ಪ್ರಸಾದ್ ನಗರೆ

ಹೊನ್ನಾವರ: ತಾಲೂಕಿನ ಕಾಸರಕೋಡಿನ ಬಳಿಯ ಅಪ್ಸರಕೊಂಡ ಸಮೀಪ ಅಲ್ಲಿನ ಜನರೆಲ್ಲ ಸೇರಿಕೊಂಡು ಸಾಮೂಹಿಕವಾಗಿ ಕೃಷಿಯನ್ನು ನಿರ್ವಹಣೆಯನ್ನು ಮಾಡಿ ಯಶಸ್ಸು ಕಂಡಿದ್ದಾರೆ.

ಕೃಷಿ ಎಂದರೆ ಮೂಗು ಮುರಿಯುವ ಕಾಲಕ್ಕೆ ನಾವು ಬಂದು ನಿಂತಿದ್ದೇವೆ. ಕೂಲಿ ಕಾರ್ಮಿಕರ ಸಮಸ್ಯೆ ಅವರ ಕೂಲಿ ಹೆಚ್ಚಳ, ಕಾಡುಪ್ರಾಣಿಗಳ ಉಪಟಳ ಹೀಗೆ ಹಲವಾರು ಕಾರಣದಿಂದ ಕೃಷಿಯ ಬಗ್ಗೆ ಆಸಕ್ತಿಯನ್ನು ಕಳೆದುಕೊಳ್ಳುತ್ತಿರುವವರ ಸಂಖ್ಯೆಯೇ ಅಧಿಕವಾಗಿದೆ. ಆದರೆ ರೈತರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಕೃಷಿಯಲ್ಲಿನ ಹಲವು ಸವಾಲುಗಳನ್ನು ಸಮರ್ಥವಾಗಿ ಎದುರಿಸಬಹುದು ಎಂಬುದಕ್ಕೆ ಹೊನ್ನಾವರ ತಾಲೂಕಿನ ಕೆಳಗಿನೂರು ಅಪ್ಸರಕೊಂಡ ಗ್ರಾಮದ ರೈತರು ಮಾದರಿಯಾಗಿದ್ದಾರೆ.

