ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಕೊಡುಗೆ ಅಪಾರವಾಗಿದ್ದು, ಇನ್ನು ಹೆಚ್ಚಿನ ಅಭಿವೃದ್ಧಿಗೆ ರಫ್ತು ಕುರಿತು ಅರಿವು ಅಗತ್ಯವಾಗಿದೆ ಎಂದು ರಾಜ್ಯ ಕಾಸಿಯಾ ಅಧ್ಯಕ್ಷ ಎಂ.ಜಿ. ರಾಜ್‌ಗೋಪಾಲ್ ಹೇಳಿದರು.ನಗರದ ನಿಜಗುಣ ರೆಸಾರ್ಟ್ ಸಭಾಂಗಣದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ (ವಿಟಿಪಿಸಿ) ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಲೀನ್ ಯೋಜನೆ ಮತ್ತು ಝಡ್ಇಡಿ ಹಾಗೂ ರಫ್ತು ಕುರಿತ ಒಂದು ದಿನದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ದೇಶದಲ್ಲಿ ಕೃಷಿ ವಲಯ ಬಿಟ್ಟರೆ ಹೆಚ್ಚು ಉದ್ಯೋಗ ನೀಡಿರುವುದು ಸಣ್ಣ ಕೈಗಾರಿಕೆಗಳ ವಲಯ, ಶೇ.೨೮ರಷ್ಟು ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡಿದ್ದು, ರಫ್ತು ವಹಿವಾಟಿನಲ್ಲೂ ಶೇ.೪೮ರಷ್ಟು ಸಾಧನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿಯವರ ಕನಸಾದ ಜಗತ್ತಿನ ೫ನೇ ಆರ್ಥಿಕ ಬೆಳವಣಿಗೆ ಸಾಧಿಸಿದ ದೇಶವಾಗಲು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಅಭಿವೃದ್ಧಿಯ ಬೆಳವಣಿಗೆ ಅತ್ಯಂತ ಅಗತ್ಯವಾಗಿದೆ ಎಂದರು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ರೂಪಿಸಿದ್ದು ಅದರಲ್ಲಿ ರ್‍ಯಾಮ್ ಯೋಜನೆಯು ಒಂದಾಗಿದೆ. ಇದರಡಿಯಲ್ಲಿ ರಫ್ತು ಕುರಿತು ಅರಿವು ಮೂಡಿಸಿಕೊಂಡು ರಾಷ್ಟ್ರ ಮತ್ತು ರಾಜ್ಯದ ಅಭಿವೃದ್ಧಿಗೆ ಕಾರಣರಾಗಿ ಎಂದರು. ರಾಜ್ಯವು ಜಿಎಸ್‌ಟಿಯಲ್ಲಿ ೨ನೇ ಸ್ಥಾನ ಮತ್ತು ಸಣ್ಣ ಕೈಗಾರಿಕೆಗಳ ಅಭಿವೃದ್ಧಿಯಲ್ಲಿ ೩ನೇ ಸ್ವಾನದಲ್ಲಿದೆ, ಈ ಜೆಲ್ಲೆಯಲ್ಲಿ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲ ಹೆಚ್ಚಾಗಿದ್ದು, ಈಗ ಕೈಗಾರಿಕೆಗಳ ಅಭಿವೃದ್ಧಿಯಲ್ಲಿ ಮಹತ್ತರ ಹೆಜ್ಜೆಯನ್ನಿಡುತ್ತಿದ್ದು, ಮುಂದಿನ ಅಭಿವೃದ್ಧಿ ಬೆಳವಣಿಗೆಯ ದೃಷ್ಟಿಯಿಂದ ಈ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದೇವೆ ಎಂದರು.₹೭ ಕೋಟಿ ಕೌಶಲ್ಯ ತರಬೇತಿ ಘಟಕ ಜಿಲ್ಲಾ ಗ್ರಾನೈಟ್ ಮಾಲೀಕರ ಸಂಘದ ಅಧ್ಯಕ್ಷ ಜಿ.