ಭಕ್ತರ ಒಳಿತಿಗಾಗಿ ಚಿದಾನಂದ ತಾತನವರ ಶ್ರಮ

| Published : Oct 14 2024, 01:21 AM IST / Updated: Oct 14 2024, 01:22 AM IST

ಸಾರಾಂಶ

ನಂದಿಧ್ವಜ, ಸಮಾಳ, ಡೊಳ್ಳು, ಮೇಳ, ವೀರಗಾಸೆ, ಸುಮಂಗಳೆಯರು ಕಳಸದೊಂದಿಗೆ ಭಾಗವಹಿಸಿದ್ದು ಮೆರವಣಿಗೆಯ ಮೆರಗು ಹೆಚ್ಚಿಸಿತ್ತು.

ಕುರುಗೋಡು: ಸಮೀಪದ ಸಿದ್ದರಾಂಪುರ ಗ್ರಾಮದ ಕದಳೀವನ ಸಿದ್ದೇಶ್ವರ ತಾತನವರ ಮಠದಲ್ಲಿ ದುರ್ಗಾಷ್ಟಮಿ ಅಂಗವಾಗಿ ಶುಕ್ರವಾರ ರಾತ್ರಿ ದೇವಿಯ ಉತ್ಸವ ಮೂರ್ತಿ ಮೆರವಣಿಗೆ ಮಾಡಲಾಯಿತು. ಆಂಜನೇಯಸ್ವಾಮಿ ದೇವಸ್ಥಾನದಿಂದ ಪ್ರಾರಂಭಗೊಂಡ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀಮಠದ ಆವರಣದಲ್ಲಿ ಸಮಾವೇಶಗೊಂಡಿತು.ನಂದಿಧ್ವಜ, ಸಮಾಳ, ಡೊಳ್ಳು, ಮೇಳ, ವೀರಗಾಸೆ, ಸುಮಂಗಳೆಯರು ಕಳಸದೊಂದಿಗೆ ಭಾಗವಹಿಸಿದ್ದು ಮೆರವಣಿಗೆಯ ಮೆರಗು ಹೆಚ್ಚಿಸಿತ್ತು. ಸಾವಿರಾರು ಭಕ್ತರು ಭಾಗವಹಿಸಿ ಶ್ರೀದೇವಿ ಉತ್ಸವ ಮೂರ್ತಿ ಮೆರವಣಿಗೆಗೆ ಸಾಕ್ಷಿಯಾದರು.

ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದ ಕೊಟ್ಟೂರು ಸ್ವಾಮಿ ಮಠದ ನಿರಂಜನ ಪ್ರಭುದೇವರು, ಮೊಬೈಲ್ ಗೀಳಿನಿಂದ ಪವಿತ್ರ ಹಬ್ಬಗಳು ಮೌಲ್ಯಗಳನ್ನು ಕಳೆದುಕೊಳ್ಳುತ್ತಿವೆ. ಅವು ಕೇವಲ ಸ್ಟೇಟಸ್ ಮತ್ತು ವ್ಯಾಟ್ಸ್‌ ಆ್ಯಪ್‌ಗೆ ಸೀಮಿತವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಪೌರಾಣಿಕ ಹಿನ್ನೆಲೆಯ ಕಥೆಯನ್ನು ಆಧರಿಸಿ ರಚಿಸಿದ ದೇವಿಪುರಾಣದಲ್ಲಿ ಜನರಲ್ಲಿ ಧಾರ್ಮಿಕ ಭಾವನೆ ಮೂಡಿಸುವ ಅನೇಕ ಸನ್ನಿವೇಶಗಳು ಅಡಕವಾಗಿವೆ. ಪುರಾಣ ಶ್ರವಣ ಮಾಡಿ ಜೀವನ ಪಾವನ ಮಾಡಿಕೊಳ್ಳಿ ಎಂದರು.

ಶ್ರೀಮಠದಲ್ಲಿ ಕಾಲಕಾಲಕ್ಕೆ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನಾಡಿದ ಭಕ್ತರ ಒಳಿತಿಗಾಗಿ ಚಿದಾನಂದ ತಾತನವರು ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ಶ್ರೀಧರಗಡ್ಡೆ ಕೊಟ್ಟೂರು ಸ್ವಾಮಿ ಶಾಖಾ ವಿರಕ್ತ ಮಠದ ಮರಿಕೊಟ್ಟೂರು ದೇಶಿಕರು ಮಾತನಾಡಿ, ದೇವಿ ಪುರಾಣದಲ್ಲಿ ಮನುಷ್ಯರಲ್ಲಿನ ಕಾಮ, ಕ್ರೋಧ, ಮೋಹ, ಮಧ, ಮತ್ಸರ, ಸ್ವಾರ್ಥ, ಅನ್ಯಾಯ, ಅಮಾನವೀಯತೆ ಮತ್ತು ಅಹಂಕಾರ ಗುಣಗಳನ್ನು ಹೋಗಲಾಡಿಸಿ ನಿಜಮಾನವನಾಗಿ ಆದರ್ಶ ಜೀವನ ಸಾಗಿಸುವ ದಾರಿ ತೋರಿಸುತ್ತದೆ ಎಂದರು.

ದುರ್ಗಾಷ್ಟಮಿ ಅಂಗವಾಗಿ ಶ್ರೀಮಠದಲ್ಲಿ ಚಂಡಿಕಾ ಹೋಮ, ಹವನ, ವಿಶೇಷ ಪೂಜಾ ವಿಧಿ-ವಿಧಾನಗಳು ಜರುಗಿದವು. ಜಿಲ್ಲೆಯ ಎಲ್ಲ ಭಾಗಗಳಿಂದ ಶ್ರೀಮಠದ ಭಕ್ತರು ಹೋಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುನೀತರಾದರು.

ಕದಳೀವನ ಸಿದ್ದೇಶ್ವರ ತಾತನವರ ಮಠದ ಕಾಯಕಯೋಗಿ ಚಿದಾನಂದಯ್ಯ ತಾತನವರು ಸಾನಿಧ್ಯ ವಹಿಸಿದ್ದರು. ಶ್ರೀಶೈಲ ಭಿಕ್ಷಾವರ್ತಿ ಮಠದ ವೀರಭದ್ರ ಶಿವಾಚಾರ್ಯ ಶ್ರೀ ಉಪಸ್ಥಿತರಿದ್ದರು. ರೇವಣಸಿದ್ದಯ್ಯ ತಾತನವರು ಪುರಾಣ ಪ್ರವಚನ ನೀಡಿದರು. ಶರಣಪ್ಪ ಎಸ್. ಬಳ್ಳೊಳ್ಳಿ ಪುರಾಣ ವಾಚಿಸಿದರು. ಕೆ. ಭೀಮೇಶ್ ತಬಲಾ ಸಾಥ್, ಎಸ್.ವಿ. ಪ್ರಭುಲಿಂಗನಗೌಡ ಮತ್ತು ಟಿ.ಎಚ್. ಶೆಕ್ಷಾವಲಿ ಸಂಗೀತ ಸೇವೆ ಸಲ್ಲಿಸಿದರು.

ಕುರುಗೋಡು ಸಮೀಪದ ಸಿದ್ದರಾಂಪುರ ಗ್ರಾಮದ ಕದಳೀವನ ಸಿದ್ದಯ್ಯ ತಾತನವರ ಮಠದಲ್ಲಿ ದುರ್ಗಷ್ಟಮಿ ಅಂಗವಾಗಿ ಶುಕ್ರವಾರ ರಾತ್ರಿ ಚಂಡಿಕಾ ಹೋಮ ಜರುಗಿತು.