ಸಾರಾಂಶ
ಕನ್ನಡಪ್ರಭ ವಾರ್ತೆ ಚವಡಾಪುರ:
ಅತೀವೃಷ್ಟಿ, ಅನಾವೃಷ್ಟಿಗಳಿಂದ ರೈತರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದು, ರೈತರು ಕೃಷಿಗಾಗಿ ಮಾಡಿಕೊಂಡ ಸಾಲ ಮತ್ತು ಬೆಳೆ ಹಾನಿಯಿಂದ ಧೃತಿಗೆಟ್ಟು ಆತ್ಮಹತ್ಯೆಯ ಹಾದಿ ಹಿಡಿಯಬೇಡಿ, ರಾಜ್ಯದಲ್ಲಿ ರೈತರ ಪರವಾದ ಸರ್ಕಾರ ಎಂದು ಕೆಪಿಸಿಸಿ ಸದಸ್ಯ ಅರುಣಕುಮಾರ ಪಾಟೀಲ್ ರೈತರಿಗೆ ಅಭಯ ನೀಡಿದರು.ಅಫಜಲ್ಪುರ ತಾಲೂಕಿನ ನಿಲೂರ ಗ್ರಾಮದಲ್ಲಿ ಕೃಷಿ ಇಲಾಖೆ, ಕೃಷಿ ವಿಜ್ಞಾನಿಗಳ ತಂಡದೊಂದಿಗೆ ನೆಟೆ ರೋಗದಿಂದ ಹಾಳಾದ ತೊಗರಿ ಬೆಳೆ ವಿಕ್ಷಣೆ ಮಾಡಿ ಮಾತನಾಡಿ, ತಾಲೂಕಿನ ರೈತರ ಪ್ರಮುಖ ಬೆಳೆಯಾಗಿರುವ ತೊಗರಿ ಈ ಭಾರಿ ನೆಟೆ ರೋಗಕ್ಕೆ ತುತ್ತಾಗಿದ್ದು ರೈತರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ತಾಲೂಕಿನಾದ್ಯಂತ ಬೆಳೆ ಹಾನಿಯ ಸಮಗ್ರ ಸರ್ವೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಕಂದಾಯ ಇಲಾಖೆ, ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವರದಿ ಸಲ್ಲಿಸಿದ ಬಳಿಕ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಹೆಚ್ಚಿನ ಪರಿಹಾರ ನೀಡುವಂತೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ್ ಧಂಗಾಪೂರ ಮಾತನಾಡಿ, ರೈತರು ಪ್ರತಿ ಬೆಳೆ ಬಿತ್ತನೆಯಿಂದ ರಾಶಿ ಮಾಡುವವರೆಗೆ ವೈಜ್ಞಾನಿಕವಾಗಿ ಕೃಷಿ ಮಾಡಬೇಕು. ತೊಗರಿಗೆ ನೆಟೆ ರೋಗ ಬಂದಾಗ ಎಲೆಗಳಿಗೆ ಕೀಟನಾಶಕ ಸಿಂಪಡಿಸಿದರೆ ಪರಿಹಾರವಾಗುವುದಿಲ್ಲ. ಬೇರಿಗೆ ಪೋಷಕಾಂಶಗಳು ಬೇಕಾಗುತ್ತವೆ. ಇದನ್ನು ಕೃಷಿ ವಿಜ್ಞಾನಿಗಳಿಂದ ಮಾಹಿತಿ ಪಡೆದುಕೊಂಡು ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕು ಎಂದರು.ಮುಂದಿನ ವಾರ ಸಿಎಂ ಸಿದ್ದರಾಮಯ್ಯನವರಿಗೆ ಭೇಟಿಯಾಗಿ ಕಲಬುರಗಿ ಜಿಲ್ಲೆಯ ರೈತರಿಗೆ ಹೆಚ್ಚಿನ ಬೆಳೆ ಹಾನಿ ಪರಿಹಾರ ನೀಡಬೇಕು ಎಂದು ಒತ್ತಾಯಿಸುತ್ತೇವೆ ಎಂದು ತಿಳಿಸಿದರು.
ಕೃಷಿ ವಿಜ್ಞಾನಿ ಡಾ.ಶ್ರೀನಿವಾಸ ಮಾತನಾಡಿ, ತೊಗರಿ ಬೆಳೆಗೆ ನೆಟೆ ರೋಗ ಬರಲು ತೇವಾಂಶ ಹೆಚ್ಚಳ ಅಥವಾ ಕೊರತೆ ಕಾರಣವಾಗುತ್ತದೆ. ಈ ಬಾರಿ ತೇವಾಂಶದ ಕೊರತೆಯಿಂದ ಬೆಳೆಗಳು ಹಾಳಾಗಿವೆ. ನಮ್ಮ ಕೃಷಿ ವಿಜ್ಞಾನ ಸಂಸ್ಥೆಯಿಂದ ರೈತರಿಗೆ ಅರಿವು ಮೂಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಇನ್ನಷ್ಟು ವ್ಯಾಪಕವಾಗಿ ರೈತರಿಗೆ ಬೆಳೆ ರಕ್ಷಣೆಗಾಗಿ ಏನು ಮಾಡಬೇಕೆನ್ನುವ ಅರಿವು ಮೂಡಿಸುವ ಕಾರ್ಯಗಾರ ಮಾಡಲಾಗುತ್ತದೆ ಎಂದು ತಿಳಿಸಿದರು.ಸಹಾಯಕ ಕೃಷಿ ನಿರ್ದೇಶಕ ಎಸ್.ಎಚ್ ಗಡಗಿಮನಿ ಮಾತನಾಡಿ, ತಾಲೂಕಿನಲ್ಲಿ ಒಣ ಬೇಸಾಯದ ಭೂಮಿಯಲ್ಲಿ ತೇವಾಂಶದ ಕೊರತೆಯಿಂದ ಸಾಕಷ್ಟು ರೈತರ ತೊಗರಿ ಬೆಳೆ ಹಾಳಾಗಿದೆ. ನೀರಾವರಿ ಅನುಕೂಲ ಇರುವವರು ನೀರು ಹರಿಸಿ ಬೆಳೆ ಉಳಿಸಿಕೊಂಡಿದ್ದಾರೆ. ಬೆಳೆ ಹಾನಿಯ ಕುರಿತು ಕಂದಾಯ ಇಲಾಖೆ, ಕೃಷಿ ಇಲಾಖೆಗೆ ಅಧಿಕಾರಿಗಳಿಂದ ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ಹೇಳಿದರು.
ಈ ವೇಳೆ ರೈತರಾದ ಪರಮೇಶ್ವರ ಲೋಣಿ, ಬ್ರಹ್ಮಾನಂದ ಪಾಟೀಲ್, ಕೃಷ್ಣ ಬೀಲ್ಕರ್, ಜಗದೇವಪ್ಪ ಪಾಟೀಲ್, ಚಂದು ಲೋಣಿ, ಮಹಾನಿಂಗ ನಾಯ್ಕೋಡಿ, ಶರಣು ಹಾಳಮಳ್ಳಿ, ಮಲ್ಲಿನಾಥ ಗಣಮುಖಿ, ಸಾಗಲಿಂಗಪ್ಪ ಲೋಣಿ, ಹಣಮಂತ್ರಾವ್ ಪಾಟೀಲ್, ಪಾಂಡು ಬೀಲ್ಕರ್, ಮಲ್ಲು ಹಡಪದ ಸೇರಿದಂತೆ, ಶ್ರೀಶೈಲ್ ಪಾಟೀಲ್ ಸೇರಿ ಅನೇಕರು ಇದ್ದರು.