- ಮಿಯಾವಾಕಿ ಪದ್ಧತಿ ಅಳವಡಿಸಿಕೊಂಡು ಪರಿಸರ ದಿನಾಚರಣೆ

ಕನ್ನಡಪ್ರಭ ವಾರ್ತೆ ತರೀಕೆರೆ

ವಿಶ್ವದಾದ್ಯಂತ ಗಮನ ಸೆಳೆದಿರುವ ಜಪಾನ್ ದೇಶದ ಸಸ್ಯತಜ್ಞ ಮಿಯಾವಾಕಿ ಕಿರು ಅರಣ್ಯ ಪದ್ಧತಿ ಅಳವಡಿಸಿ ಕೊಳ್ಳುವ ಮೂಲಕ ಪಟ್ಟಣದ ಪುರಸಭೆ ವಿಶ್ವ ಪರಿಸರ ದಿನಾಚರಣೆಯನ್ನು ಆರ್ಥ ಪೂರ್ಣವಾಗಿಸಿ ಸಾರ್ವಜನಿಕರ ಗಮನ ಸೆಳೆದಿದೆ.

ಬೆಳೆಯುತ್ತಿರುವ ಪಟ್ಟಣಗಳಲ್ಲಿ ಸ್ಥಳದ ಅಭಾವ ಕಾಡುತ್ತಿದ್ದು ಗಿಡ ಮರಗಳನ್ನು ಬೆಳೆಸುವುದು ಸವಾಲಾ ಗಿರುವ ದಿನಗಳಲ್ಲಿ ಮಿಯಾವಾಕಿ ಪದ್ಧತಿಯಿಂದ ಕಡಿಮೆ ಸ್ಥಳದಲ್ಲಿ ಅನೇಕ ಗಿಡಗಳನ್ನು ನೆಟ್ಟು ಕಿರು ಅರಣ್ಯ ಬೆಳೆಸುವ ಕಾರ್ಯಕ್ರಮಕ್ಕೆ ಮುಂದಾದ ಪಟ್ಟಣದ ಪುರಸಭೆ ಸಾಮಾಜಿಕ ವಲಯ ಸಂರಕ್ಷಣಾಧಿ ಕಾರಿಗಳ ಕಚೇರಿ ಹಾಗೂ ಸರ್ಕಾರಿ ಮೌಲಾನ ಆಜಾದ್ ಪ್ರೌಢಶಾಲೆ ವಿದ್ಯಾರ್ಥಿಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮಕ್ಕೆ ಕುವೆಂಪು ನಗರದ ಉದ್ಯಾನವನ ಸಾಕ್ಷಿಯಾಯಿತು.

ಪುರಸಭೆ ಅಧ್ಯಕ್ಷ ವಸಂತ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಪರಿಸರ ಸಂರಕ್ಷಣೆ ನಾಗರಿಕರ ಹೊಣೆಯಾಗಿದೆ. ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಪುರಸಭೆ ಹೆಚ್ಚು ಒತ್ತು ನೀಡಿ ಪರಿಸರ ರಕ್ಷಣೆಗೆ ಶ್ರಮಿಸುತ್ತಿದೆ ಎಂದರು.


ಪುರಸಭೆ ಸದಸ್ಯ ಟಿ.ದಾದಾಪೀರ್ ಮಾತನಾಡಿ ಪರಿಸರ ಸಂರಕ್ಷಣೆ ಬಗ್ಗೆ ವಿದ್ಯಾರ್ಥಿಗಳಿಗೆ ಕಾಳಜಿ ಮೂಡಿಸಬೇಕು. ಶಾಲಾ ಹಂತದಲ್ಲಿಯೇ ಪರಿಸರ ಪ್ರಜ್ಞೆ ಜಾಗೃತವಾಗಬೇಕು. ಮಕ್ಕಳು ಮಣ್ಣಿನ ಜೊತೆಗೆ ಸಂಭಂದ ಇಟ್ಟು ಕೊಳ್ಳುವಂತೆ ಪೋಷಕರು ಹಾಗೂ ಶಿಕ್ಷಕರು ಅರಿವು ಮೂಡಿಸಬೇಕು ಎಂದು ಹೇಳಿದರು.

