ಮದ್ದೂರು ತಾಲೂಕಿನಲ್ಲಿ 90 ಪ್ರೌಢಶಾಲೆಗಳ ಪೈಕಿ 39 ಸರಕಾರಿ, 16 ಅನುದಾನಿತ, 29 ಅನುದಾನ ರಹಿತ ಹಾಗೂ 6 ವಸತಿ ಶಾಲೆಗಳು ಒಳಗೊಂಡಂತೆ 3545 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. 3142 ಪ್ರಥಮ ಬಾರಿಗೆ, 403 ಮಂದಿ ದ್ವಿತೀಯ ಬಾರಿಗೆ ಪರೀಕ್ಷೆ ಎದುರಿಸುತ್ತಿದ್ದಾರೆ.

ಮದ್ದೂರು:

ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ನಿರೀಕ್ಷೆಗೂ ಮೀರಿ ಹೊರಹೊಮ್ಮುವ ವಿಶ್ವಾಸವಿದೆ ಎಂದು ಬಿಇಒ ಎಸ್.ಬಿ.ಧನಂಜಯ ಅಭಿಪ್ರಾಯಪಟ್ಟರು.

ಪಟ್ಟಣದ ತಮ್ಮ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 18ರಿಂದ ಆರಂಭಗೊಂಡ ಏ.2ರ ವರೆಗೆ ನಡೆಯುವ ಪರೀಕ್ಷೆಯನ್ನು ಸುಗಮ ಹಾಗೂ ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಅಗತ್ಯ ಪೂರ್ವ ಸಿದ್ಧತೆ ಕೈಗೊಂಡಿರುವುದಾಗಿ ತಿಳಿಸಿದರು.

ಈ ಬಾರಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಕ್ಕಾಗಿ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಮತ್ತು ಶಿಕ್ಷಕ ಸಮೂಹವೇ ನಿರಂತರ ಪ್ರಯತ್ನ, ಪ್ರತಿ ವಿದ್ಯಾರ್ಥಿಯ ಪೋಷಕರ ಸಹಕಾರ ಸ್ಮರಿಸಬೇಕಿದೆ ಎಂದರು.

ತಾಲೂಕಿನಲ್ಲಿ 90 ಪ್ರೌಢಶಾಲೆಗಳ ಪೈಕಿ 39 ಸರಕಾರಿ, 16 ಅನುದಾನಿತ, 29 ಅನುದಾನ ರಹಿತ ಹಾಗೂ 6 ವಸತಿ ಶಾಲೆಗಳು ಒಳಗೊಂಡಂತೆ 3545 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. 3142 ಪ್ರಥಮ ಬಾರಿಗೆ, 403 ಮಂದಿ ದ್ವಿತೀಯ ಬಾರಿಗೆ ಪರೀಕ್ಷೆ ಎದುರಿಸುತ್ತಿದ್ದಾರೆ ಎಂದರು.

ತಾಲೂಕಿನಲ್ಲಿ ಒಟ್ಟು 12 ಪರೀಕ್ಷೆ ಕೇಂದ್ರಗಳನ್ನು ಗುರುತಿಸಿ ಪ್ರತಿ ಕೊಠಡಿಯಲ್ಲಿ ಸಿ.ಸಿ.ಕ್ಯಾಮೆರ ಅಳವಡಿಸಿ ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರು, ಶೌಚಾಲಯ, ವಿದ್ಯುತ್ ವ್ಯವಸ್ಥೆ ಮತ್ತು ಭದ್ರತೆಗಾಗಿ ಕ್ರಮ ವಹಿಸಿರುವುದಾಗಿ ತಿಳಿಸಿದರು.

ಪರೀಕ್ಷಾ ಕಾರ್ಯಗಳಿಗೆ 216 ವಿವಿಧ ವರ್ಗದ ಅಧಿಕಾರಿಗಳನ್ನು ನಿಯೋಜಿಸಿದ್ದು, 12 ಅಧೀಕ್ಷಕರು, 4 ಮಂದಿ ಉಪ ಅಧೀಕ್ಷಕರು, 12 ಪತ್ರಿಕೆ ಅಭಿರಕ್ಷಕರು, 12 ಜಾಗೃತದಳ ಅಧಿಕಾರಿಗಳು, 12 ಮೊಬೈಲ್ ಸ್ವಾಧೀನಾಧಿಕಾರಿಗಳು ಹಾಗೂ 160 ಮಂದಿ ಕೊಠಡಿ ಮೇಲ್ವಿಚಾರಕ ಸಿಬ್ಬಂಧಿ ನಿಯೋಜಿಸಲಾಗಿದೆ. ಪರೀಕ್ಷಾ ಕೇಂದ್ರದ ಹೊರ ಆವರಣದಲ್ಲಿ ಸೆಕ್ಸನ್ 144 ಜಾರಿ, ಜತೆಗೆ ಪೋಲೀಸ್, ಆರೋಗ್ಯ ಇನ್ನಿತರೆ ಇಲಾಖೆಗಳ ಸಹಯೋಗ ಹೊಂದಿರುವುದಾಗಿ ಹೇಳಿದರು.

ಈ ವೇಳೆ ವಿವಿಧ ಶಿಕ್ಷಕರ ಸಂಘಟನೆಗಳ ಮುಖ್ಯಸ್ಥರಾದ ಅನಂತೇಗೌಡ, ದೇವರಾಜು, ನಾಗೇಶ್, ನೋಡೆಲ್ ಅಧಿಕಾರಿ ರಮೇಶ್ ಇತರರಿದ್ದರು.