ಸಾರಾಂಶ
ಕೃಷ್ಣ ಎನ್. ಲಮಾಣಿ
ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ರಣ ಬಿಸಿಲಿಗೆ ಜನರು ಒಂದೆಡೆ ತತ್ತರಿಸುತ್ತಿದ್ದರೆ, ಇನ್ನೊಂದೆಡೆ ಕುಡಿಯುವ ನೀರಿಗೆ ಪರದಾಟ ಮಾತ್ರ ಇನ್ನು ತಪ್ಪಿಲ್ಲ. ತುಂಗಭದ್ರಾ ಜಲಾಶಯದಲ್ಲೂ ನೀರು ಪಾತಾಳಕ್ಕೆ ಸೇರಿರುವುದರಿಂದ ನೀರಿನ ಅಭಾವ ಮತ್ತಷ್ಟು ತಲೆದೋರಿದೆ.ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ವಿಜಯನಗರ ಜಿಲ್ಲಾಡಳಿತ ಕ್ರಮ ಕೈಗೊಂಡು ಭದ್ರಾದಿಂದಲೂ ನೀರು ಬಿಡಿಸಿಕೊಂಡಿದೆ. ಕೂಡ್ಲಿಗಿ, ಕೊಟ್ಟೂರು, ಹರಪನಹಳ್ಳಿ, ಹೂವಿನಹಡಗಲಿ ಭಾಗಕ್ಕೆ ಈ ನೀರು ಆಸರೆಯಾಗಿದೆ. ಆದರೆ, ಅಂತರ್ಜಲ ಕುಸಿದಿರುವುದರಿಂದ ನೀರಿನ ಮೂಲಗಳಾಗಿದ್ದ ಬೋರ್‌ವೆಲ್‌ಗಳಲ್ಲೂ ನೀರು ಬಾರದಾಗಿದೆ. ಇನ್ನು ಕೆರೆಗಳು ಒಣಗಲಾರಂಭಿಸಿವೆ. ಹಾಗಾಗಿ ಕುಡಿಯುವ ನೀರಿನ ಸಮಸ್ಯೆಯಿಂದ ಜನ, ಜಾನುವಾರುಗಳು, ಪ್ರಾಣಿ, ಪಕ್ಷಿ ಮತ್ತು ಜೀವ ವೈವಿಧ್ಯ ಪರಿತಪಿಸುವಂತಾಗಿದೆ.ಕೈ ಕೊಡುತ್ತಿರುವ ಬೋರ್‌ವೆಲ್:
ವಿಜಯನಗರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಪರಿಹಾರಕ್ಕೆ ಬಹುತೇಕ ಹಳ್ಳಿ, ತಾಂಡಾ, ಕ್ಯಾಂಪ್‌ಗಳಲ್ಲಿ ಬೋರ್‌ವೆಲ್‌ಗಳನ್ನೇ ಆಶ್ರಯಿಸಲಾಗಿದೆ. ಇನ್ನು ನಗರ, ಪಟ್ಟಣಗಳಲ್ಲೂ ನೀರಿನ ಸಮಸ್ಯೆ ಉದ್ಭವಿಸಿದೆ. ಕುಡಿಯುವ ನೀರು ಕೆಲವೆಡೆ ಮೂರ್ನಾಲ್ಕು ದಿನಕ್ಕೊಮ್ಮೆ ಬಿಡಲಾಗುತ್ತಿರುವುದರಿಂದ ಜನರು ನೀರು ಸಂಗ್ರಹಿಸಿಡಲು ಪರದಾಡುತ್ತಿದ್ದಾರೆ. ಇನ್ನು ನಗರ, ಪಟ್ಟಣಗಳಲ್ಲಿರುವ ಖಾಸಗಿ ನೀರಿನ ಘಟಕಗಳ ಬೋರ್‌ವೆಲ್‌ಗಳಲ್ಲೂ ನೀರು ಬರುತ್ತಿಲ್ಲ. 20 ಲೀಟರ್ ನೀರಿಗೆ ದುಬಾರಿ ಹಣ ನೀಡಿ ನೀರು ತೆಗೆದುಕೊಂಡು ಬರುವ ಸ್ಥಿತಿ ನಿರ್ಮಾಣವಾಗಿದೆ.ವಿಜಯನಗರ ಜಿಲ್ಲೆಯಲ್ಲಿ 242 ಖಾಸಗಿ ಬೋರ್‌ವೆಲ್‌ಗಳನ್ನು ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ. ಈ ಬೋರ್‌ವೆಲ್‌ಗಳಲ್ಲೂ ಈಗ ನೀರು ಸಿಗದೇ ಸಮಸ್ಯೆಯಾಗುತ್ತಿದೆ. ಅಂತರ್ಜಲ ಬತ್ತುತ್ತಿರುವುದರಿಂದ ಈ ಬೋರ್ ವೆಲ್‌ಗಳಲ್ಲೂ ಸರಿಯಾಗಿ ನೀರು ಸಿಗುತ್ತಿಲ್ಲ. ಇದರಿಂದ ಜನರು ನೀರನ್ನು ಪೋಲಾಗದಂತೆ ಸದ್ಬಳಕೆ ಮಾಡಬೇಕು ಎಂದು ಜಿಪಂ ಸಿಇಒ ಸದಾಶಿವ ಪ್ರಭು ಬಿ. ತಿಳಿಸಿದ್ದಾರೆ.
