ಕನ್ನಡಪ್ರಭ ವಾರ್ತೆ ಹಾಸನ
ಆಲೂರು ತಾಲೂಕಿನ ಹೊಸಮನೆ ಗ್ರಾಮದಲ್ಲಿ ಕ್ರೈಸ್ತ ಧರ್ಮದ ಪವಿತ್ರ ಸ್ಥಳ ಶಿಲುಬೆ ಬೆಟ್ಟದಲ್ಲಿ ಗಣಿಗಾರಿಕೆ ನಡೆಯುತ್ತಿರುವುದನ್ನ ಸ್ಥಗಿತಗೊಳಿಸಿ, ಬೇಲೂರು ತಾಲೂಕು ಬಂಟೇನಹಳ್ಳಿ ವಾರ್ಡ್ ೨ರಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿ ಹಾಗೂ ಹಾಸನ ನಗರದ ಬೀರನಹಳ್ಳಿ ಕೆರೆ ನಿವಾಸಿಗಳಿಗೆ ನಿವೇಶನ ಗುರುತಿಸಿ ಮನೆ ಕಟ್ಟಿಸಿಕೊಡಲು ಆಗ್ರಹಿಸಿ ರಾಜ್ಯ ರೈತ ಸಂಘದಿಂದ ಡಿಸಿ ಕಚೇರಿ ಮುಂದೆ ಸೋಮವಾರದಿಂಧ ಅನಿರ್ಧಿಷ್ಟಾವಧಿ ಹೋರಾಟ ಪ್ರಾರಂಭಿಸಿದರು.ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್. ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂತು. ಇದೇ ವೇಳೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಆನೆಕೆರೆ ರವಿ ಮಾಧ್ಯಮದೊಂದಿಗೆ ಮಾತನಾಡಿ, ಆಲೂರು ತಾಲೂಕಿನ ಹೊಸಮಠ ಗ್ರಾಮದಲ್ಲಿ ಕ್ರೈಸ್ತ ಧರ್ಮದ ಪವಿತ್ರ ಸ್ಥಳವಾಗಿರುವ ಶಿಲುಬೆ ಬೆಟ್ಟದಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, ಈ ಗಣಿಗಾರಿಕೆಯಲ್ಲಿ ನಡೆಯುತ್ತಿರುವ ಸ್ಪೋಟಗಳಿಂದ ಸುತ್ತಮುತ್ತಲಿನ ಗ್ರಾಮಗಳಿಗೆ ತೀವ್ರ ಪರಿಣಾಮ ಉಂಟಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಬೆಟ್ಟದ ಸುತ್ತಮುತ್ತಲಿನ ಮನೆಗಳಿಗೆ ಬಿರುಕುಗಳು ಕಾಣಿಸಿಕೊಂಡಿದ್ದು, ಜನರು ಭಯಭೀತರಾಗಿ ಬದುಕುವಂತಾಗಿದೆ. ಗಣಿಗಾರಿಕೆಗಾಗಿ ಭಾರಿ ವಾಹನಗಳು ನಿರಂತರವಾಗಿ ಸಂಚರಿಸುತ್ತಿರುವುದರಿಂದ ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ವಾಹನ ಸಂಚಾರಕ್ಕೆ ಅಸೌಕರ್ಯ ಉಂಟಾಗಿದೆ. ರಸ್ತೆಯ ದುಸ್ಥಿತಿಯಿಂದ ಶಾಲಾ ವಾಹನಗಳು ಗ್ರಾಮಗಳಿಗೆ ಬರಲು ನಿರಾಕರಿಸುತ್ತಿದ್ದು, ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ ಎಂದು ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ ಎಂದರು.