ಎಂ. ಹೆಗಡೆ ಮುಖ್ಯ ಅತಿಥಿಯಾಗಿ ಮಾತನಾಡಿ, ಜಿಲ್ಲೆಯಲ್ಲಿ ಕರಿಕಲ್ಲು ಉದ್ದಿಮೆ ಹೆಚ್ಚಿದ್ದು ನಮ್ಮ ಕೈಗಾರಿಕಾ ವಲಯದಲ್ಲಿ ನಮ್ಮ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಾಗಿ ₹೭ಕೋಟಿ ವೆಚ್ಚದಲ್ಲಿ ಒಂದು ಕೌಶಲ್ಯ ತರಬೇತಿ ಘಟಕ ತೆರೆಯಲ್ಲಿ ಚಿಂತನೆ ನಡೆಸಿದ್ದು ಇದಕ್ಕೆ ಕಾಸಿಯಾ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರ ಸಹಕಾರ ಅಗತ್ಯವಾಗಿದೆ. ಈ ಮೂಲಕ ನಮ್ಮ ಜಿಲ್ಲೆಯ ಯವಕರಿಗೆ ಉದ್ಯೋಗ ನೀಡುವ ಚಿಂತನೆ ಮಾಡಲಾಗಿದೆ ಎಂದರು.ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ.ದಿನೇಶ್ ಮಾತನಾಡಿ, ಚಾಮರಾಜನಗರ ಕೈಗಾರಿಕಾ ವಲಯ ರಫ್ತು ವಲಯವನ್ನಾಗಿ ಮಾಡುವ ಉದ್ದೇಶದಿಂದ ಹಲವಾರು ಕಾರ್ಯಕ್ರಮ ಹಮ್ಮಿಕೊಂಡು ಅರಿವು ಮೂಡಿಸಲಾಗುತ್ತಿದೆ. ತಂತ್ರಜ್ಞಾನ ಅಳವಡಿಕೆಯಿಂದಾಗಿ ಕೃಷಿ ಕ್ಷೇತ್ರದಲ್ಲಿ ಹೆಚ್ಚು ಜನರಿಗೆ ಉದ್ಯೋಗ ನೀಡಲು ಆಗುತ್ತಿಲ್ಲ. ಪ್ರತಿಯೊಂದು ಜಿಲ್ಲೆಯಲ್ಲಿಯೂ ವಾರ್ಷಿಕ ೫-೬ ಸಾವಿರ ಯುವಕ, ಯುವತಿಯರು ಪದವಿ, ೫ ಎಂಜಿನಿಯರ್, ಐಟಿಐ ಸೇರಿದಂತೆ ಇತರೆ ಶಿಕ್ಷಣ ಮುಗಿಸಿ ಹೊರ ಬರುತ್ತಿದ್ದಾರೆ. ಇವರಿಗೆಲ್ಲ ಉದ್ಯೋಗ ಅವಕಾಶ ಕೊಡಬೇಕು. ಆದರೆ, ಕೃಷಿ ಕ್ಷೇತ್ರದಲ್ಲಿ ಉದ್ಯೋಗ ನೀಡಲು ಆಗುತ್ತಿಲ್ಲ ಎಂದರು.
ಪ್ರತಿಯೊಬ್ಬರು ಉದ್ಯಮಿಗಳಾಗಿ ಉದ್ಯೋಗ ನೀಡುವಂತಾಗಬೇಕು. ಸಣ್ಣ ಕೈಗಾರಿಕೆಗಳು ಕೈಗಾರಿಕಾ ಕ್ಷೇತ್ರದ ಬೆನ್ನೆಲುಬು. ಆರ್‌ಎಎಂಪಿ ಯೋಜನೆ ಮೂಲಕ ಉದ್ಯಮಿದಾರು ಬಲವರ್ಧನೆಗೊಳಿಸಬೇಕು ಎಂದರು.ಮಾರುಕಟ್ಡೆಯಲ್ಲಿ ಬದಲಾವಣೆ, ಹವಮಾನ ಬದಲಾವಣೆಗಳಿಂದ ತಂತ್ರಜ್ಞಾನದಲ್ಲೂ ಬದಲಾವಣೆಗಳಿಗಾಗಿ ಪ್ರಸ್ತುತ ತಾಲೂಕು ಕೇಂದ್ರಗಳಲ್ಲಿಯೂ ಮಾಲ್‌ಗಳು ಪ್ರಾರಂಭವಾಗುತ್ತಿವೆ, ಕೃಷಿ ಕೇತ್ರ, ಕೈಗಾರಿಕಾ ಕ್ಷೇತ್ರದಲ್ಲಿ ಉತ್ಪಾದನೆ ಹೆಚ್ಚಾಗುತ್ತಿದ್ದರೂ ರಫ್ತಿನ ಅರಿವಿನ ಕೊರತೆಯಿದೆ, ಆದ್ದರಿಂದ ರಫ್ತಿನ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಸಣ್ಣ ಕೈಗಾರಿಕೆಗಳ ಸಂಘದ ಜಿಲ್ಲಾಧ್ಯಕ್ಷ ಎ.ಜಯಸಿಂಹ, ಉಪಾಧ್ಯಕ್ಷ ಗಣೇಶ್‌ರಾವ್, ಜಂಟಿ ಕಾರ್ಯದರ್ಶಿ ಸತೀಶ್, ಖಜಾಂಚಿ ಮಂಜುನಾಥ್, ಜಿಲ್ಲಾಭಿವೃದ್ಧಿ ಸಮಿತಿಯ ಉಪಸಮಿತಿ ಅಧ್ಯಕ್ಷ ಮಂಜುನಾಥ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿಟಿಪಿಸಿಯ ವೀಣಾ ವೆಂಕಟೇಶ್ ರಫ್ತು ಕುರಿತು ಅರಿವು ಮೂಡಿಸಿದರು.