ಮುಖ್ಯಾಧಿಕಾರಿ ತಾಹೇರ ತಸ್ನಿಂ ಮಾತನಾಡಿ ಘನ ತ್ಯಾಜ್ಯ ನಿರ್ವಹಣೆ ಕಾಯ್ದೆ 2016ರ ಅನುಷ್ಠಾನಗೊಳಿ ಸುವ ಮೂಲಕ ಪಟ್ಟಣದ ಪುರಸಭೆ ಕಸ ವಿಂಗಡಣೆ ಮತ್ತು ವಿಲೇವಾರಿಯನ್ನು ವೈಜ್ಞಾನಿಕವಾಗಿ ಮಾಡುತ್ತಿದೆ. ಸಾರ್ವಜನಿಕರು ಊರಿನ ಸ್ವಚ್ಛತೆ ಹಾಗೂ ಉತ್ತಮ ಪರಿಸರಕ್ಕೆ ಪುರಸಭೆ ಯೊಂದಿಗೆ ಕೈ ಜೋಡಿಸಬೇಕು ಎಂದು ಕರೆ ನೀಡಿದ ಅವರು 2026 ಘನ ತ್ಯಾಜ್ಯ ನಿರ್ವಹಣ ನಿಮಮಗಳ ಅನುಷ್ಠಾನಕ್ಕೆ ಸಹಕರಿಸಬೇಕು. ಶಾಲಾ ಮಕ್ಕಳಿಗೆ ಹಸಿ ಕಸ ಮತ್ತು ಒಣ ಕಸ ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ ನೀಡಿದರು.

ಸಾಮಾಜಿಕ ವಲಯಾರಣ್ಯ ಸಂರಕ್ಷಣಾಧಿಕಾರಿ ರುಖೈಯ ಮಾತನಾಡಿ ಪರಿಸರದ ರಕ್ಷಣೆಗೆ ಅರಣ್ಯ ಇಲಾಖೆ ಜೊತೆ ನಾಗರಿಕರು ಸಹಕರಿಸಬೇಕು. ಅರಣ್ಯ ಇಲಾಖೆ ಗಿಡಗಳನ್ನು ನೆಡುವ ಹಾಗೂ ಗಿಡ ಗಳನ್ನು ವಿತರಿಸುವ ಮೂಲಕ ಅರಣ್ಯ ಬೆಳೆಸುವ ಕಾರ್ಯಕ್ರಮ ನಿರಂತರವಾಗಿ ನಡೆಸುತ್ತಾ ಬಂದಿದೆ. ಗಿಡಗಳನ್ನು ಉಳಿಸಿ ಬೆಳೆಸುವ ಕೆಲಸಕ್ಕೆ ಸಾರ್ವಜನಿಕರು ಕೈ ಜೋಡಿಸಬೇಕು ಎಂದು ಹೇಳಿದರು

ಪುರಸಭೆ ಮಾಜಿ ಉಪಾಧ್ಯಕ್ಷೆ ಗಿರಿಜಾ ಪ್ರಕಾಶ್ ವರ್ಮಾ ಮಾತನಾಡಿದರು. ಪುರಸಭೆ ನಾಮಿನಿ ಸದಸ್ಯ ಆದಿಲ್ ಪಾಷ , ಎಸಿಎಫ್ ಷರೀಫಾ, ಪುರಸಭೆ ವ್ಯವಸ್ಥಾಪಕ ಪ್ರಸನ್ನ , ಮೌಲಾನ ಆಜಾದ್ ಪ್ರೌಢಶಾಲೆ ಮುಖ್ಯ ಶಿಕ್ಷಕ ಹರೀಶ್, ಅರಣ್ಯ ಇಲಾಖೆ ಸಿಬ್ಬಂದಿ, ಪುರಸಭೆ ಸಿಬ್ಬಂದಿ, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.11ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ಪುರಸಭೆಯಿಂದ ನಡೆದ ಪರಿಸರ ದಿನಾಚರಣೆಯಲ್ಲಿ ಪುರಸಭೆ ಅಧ್ಯಕ್ಷ ವಸಂತಕುಮಾರ್, ಪುರಸಭೆ ಮಾಜಿ ಉಪಾಧ್ಯಕ್ಷೆ ಗಿರಿಜಾ ಪ್ರಕಾಶ್ ವರ್ಮ, ಪುರಸಭೆ ನಾಮಿನಿ ಸದಸ್ಯ ಅದಿಲ್ ಪಾಷ, ಮುಖ್ಯಾಧಿಕಾರಿ ತಾಹೇರ ತಸ್ನಿಂ ಮತ್ತಿತರರು ಭಾಗವಹಿಸಿದ್ದರು.