ಗ್ರಾಮ ಸುಧಾರಣಾ ಸಮಿತಿಯ ನೇತೃತ್ವದಲ್ಲಿ ಪರಸ್ಪರ ಸಹಕಾರದೊಂದಿಗೆ 100ಕ್ಕೂ ಹೆಚ್ಚು ಎಕರೆ ಕೃಷಿ ಭೂಮಿಯಲ್ಲಿ ಸಾಮೂಹಿಕವಾಗಿ ಕೃಷಿ ನಿರ್ವಹಣೆ ಮಾಡುತ್ತಿರುವ ಗ್ರಾಮಸ್ಥರ ಪ್ರಯತ್ನ ಮೆಚ್ಚುಗೆಗೆ ಪಾತ್ರವಾಗಿದೆ.ಅಪ್ಸರಕೊಂಡ ಗ್ರಾಮದಲ್ಲಿ 100ಕ್ಕೂ ಹೆಚ್ಚು ಎಕರೆ ವಿಸ್ತೀರ್ಣದ ಕೃಷಿ ಭೂಮಿ ಒಂದೇ ಪ್ರದೇಶದಲ್ಲಿ ಹರಡಿಕೊಂಡಿದೆ. ಇಲ್ಲಿ ಬೇಸಿಗೆಯಲ್ಲಿ ಶೇಂಗಾ ಹಾಗೂ ಮಳೆಗಾಲದಲ್ಲಿ ಭತ್ತ ಬೆಳೆಯಲಾಗುತ್ತದೆ. ಪ್ರತಿ ಕೃಷಿ ಹಂಗಾಮು ಆರಂಭವಾಗುವುದಕ್ಕೆ ಸುಮಾರು ಒಂದು ತಿಂಗಳು ಮೊದಲು ಗ್ರಾಮದ ಎಲ್ಲ ಕುಟುಂಬದವರು ಸಭೆ ಸೇರಿ ಕೃಷಿ ಕಾರ್ಯಗಳ ನಿರ್ವಹಣೆ, ಕ್ರಮಗಳ ಕುರಿತು ಚರ್ಚಿಸಿ ಒಮ್ಮತದ ನಿರ್ಧಾರ ಕೈಗೊಳ್ಳುತ್ತಾರೆ. ಜಮೀನಿನ ರಕ್ಷಣೆಗೂ ಎಲ್ಲರೂ ಸೇರಿ ಬೇಲಿಯನ್ನು ನಿರ್ಮಾಣ ಮಾಡುತ್ತಾರೆ. ಬೆಳೆ ಕಟಾವಿನ ಸಂದರ್ಭದಲ್ಲಿಯೂ ಇದೇ ಒಗ್ಗಟ್ಟಿನ ಕಾರ್ಯವಿಧಾನ ಅನುಸರಿಸಲಾಗುತ್ತದೆ. ಶೇಂಗಾ ಅಥವಾ ಭತ್ತ ಕಟಾವಿಗೆ ಬಂದಾಗ ಮತ್ತೊಮ್ಮೆ ಸಭೆ ಸೇರಿ ಎಲ್ಲರೂ ಒಂದೇ ದಿನ ಕಟಾವು ಆರಂಭಿಸುವಂತೆ ದಿನ ನಿಗದಿಪಡಿಸುತ್ತಾರೆ. ಕಟಾವು ಮಾಡಿದ ಬೆಳೆ ಸಂಪೂರ್ಣವಾಗಿ ಮನೆ ತಲುಪುವವರೆಗೂ ಬೇಲಿಗಳ ಭದ್ರತೆ ಕಾಪಾಡಿ ಜಾನುವಾರುಗಳಿಂದ ಬೆಳೆ ಹಾನಿಯಾಗದಂತೆ ಎಚ್ಚರಿಕೆ ವಹಿಸುತ್ತಾರೆ.ಸಂಘಟನೆಗೆ ಮೊದಲ ಆದ್ಯತೆ: ಮಳೆಗಾಲದಲ್ಲಿ ಅತಿಯಾದ ಮಳೆಯಿಂದ ಗದ್ದೆಗಳಲ್ಲಿ ನೀರು ತುಂಬಿ ಭತ್ತದ ಬೆಳೆ ಹಾನಿಯಾಗುವ ಆತಂಕ ಎದುರಾದಾಗಲೂ ಗ್ರಾಮಸ್ಥರು ಸಂಘಟಿತವಾಗಿ ಸಮಸ್ಯೆ ಎದುರಿಸುತ್ತಾರೆ. 100 ಎಕರೆಗೂ ಅಧಿಕ ಗದ್ದೆಗಳ ಮಧ್ಯಭಾಗದಲ್ಲಿ ಕಾಲುವೆ ನಿರ್ಮಿಸಿ, ಹೆಚ್ಚುವರಿ ನೀರು ಒಂದು ಭಾಗದಿಂದ ಶರಾವತಿ ನದಿಗೆ ಹಾಗೂ ಇನ್ನೊಂದು ಭಾಗದಿಂದ ಅರಬ್ಬಿ ಸಮುದ್ರದ ಕಡೆಗೆ ಹರಿದುಹೋಗುವಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇದರಿಂದ ಗದ್ದೆಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಲು ಸಾಧ್ಯವಾಗಿದೆ. ನೀರು ಸಂಪೂರ್ಣವಾಗಿ ಹರಿದು ಹೋದ ಬಳಿಕ ಭತ್ತದ ಕಟಾವು ಕಾರ್ಯ ಕೈಗೊಳ್ಳುತ್ತಾರೆ.ಸಾಮಾಜಿಕ ಕಾರ್ಯದಲ್ಲೂ ಒಗ್ಗಟ್ಟು: ಕೃಷಿ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗದೆ ಗ್ರಾಮದ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿಯೂ ಅಪ್ಸರಕೊಂಡ ಗ್ರಾಮಸ್ಥರು ಇದೇ ಒಗ್ಗಟ್ಟು ಪ್ರದರ್ಶಿಸುತ್ತಾರೆ. ಯಾವುದೇ ಉತ್ತಮ ಕಾರ್ಯ ಕೈಗೊಂಡರೂ ಎಲ್ಲರೂ ಒಟ್ಟಾಗಿ ಕೈಜೋಡಿಸಿ ಯಶಸ್ವಿಗೊಳಿಸುವುದು ಗ್ರಾಮದ ವಿಶೇಷತೆ.

ಭಿನ್ನಾಭಿಪ್ರಾಯ ಬಂದಿಲ್ಲ: ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸವನ್ನು ನಿರ್ವಹಿಸುತ್ತಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಬಂದಿಲ್ಲ. ಜನರ ನಡುವೆ ಪರಸ್ಪರ ಅಸೂಯೆ, ದ್ವೇಷ ಹೆಚ್ಚಾಗುತ್ತಿರುವ ಕಾಲದಲ್ಲಿ ಒಟ್ಟಾಗಿ ಇದ್ದೇವೆ ಎನ್ನುವುದನ್ನು ಕೃಷಿಯ ಮೂಲಕ ತೋರಿಸಿದ್ದೇವೆ ಎಂದು ಕೆಳಗಿನೂರು, ಅಪ್ಸರಕೊಂಡದ ಗ್ರಾಮ ಸುಧಾರಣಾ ಸಮಿತಿ ಪದಾಧಿಕಾರಿ ತಿಮ್ಮಪ್ಪ ಗೌಡ ತಿಳಿಸಿದರು.