ವಾಂತಿ-ಭೇದಿ ಪ್ರಕರಣ:ಕುಡಿಯುವ ನೀರಿನ ಸಮಸ್ಯೆಯಿಂದಾಗಿ ಅಲ್ಲಲ್ಲಿ ವಾಂತಿ-ಭೇದಿ ಪ್ರಕರಣ ಕಂಡು ಬರುತ್ತಿವೆ. ಹಾಗಾಗಿ, ಶುದ್ಧ ಕುಡಿಯುವ ನೀರಿನ ಘಟಕಗಳಿಂದಲೇ ಕುಡಿಯುವ ನೀರು ಬಳಕೆ ಮಾಡಬೇಕು. ಜಲಾಶಯ ಹಾಗೂ ನದಿಗಳಲ್ಲಿ ನೀರು ಕೊನೆ ಹಂತದಲ್ಲಿರುವುದರಿಂದ ಕಲುಷಿತವಾಗುವ ಸಾಧ್ಯತೆ ಇದೆ. ಆರೋಗ್ಯ ಸಮಸ್ಯೆ ಉಂಟಾಗುವುದರಿಂದ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ನೀರು ಪಡೆಯಬೇಕು. ಜೊತೆಗೆ ನೀರು ಕಾಯಿಸಿ, ಆರಿಸಿ ಕುಡಿದರೆ ಇನ್ನು ಉತ್ತಮ ಎಂದು ಜಿಲ್ಲಾಡಳಿತ ಸಲಹೆ ನೀಡಿದೆ.
ತುಂಗಭದ್ರಾ ಜಲಾಶಯದಲ್ಲಿ ಈಗ ಬರೀ 3.470 ಟಿಎಂಸಿ ಮಾತ್ರ ನೀರು ಸಂಗ್ರಹವಾಗಿದೆ. ಜಲಾಶಯದ ನೀರು ಪಾತಾಳಕ್ಕೆ ಕುಸಿದಿದೆ.ಎಲ್ಲೆಲ್ಲಿ ನೀರಿನ ಸಮಸ್ಯೆ?:
ಹರಪನಹಳ್ಳಿಯಲ್ಲಿ 85, ಕೂಡ್ಲಿಗಿಯ 33 ಹಳ್ಳಿಗಳಲ್ಲಿ ಅತಿ ಹೆಚ್ಚಿನ ಕುಡಿಯುವ ನೀರಿನ ಸಮಸ್ಯೆ ಇದೆ.ಹಗರಿಬೊಮ್ಮನಹಳ್ಳಿ 32 ಹಳ್ಳಿ, ಹೂವಿನಹಡಗಲಿ 19, ಹೊಸಪೇಟೆ 13, ಕೊಟ್ಟೂರಿನ 11 ಹಳ್ಳಿಗಳಲ್ಲಿ ಸಮಸ್ಯೆಯಾಗುತ್ತಿದೆ. ಇನ್ನು ನಗರ, ಪಟ್ಟಣಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.ಕುಡಿಯುವ ನೀರಿಗೆ ಸಹಾಯವಾಣಿ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವುದರಿಂದ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಸಹಾಯವಾಣಿ ತೆರೆಯಲಾಗಿದೆ. ಜನರು ಸಹಾಯವಾಣಿ ಮೊಬೈಲ್ ನಂಬರ್‌ಗೆ 9480837823 ಕರೆ ಮಾಡಿ ತಿಳಿಸಿದರೆ, ಕೂಡಲೇ ಸ್ಪಂದಿಸಲಾಗುವುದು ಎಂದು ಜಿಪಂ ಸಿಇಒ ಸದಾಶಿವಪ್ರಭು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕುಡಿವ ನೀರಿನ ಸಮಸ್ಯೆಗೆ ಸಹಾಯವಾಣಿ ತೆರೆಯಲಾಗಿದೆ. ಹಳ್ಳಿ, ತಾಂಡಾಗಳನ್ನು ಗುರುತಿಸಿ 242 ಖಾಸಗಿ ಬೋರ್‌ವೆಲ್ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ. ಈ ಬಾರಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು, ಜಿಲ್ಲಾಡಳಿತದಿಂದ ನೀರಿನ ಅಭಾವ ಇರುವ ಕಡೆ ನೀರು ಪೂರೈಕೆ ಮಾಡಲಾಗುತ್ತಿದೆ ಎನ್ನುತ್ತಾರೆ ಜಿಪಂ ಸಿಇಒ ಸದಾಶಿವಪ್ರಭು.