ಗಣಿಗಾರಿಕೆಯಲ್ಲಿ ನಡೆಯುವ ಸ್ಪೋಟದ ತೀವ್ರ ಶಬ್ದ ಹಾಗೂ ಪರಿಸರದ ಹಾನಿಯಿಂದ ಕಾಡುಪ್ರಾಣಿಗಳು ತಮ್ಮ ವಾಸಸ್ಥಳ ತೊರೆದು ಗ್ರಾಮಗಳತ್ತ ಬರುತ್ತಿರುವ ಘಟನೆಗಳು ಹೆಚ್ಚಾಗಿವೆ. ವಿಶೇಷವಾಗಿ ಆನೆಗಳು ಗ್ರಾಮಗಳಿಗೆ ನುಗ್ಗಿ ರೈತರ ಕೃಷಿ ಬೆಳೆಗಳನ್ನು ಹಾಳು ಮಾಡುತ್ತಿವೆ. ಇದರಿಂದ ರೈತರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿ ಗಣಿಗಾರಿಕೆಯ ಪ್ರದೇಶದಿಂದ ಹರಿದು ಬರುವ ಕಲುಷಿತ ನೀರು ಮತ್ತು ಧೂಳು ಸುತ್ತಮುತ್ತಲಿನ ಕೃಷಿಭೂಮಿಗೆ ಸೇರುತ್ತಿದ್ದು, ಕಾಫಿ, ಮೆಣಸು, ಭತ್ತ ಸೇರಿದಂತೆ ವಿವಿಧ ಬೆಳೆಗಳಿಗೆ ಹಾನಿಯಾಗುತ್ತಿದೆ ಎಂದು ರೈತರು ತಿಳಿಸಿದ್ದಾರೆ. ಪರಿಸರ ಮಾಲಿನ್ಯ ಮತ್ತು ನಿರಂತರ ಸ್ಪೋಟಗಳಿಂದ ಗ್ರಾಮಗಳಲ್ಲಿ ವಾಸಿಸುವುದೇ ಕಷ್ಟಕರವಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಹೊಸಮಠ, ಕಲ್ಲುಕೊಪ್ಪಲು, ಮಠದಕೊಪ್ಪಲು, ಹಾರೋಹಳ್ಳಿ, ನವಿಲಹಳ್ಳಿ, ಬಡಗಿಕೊಪ್ಪಲು ಹಾಗೂ ದಿಣ್ಣೆಕೊಪ್ಪಲು ಸೇರಿದಂತೆ ಹಲವು ಗ್ರಾಮಗಳ ಜನರು ಈ ಗಣಿಗಾರಿಕೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆ ಗಣಿಗಾರಿಕೆ ನಡೆಸುತ್ತಿರುವವರ ಪರವಾನಗಿಯನ್ನು ತಕ್ಷಣ ರದ್ದುಪಡಿಸಿ ಶಾಶ್ವತವಾಗಿ ಗಣಿಗಾರಿಕೆಯನ್ನು ಸ್ಥಗಿತಗೊಳಿಸಬೇಕು. ಜೊತೆಗೆ ಜನರ ಸುರಕ್ಷತೆ ಹಾಗೂ ಪರಿಸರ ಸಂರಕ್ಷಣೆಗೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಇನ್ನೊಂದೆಡೆ ಬೇಲೂರು ತಾಲೂಕಿನ ಬಂಟೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂ.೨ರ ದೇವರಾಜಪುರ ಅಂಬೇಡ್ಕರ್ ಬೀದಿಯಲ್ಲಿ ೧೯೫೦ರಿಂದ ಪೂರ್ವಿಕರ ಕಾಲದಿಂದಲೇ ಸುಮಾರು ೩೦೦ ರಿಂದ ೪೦೦ ಕುಟುಂಬಗಳು ಮನೆ ಕಟ್ಟಿಕೊಂಡು ವಾಸಿಸುತ್ತಿವೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ಇತರೆ ಸಮುದಾಯಗಳ ಜನರು ಇಲ್ಲಿ ವಾಸಿಸುತ್ತಿದ್ದರೂ ಈ ಪ್ರದೇಶದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಸ್ಥಳೀಯರು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸಮರ್ಪಕ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ದೂರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೆಲವು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವವರು ಈ ಪ್ರದೇಶದಲ್ಲಿ ವಾಸಿಸುತ್ತಿರುವ ಜನರನ್ನು ಒಕ್ಕಲೆಬ್ಬಿಸಲು ಯತ್ನಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಇಲ್ಲಿ ವಾಸಿಸುವ ಜನರಿಗೆ ತೊಂದರೆ ಕೊಡಲಾಗುತ್ತಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಇದರಿಂದ ಹಲವು ವರ್ಷಗಳಿಂದ ಇಲ್ಲಿ ನೆಲೆಸಿರುವ ಕುಟುಂಬಗಳು ಆತಂಕದ ಪರಿಸ್ಥಿತಿಯಲ್ಲಿ ಬದುಕುವಂತಾಗಿದೆ. ಸರ್ಕಾರ ಹಾಗೂ ಸಂಬಂಧಿತ ಅಧಿಕಾರಿಗಳು ಈ ವಿಷಯದಲ್ಲಿ ಸೂಕ್ತ ತನಿಖೆ ನಡೆಸಿ, ರಿಯಲ್ ಎಸ್ಟೇಟ್ ದೌರ್ಜನ್ಯವನ್ನು ತಕ್ಷಣ ನಿಲ್ಲಿಸಬೇಕು. ಜೊತೆಗೆ ಇಲ್ಲಿ ವಾಸಿಸುವ ಜನರಿಗೆ ಕಾನೂನುಬದ್ಧ ರಕ್ಷಣೆ ಒದಗಿಸಿ ಅವರು ನಿರಾತಂಕವಾಗಿ ಬದುಕಲು ಅವಕಾಶ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಹಾಸನ ನಗರದ ರಾಘವೇಂದ್ರ ಕಾಲೋನಿ (ಬೀರನಹಳ್ಳಿ ಕೆರೆ) ಪ್ರದೇಶದಲ್ಲಿ ವಾಸಿಸುತ್ತಿದ್ದ ಬಡ ಕುಟುಂಬಗಳನ್ನು ೨೦೦೭ರ ಮೇ ೧೧ರಂದು ತೆರವುಗೊಳಿಸಲಾಗಿತ್ತು. ಸುಮಾರು ೭೫ ಮನೆಗಳನ್ನು ತೆರವುಗೊಳಿಸಿದ ನಂತರ ಈ ಕುಟುಂಬಗಳಿಗೆ ನಗರಾಭಿವೃದ್ಧಿ ಪ್ರಾಧಿಕಾರ ಆಶ್ರಯ ಯೋಜನೆಯಡಿ ಅರಸೀಕೆರೆ ರಸ್ತೆಯ ಬಿ.ಟಿ.ಕೊಪ್ಪಲು ಸಮೀಪದಲ್ಲಿ ಹಕ್ಕುಪತ್ರ ನೀಡಲಾಗಿದೆ. ಆದರೆ ಹಕ್ಕುಪತ್ರ ನೀಡಿದ ಬಳಿಕ ಹಲವು ವರ್ಷಗಳು ಕಳೆದರೂ ಇದುವರೆಗೆ ಫಲಾನುಭವಿಗಳಿಗೆ ನಿವೇಶನ ಗುರುತಿಸಿ ನೀಡಲಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ನಿವೇಶನ ಸಿಗದ ಕಾರಣ ಬಡ ಕುಟುಂಬಗಳು ಬಾಡಿಗೆ ಮನೆಗಳಲ್ಲಿ ವಾಸಿಸುವಂತಾಗಿದ್ದು, ಹಲವರಿಗೆ ಬಾಡಿಗೆ ಕಟ್ಟಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಕೆಲವರು ಆರ್ಥಿಕ ಸಂಕಷ್ಟದಿಂದ ಬೀದಿ ಪಾಲಾಗುವ ಪರಿಸ್ಥಿತಿಯಲ್ಲಿದ್ದಾರೆ. ಹಲವು ವರ್ಷಗಳಿಂದ ಸರ್ಕಾರದ ಗಮನ ಸೆಳೆಯಲು ಮನವಿ ಸಲ್ಲಿಸಿದ್ದರೂ ಸಮಸ್ಯೆಗೆ ಪರಿಹಾರ ದೊರಕಿಲ್ಲ ಎಂದು ಫಲಾನುಭವಿಗಳು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಸಂಬಂಧಿತ ಇಲಾಖೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಆಶ್ರಯ ಯೋಜನೆಯಡಿ ಹಕ್ಕುಪತ್ರ ಪಡೆದ ಎಲ್ಲಾ ಫಲಾನುಭವಿಗಳಿಗೆ ನಿವೇಶನವನ್ನು ಗುರುತಿಸಿ ನೀಡಬೇಕು. ಜೊತೆಗೆ ಅವರಿಗೆ ಮನೆ ನಿರ್ಮಾಣಕ್ಕೆ ಅಗತ್ಯ ನೆರವು ಒದಗಿಸಬೇಕು ಎಂದು ಬಡ ಕುಟುಂಬಗಳು ಆಗ್ರಹಿಸಿದಲ್ಲದೇ ಬೇಡಿಕೆ ಈಡೇರುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಬಾಬು, ರಾಜ್ಯ ಸಂಚಾಲಕ ಮಹಮ್ಮದ್ ಸಾದಿಕ್, ಮಗ್ಗೆ ಮಠದ ಕೊಪ್ಪಲು ಸಂತ ಪ್ರಾನ್ಸಿಸ್ ಹೇವಿಯರ್ ಚರ್ಚ್‌ನ ಫಾದರ್ ಪ್ರಶಾಂತ್, ಕರ್ನಾಟಕಿ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸತೀಶ್ ಪಟೇಲ್, ಉಪಾಧ್ಯಕ್ಷ ವೆಂಕಟೇಶ್, ಗಂಗಾಧರ್, ಸಮಿಉಲ್ಲ, ಅರುಣ ಭಾಸ್ಕರ್, ಪವಿತ್ರ, ರಂಗಮ್ಮ, ಕವಿತ ಇತರರು ಉಪಸ್ಥಿತರಿದ್ದರು.