ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಮಲವಗೊಪ್ಪದಲ್ಲಿ ಭದ್ರಾ ಎಡದಂಡೆ ಹಾಗೂ ಬಲದಂಡೆಯ ನಾಲೆಯಲ್ಲಿ ರೈತರ ಬೆಳೆಗಳಿಗೆ ನೀರು ಹರಿಸುವ ಬಗ್ಗೆ ನಾಲೆಯ ಎರಡೂ ಭಾಗಗಳ ರೈತ ಮುಖಂಡರ ಹಾಗೂ ತಜ್ಞರ ಸಮಿತಿ ಸಭೆಯ ಬಳಿಕ ತೆಗೆದುಕೊಂಡ ತೀರ್ಮಾನ ವಿರೋಧಿಸಿ ರೈತರು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ರಸ್ತೆ ತಡೆ ನಡೆಸಿದರು.ಸಭೆಯಲ್ಲಿ ಭದ್ರಾ ಎಡದಂತೆ ನಾಲೆಗೆ ಜ.10ರಿಂದ 5 ಹಂತದಲ್ಲಿ ನೀರು ಬಿಡುಗಡೆ ಮಾಡುವ ತೀರ್ಮಾನವಾಗಿದೆ. ಬಲದಂಡೆಗೆ ಜ.20ರಿಂದ ನೀರು ಬಿಡುಗಡೆ ಮಾಡುವ ತೀರ್ಮಾನವಾಗಿದೆ. ಆದರೆ, ಜ.20ರಿಂದ ನೀರು ಬಿಡುವುದರಿಂದ ಬಲದಂಡೆ ಭಾಗದಲ್ಲಿ ಬೆಳೆದ ಬೆಳೆ ಒಣಗಿಹೋಗುತ್ತಿದೆ. ಬಲದಂಡೆ ಭಾಗಕ್ಕೂ ಜ.10ರಿಂದ ನೀಡಬೇಕು ಎಂದು ಉಸ್ತುವಾರಿ ಸಚಿವರ ಗಮನಕ್ಕೆ ತರಲು ರೈತರು ಹೊರಗಡೆ ಕಾಯುತ್ತಿದ್ದರು. ಆದರೆ, ಪೊಲೀಸ್ ಭದ್ರತೆಯಲ್ಲಿದ್ದ ಸಚಿವರು ಕಾರಿನಲ್ಲಿ ತೆರಳಿದರು. ಸಚಿವರು ಮಾತಿಗೆ ಸಿಗದ ಕಾರಣ ರೈತರು ಏಕಾಏಕಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಇದರಿಂದ ಅರ್ಧ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆಗಿತ್ತು.
ರೈತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್, ರೈತ ನಾಯಕರಾದ ಎಚ್.ಆರ್. ಬಸವರಾಜಪ್ಪ ಹಾಗೂ ಕೆ.ಟಿ.ಗಂಗಾಧರ ಅರವನ್ನು ರೈತರು ಘೇರಾವು ಮಾಡಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭ ಮಾತನಾಡಿದ ರೈತ ನಾಯಕರು, ಬರಗಾಲ ಬಂದಿದೆ. ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹವಿಲ್ಲ. ಕುಡಿಯುವ ನೀರು ಸಿಗುವುದೇ ಕಷ್ಟವಾಗಿದೆ. ಬತ್ತದ ಬೆಳೆಗಳಿಗೆ ನೀರು ಕೊಡುವುದಿಲ್ಲ ಎಂದು ಮೊದಲೇ ತೀರ್ಮಾನಿಸಿದ್ದೇವೆ. ಆದರೂ ಕೂಡ ಇರುವ ನೀರನ್ನು ಸರಿಯಾಗಿ ಹಂಚುವ ದಿಕ್ಕಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಎಡದಂಡೆ ನಾಲೆಯ ವ್ಯಾಪ್ತಿಯಲ್ಲಿ 25 ಸಾವಿರ ಹೆಕ್ಟೇರ್ ಇದ್ದು, ಬಲದಂಡೆ ನಾಲೆಯಲ್ಲಿ 2 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ರೈತರು ಬೆಳೆ ಬೆಳೆದಿದ್ದಾರೆ. ಈಗಿನ ಪ್ರಕಾರ ನಿಗದಿತ ಅವಧಿಯಲ್ಲಿ ನೀರು ಹರಿಸಿದರು ಕೂಡ, ಕೊನೆಯ ಭಾಗದ ರೈತರಿಗೆ ತಲುಪುವುದು ಕಷ್ಟಾಸಾಧ್ಯ ಎಂಬ ಕೂಗು ಕೇಳಿಬರುತ್ತಿದೆ. ಅನಿವಾರ್ಯ ಪರಿಸ್ಥಿತಿಯಲ್ಲಿ ಕೆಲವೊಂದು ನಿರ್ಧಾರಗಳಿಗೆ ಒಪ್ಪಿಗೆ ನೀಡಿದ್ದೇವೆ. ರೈತರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಚರ್ಚೆ ನಂತರ ಒಂದು ಭಾಗದ ರಸ್ತೆಯನ್ನು ಸಂಚಾರಕ್ಕೆ ತೆರವುಗೊಳಿಸಲಾಯಿತು. ಆದರೆ, ಇನ್ನೊಂದು ಭಾಗದಲ್ಲಿ ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ. ಬೆಳಗೆಯಿಂದಲೇ ಸಮಿತಿ ಸಭೆಗೆ ಯಾವುದೇ ತೊಂದರೆ ನೀಡದೇ ರೈತರೆಲ್ಲರೂ ಕಾಯುತ್ತ ಕೂತಿದ್ದರು. ನಮಗೆ ಒಳಗೆ ಬಿಟ್ಟಿಲ್ಲ. ಈಗ ಸಚಿವರ ಏಕಾಏಕಿ ಜಾಗ ಖಾಲಿ ಮಾಡಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.- - - -6ಎಸ್‌ಎಂಜಿಕೆಪಿ02:
ಶಿವಮೊಗ್ಗದ ಮಲವಗೊಪ್ಪದ ಭದ್ರಾ ಅಚ್ಚುಕಟ್ಟು ಪ್ರಾಧಿಕಾರ ಕಚೇರಿ ಎದುರು ಶನಿವಾರ ನಡೆದ ರೈತ ಮುಖಂಡರು ಹಾಗೂ ತಜ್ಞರ ಸಮಿತಿ ಸಭೆ ವೇಳೆ ಕಚೇರಿ ಹೊರಗಡೆ ಕಾಯುತ್ತ ಕುಳಿತಿದ್ದ ರೈತರು.