ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕುಡಿದು ಬಂದು ಮದುವೆ ಮಾಡು ಎಂದು ಹೆತ್ತವರಿಗೆ ಮತ್ತು ಸೋದರಿಗೆ ಪೀಡಿಸುತ್ತಿದ್ದ ಮದ್ಯ ವ್ಯಸನಿ ಪುತ್ರನನ್ನು ಸ್ವಂತ ಅಪ್ಪನೇ ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆಯೊಂದು ಚಾಮರಾಜನಗರ ತಾಲೂಕಿನ ಯರಗನಹಳ್ಳಿಯಲ್ಲಿ ನಡೆದಿದೆ.

ಸಿದ್ದರಾಜು (32) ಕೊಲೆಯಾದ ಪುತ್ರ. ಸಿದ್ದೇಗೌಡ ಆರೋಪಿಯಾಗಿದ್ದಾರೆ.

ಸಿದ್ದರಾಜು ಗಾರೆ ಕೆಲಸ ಮಾಡಿಕೊಂಡಿದ್ದು, ಅನುದಿನವೂ ಬಂದ ದುಡ್ಡಿನಲ್ಲಿ ಕುಡಿದು ಮನೆಗೆ ಬಂದು ರಂಪಾಟ ಮಾಡುತ್ತಿದ್ದ. ತಂದೆ ತಾಯಿ ಬಳಿ ಮದುವೆ ಮಾಡಿಸೆಂದು ಹಿಂಸೆ ಕೊಡುತ್ತಿದ್ದ. ಜೊತೆಗೆ ಮದುವೆಯಾಗಿರುವ ತಂಗಿಗೂ ಥಳಿಸುತ್ತಿದ್ದ.

ಕುಡಿತ ಬಿಡು ಮದುವೆಗೆ ಹುಡುಗಿ ಹುಡುಕುತ್ತೇವೆ ಎಂದು ಪೋಷಕರು ಹೇಳಿದರೂ ಕೇಳದೆ ದಿನವೂ ತಗಾದೆ ಎತ್ತುತ್ತಿದ್ದ. ಇದರಿಂದ ಮನನೊಂದ ತಂದೆ ಸಿದ್ದೇಗೌಡ, ಇಟ್ಟಿಗೆಯಿಂದ ಪುತ್ರನಿಗೆ ಪುತ್ರನಿಗೆ ತೀವ್ರವಾಗಿ ಥಳಿಸಿದ್ದಾರೆ. ಪರಿಣಾಮ ಸಿದ್ದರಾಜುಗೆ ರಕ್ತಸ್ರಾವವಾಗಿದೆ. ಇದರಿಂದ ಸಿದ್ದರಾಜು ಮೃತಪಟ್ಟಿದ್ದಾನೆ.


ಘಟನೆ ಸಂಬಂಧ ತೆರಕಣಾಂಬಿ ಪೊಲೀಸರು ತಂದೆ ಸಿದ್ದೇಗೌಡರನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.