಸಹಿತ 54 ರನ್‌ಗಳ ಆಕರ್ಷಕ ಅರ್ಧಶತಕ ದಾಖಲಿಸಿದರು. ಉಳಿದಂತೆ ಮಹೇಶ್ 11, ಜಿಲೆನ್ 2, ರಾಜೇಶ್ 1 ರನ್ ಗಳಿಸಿದರು. ಸೋಮವಾರಪೇಟೆ ತಂಡದ ಪರ ಗಿರೀಶ್ 2 ವಿಕೆಟ್ ಕಬಳಿಸಿದರೆ, ಪ್ರೇಮ್ 1 ವಿಕೆಟ್ ಪಡೆದರು.

ಗೆಲ್ಲಲು 75 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಸೋಮವಾರಪೇಟೆ ಕಂದಾಯ ಇಲಾಖೆ ತಂಡ ನಿಗದಿತ 5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 34 ರನ್ ಗಳಿಸಿ ಸೋಲೊಪ್ಪಿಕೊಂಡಿತು. ತಂಡದ ಪರ ಜೀವನ್ 1 ಸಿಕ್ಸ್ ಹಾಗೂ 2 ಬೌಂಡರಿ ಸಹಿತ 18 ರನ್ ಗಳಿಸಿದನ್ನು ಬಿಟ್ಟರೆ ಉಳಿದ ಬ್ಯಾಟ್ಸ್‌ಮನ್‌ನ್‌ಗಳು ಎರಡಂಕಿ ದಾಟಲಿಲ್ಲ. ಗಿರೀಶ್ ಹಾಗೂ ಹೇಮಂತ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ರೋಶನ್ 8, ವಿಕ್ಕಿ 2, ಪವನ್ ಹಾಗೂ ಬಾಲು ತಲಾ 1 ರನ್ ಗಳಿಸಿದರು. ಪೊನ್ನಂಪೇಟೆ ವಾರಿಯರ್ಸ್ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಪವನ್ 2 ಓವರ್‌ಗಳಲ್ಲಿ 15 ರನ್ ನೀಡಿ ಪ್ರಮುಖ 3 ವಿಕೆಟ್ ಕಬಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ತಂಡದ ಮತ್ತೊಬ್ಬ ಬೌಲರ್ ಕಾರ್ಯಪ್ಪ 2 ವಿಕೆಟ್ ಕಬಳಿಸಿ ಗಮನ ಸೆಳೆದರು.

ಇದಕ್ಕೂ ಮುನ್ನ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಡಿಸಿ ಡಾಮಿನೆಂಟ್ ಲಯನ್ಸ್ ತಂಡವನ್ನು ಮಣಿಸಿ ಸೋಮವಾರಪೇಟೆ ತಂಡ ಫೈನಲ್ ಪ್ರವೇಶಿಸಿತು. ಎಲಿಮಿನೇಟರ್ ಪಂದ್ಯದಲ್ಲಿ ವಿರಾಜಪೇಟೆ ತಂಡವನ್ನು ಪೊನ್ನಂಪೇಟೆ ತಂಡ ಮಣಿಸಿತು. 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡಿಸಿ ಡಾಮಿನೆಂಟ್ ಲಯನ್ಸ್ ತಂಡವನ್ನು ಮಣಿಸಿ ಪೊನ್ನಂಪೇಟೆ ತಂಡ ಫೈನಲ್ ಪ್ರವೇಶಿಸಿತು.

ಪಂದ್ಯಾವಳಿಯ ಸಮಾರೋಪ ಸಮಾರಂಭ ಸೋಮವಾರಪೇಟೆ ತಹಸೀಲ್ದಾರ್ ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ನಡೆಯಿತು. ವಿಜೇತ ತಂಡಕ್ಕೆ ಹಾಗೂ ಆಟಗಾರರಿಗೆ ವೈಯಕ್ತಿಕ ಬಹುಮಾನ ವಿತರಿಸಲಾಯಿತು. ಫೈನಲ್ ಪಂದ್ಯಾಟದ ಪಂದ್ಯ ಪುರೋಷೋತ್ತಮ ಪ್ರಶಸ್ತಿಯನ್ನು ಪೊನ್ನಂಪೇಟೆ ವಾರಿಯರ್ಸ್ ತಂಡದ ತರುಣ್ ನಂಜಪ್ಪ ಪಡೆದುಕೊಂಡರು. ಪಂದ್ಯಾವಳಿಯ ಉತ್ತಮ ಬ್ಯಾಟ್ಸ್‌ಮನ್‌ ಆಗಿ ಸೋಮವಾರಪೇಟೆ ಕಂದಾಯ ಇಲಾಖೆ ತಂಡದ ಗಿರೀಶ್, ಉತ್ತಮ ಬೌಲರ್ ಹಾಗೂ ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಪೊನ್ನಂಪೇಟೆ ವಾರಿಯರ್ಸ್ ತಂಡದ ಮಹೇಶ್ ಪಡೆದುಕೊಂಡರು. ಪಂದ್ಯಾವಳಿಯ ಶಿಸ್ತಿನ ತಂಡವಾಗಿ ಡಿಸಿ ಡಾಮಿನೆಂಟ್ ಲಯನ್ಸ್ ತಂಡವು ಪ್ರಶಸ್ತಿ ಪಡೆದುಕೊಂಡಿತು.