ಕನ್ನಡಪ್ರಭ ವಾರ್ತೆ ಬೆಂಗಳೂರು

ಧರ್ಮಸ್ಥಳ ವಿಚಾರದಲ್ಲಿ ನೂರಾರು ಕೋಟಿ ರು. ತೊಡಗಿಸಿದ ಹಿನ್ನೆಲೆಯಲ್ಲಿ ವಿದೇಶಿ ಶಕ್ತಿಗಳ ಕೈವಾಡದ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.

ಶುಕ್ರವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಕಳಂಕ ತರುವ ಬಹಳ ದೊಡ್ಡ ಷಡ್ಯಂತ್ರ ನಡೆದಿತ್ತು. ಹಿಂದೂಗಳ ಧಾರ್ಮಿಕ ಶ್ರದ್ಧೆಗೆ ಕೊಡಲಿ ಪೆಟ್ಟು ಕೊಡುವ ಷಡ್ಯಂತ್ರ ನಡೆದಿತ್ತು. ಆದರೆ, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದನ್ನೂ ಪರಾಮರ್ಶೆ ಮಾಡದೆ ಯಾರೋ ಬೀದಿಯಲ್ಲಿ ಹೋಗುವವರು ಹೇಳಿದರೆಂದು ಎಸ್ಐಟಿ ತನಿಖೆಗೆ ಆದೇಶಿಸಿದ್ದು ಸಮರ್ಪಕ ನಿರ್ಧಾರ ಆಗಿರಲಿಲ್ಲ ಎಂದು ಹೇಳಿದರು.

ಧರ್ಮಸ್ಥಳದ ಪ್ರಕರಣದಲ್ಲಿ ಸಾಕಷ್ಟು ವಿಷಯಗಳು ಈಗ ಬೆಳಕಿಗೆ ಬಂದಿವೆ. ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ ಏಕಾಏಕಿ ಎಸ್ಐಟಿ ತನಿಖೆಗೆ ಆದೇಶಿಸಿದಾಗ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಯಾವುದೇ ತನಿಖೆಯ ಅವಶ್ಯಕತೆ ಇಲ್ಲ ಎಂದಿದ್ದ ಸಿದ್ದರಾಮಯ್ಯ ಅವರು ಮರುದಿನವೇ ಪಟ್ಟಭದ್ರ ಹಿತಾಸಕ್ತಿಗಳು ಅವರನ್ನು ಸ್ವಗೃಹದಲ್ಲಿ ಭೇಟಿ ಮಾಡಿದ ನಂತರ ಎಸ್ಐಟಿ ತನಿಖೆಗೆ ಆದೇಶಿಸಿದ್ದರು ಎಂದರು.

ಕಾಂಗ್ರೆಸ್ ಸರ್ಕಾರವು ಇಂಥ ಷಡ್ಯಂತ್ರಗಳಿಗೆ ಶಕ್ತಿ ತುಂಬುವ ಕೆಲಸ ಮಾಡಿರುವುದು ನಮಗೆ ನೋವು ತಂದಿದೆ. ಯಾರ್‍ಯಾರು ಇದರ ಹಿಂದಿದ್ದರು? ಯಾರು ಬಂಡವಾಳ ಹಾಕಿದ್ದರು? ಅಂದಿನ ಮುಖ್ಯಮಂತ್ರಿಗಳು ಯಾಕೆ ಕಣ್ಣು ಮುಚ್ಚಿ ಎಸ್ಐಟಿಗೆ ಕೊಟ್ಟರು ಎಂಬುದರ ಸತ್ಯಾಸತ್ಯತೆ ಹೊರಕ್ಕೆ ಬರಬೇಕು ಎಂಬುದು ನಾಡಿನ ಜನರ ಮತ್ತು ಹಿಂದೂಗಳ ಅಪೇಕ್ಷೆ ಎಂದು ವಿಜಯೇಂದ್ರ ತಿಳಿಸಿದರು.