ಕನ್ನಡಪ್ರಭ ವಾರ್ತೆ ಮಳವಳ್ಳಿ

ಆರೋಗ್ಯ ಮತ್ತು ಪರಿಸರ ಸಂರಕ್ಷಣೆಗಾಗಿ ವಿಷಮುಕ್ತ ಸಾವಯವ ಕೃಷಿ ಉತ್ಪಾದನೆಗೆ ರೈತರು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಮಠದ ಪೀಠಾಧಿಪತಿ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.

ಕನ್ನಡ ರಾಜ್ಯೋತ್ಸವದ ಅಂಗವಾಗಿ ಪಟ್ಟಣ ಹೊರವಲಯದ ಶೆಟ್ಟಹಳ್ಳಿ ರಸ್ತೆ ಬಿ.ಎಂ.ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಭಾನುವಾರ ಬೆಂಗಳೂರಿನ ಸಂಜೀವಿನಿ ಮಲ್ಪಿಸ್ಪೆಷಾಲಿಟಿ ಆಸ್ಪತ್ರೆ, ಜೆಎಸ್ಎಸ್ ಆಸ್ಪತ್ರೆ, ವಾಸನ್ ಐಕೇರ್ ಆಸ್ಪತ್ರೆ, ವಿದ್ಯಾಪ್ಯಾರಾ ಮೆಡಿಕಲ್ ಕಾಲೇಜು ಸಹಯೋಗದೊಂದಿಗೆ ಬಿ.ಎಂ.ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಎಂ.ರಾಮಕೃಷ್ಣ ನೇತೃತ್ವದಲ್ಲಿ ಆಯೋಜಿಸಿದ್ದ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಈಗಾಗಲೇ ಸಾವಯಕ ಕೃಷಿಕರ ಸಂಘ ತಮ್ಮ ಕಾರ್ಯ ಚಟುವಟಿಕೆಗಳ ಮೂಲಕ ಹೆಸರುವಾಸಿಯಾಗಿದೆ. ಮುಂದಿನ ಐದು ವರ್ಷಗಳಲ್ಲಿ ಇಡೀ ಮಂಡ್ಯವನ್ನು ಸಾವಯವ ಕೃಷಿ ವಲಯವನ್ನಾಗಿಸಿ ಎಲ್ಲರಿಗೂ ನೈಸರ್ಗಿ ಆಹಾರ ಸಿಗುವಂತಾಗಬೇಕು. ಮಳವಳ್ಳಿ ಮಣ್ಣಿನಿಂದ ಆರಂಭವಾಗುವ ಇಂಥ ಉತ್ತಮ ಕಾರ್ಯ ಮಂಡ್ಯ, ಅಲ್ಲಿಂದ ಇಡೀ ಕರ್ನಾಟಕಕ್ಕೆ ತೆಗೆದುಕೊಂಡು ಹೋಗುವ ಕಾರ್ಯವನ್ನು ಎಲ್ಲರೂ ಮಾಡಬೇಕು ಎಂದರು.

ಗ್ರಾಮೀಣ ಜನರಿಗೆ ಆರೋಗ್ಯ ಭಾಗ್ಯ ನೀಡುವುದೇ ಮಹಾಭಾಗ್ಯ ಎನ್ನುವುದನ್ನು ಬಿ.ಎಂ.ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಎಂ.ರಾಮಕೃಷ್ಣ ಅವರು ಸಾಬೀತು ಪಡಿಸಿದ್ದಾರೆ. ತಮ್ಮ ತಂದೆ-ತಾಯಿ ಹೆಸರಿನಲ್ಲಿ ಇಂಥ ಪರಿಸರದೊಂದಿಗೆ ಅತ್ಯುತ್ತಮ ಶಿಕ್ಷಣ ಸಂಸ್ಥೆ ನಿರ್ಮಿಸಿ ಶಿಕ್ಷಣ ಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.


ಕರ್ನಾಟಕ ರಾಜ್ಯೋತ್ಸವದ ವೇಳೆಯಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರ ಏರ್ಪಡಿಸಿ ಜನರಿಗೆ ಅತ್ಯುತ್ತಮ ಆರೋಗ್ಯ ಸೇವೆ ನೀಡುತ್ತಿರುವ ಸಂಪೂರ್ಣ ಸಾವಯವ ಕೃಷಿಕರ ಸಂಘ ಹಾಗೂ ಟೀಮ್ ಮಳವಳ್ಳಿ ಸಹಯೋಗವೂ ಸೇವೆ ಶ್ಲಾಘನೀಯವಾಗಿದೆ ಎಂದು ಬಣ್ಣಿಸಿದರು.

ಶಿಬಿರಕ್ಕೆ ಜಿಲ್ಲಾ ಸರ್ಜನ್ ಡಾ.ಪಿ.ವೀರಭದ್ರಪ್ಪ ಭೇಟಿ ನೀಡಿ ಮಾತನಾಡಿ, ಇಂಥ ಶಿಬಿರದ ಮೂಲಕ ಗ್ರಾಮೀಣ ಜನರ ಆರೋಗ್ಯ ಸುಧಾರಣೆಯಾಗಲಿದೆ. ಬೃಹತ್ ಆರೋಗ್ಯ ಶಿಬಿರವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶ್ಲಾಘಿಸಿದರು.

ಶಿಬಿರದಲ್ಲಿ ವಿವಿಧ ಆಸ್ಪತ್ರೆಗಳ ಸುಮಾರು 60 ವೈದ್ಯರು ಹಾಗೂ 160 ವೈದ್ಯಕೀಯ ಸಿಬ್ಬಂದಿಯ ಬೃಹತ್ ತಂಡವೇ ಭಾಗಿಯಾಗಿತ್ತು. ಗ್ರಾಮೀಣ ಪ್ರದೇಶದಿಂದ ಆಗಮಿಸುವ ಜನರಿಗಾಗಿ ಪಟ್ಟಣದ ಪ್ರಮುಖ ಸ್ಥಳಗಳಿಂದ ವಾಹನ ಸೌಲಭ್ಯ ಒದಗಿಸಲಾಗಿತ್ತು. ಸಾಮಾನ್ಯ ತಪಾಸಣೆ, ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸೆ, ಮೂಳೆ ಕೀಲು ತಪಾಸಣೆ, ಸ್ತ್ರೀರೋಗ, ಕ್ನಾನ್ಸರ್ ತಪಾಸಣೆ, ದಂತ ಚಿಕಿತ್ಸೆ, ರಕ್ತ ಪರೀಕ್ಷೆ, ಇಸಿಜಿ ಪರೀಕ್ಷೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಉಚಿತ ಔಷಧಿಗಳ ವಿತರಣೆ ಹಾಗೂ ಊಟದ ವ್ಯವಸ್ಥೆ ಸಹ ಮಾಡಲಾಗಿತ್ತು. ವಿವಿಧೆಡೆ 2500ಕ್ಕೂ ಅಧಿಕ ಮಂದಿ ಆರೋಗ್ಯ ತಪಾಸಣೆಗೆ ಒಳಗಾಗದರು.

ಶಿಬಿರದಲ್ಲಿ ಬಿ.ಎಂ.ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಎಂ.ರಾಮಕೃಷ್ಣ, ಸಂಪೂರ್ಣ ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಎಂ.ಎನ್.ಮಹೇಶ್ ಕುಮಾರ್, ಪುರಸಭೆ ಮಾಜಿ ಉಪಾಧ್ಯಕ್ಷ ಎಂ.ಟಿ.ಪ್ರಶಾಂತ್, ಪ್ರಾಂಶುಪಾಲ ಚಂದ್ರಮೋಹನ್, ನಿವೃತ್ತ ಯೋಧ ಸುರೇಶ್, ಟಿ.ಎಂ.ಪ್ರಕಾಶ್, ಟಿ.ಆರ್.ಸೋಮೇಗೌಡ, ಚೊಟ್ಟನಹಳ್ಳಿ ರಮೇಶ್, ಎಂ.ಎನ್.ಶಿವಸ್ವಾಮಿ, ರವಿ, ಶ್ರೀಕಂಠಸ್ವಾಮಿ, ರುದ್ರಸ್ವಾಮಿ, ರಮೇಶ್ ಪಾಲ್ಗೊಂಡಿದ್ದರು.