ಶಿವಕುಮಾರ ಕುಷ್ಟಗಿ
ಗದಗ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆ ತೀವ್ರ ಮಳೆ ಕೊರತೆಯ ಬಿಕ್ಕಟ್ಟಿಗೆ ಸಿಲುಕಿದ್ದು, ರೈತರಲ್ಲಿ ಆತಂಕ ಮನೆಮಾಡಿದೆ. ಜೂ. 1ರಿಂದ ಜು. 16ರ ವರೆಗೆ ಜಿಲ್ಲೆಯ ವಾಡಿಕೆಯ ಮಳೆ ಪ್ರಮಾಣ 121.4 ಮಿಮೀ. ಈ ಬಾರಿ ಕೇವಲ 82.50 ಮಿಮೀ ಮಳೆಯಷ್ಟೇ ದಾಖಲಾಗಿದೆ. ಪರಿಣಾಮ ಜಿಲ್ಲೆಯಲ್ಲಿ ಶೇ. 32.04ರಷ್ಟು ಮಳೆ ಕೊರತೆ ಉಂಟಾಗಿದೆ.ಮುಂಗಾರು ಪೂರ್ವದಲ್ಲಿ ಸುರಿದ ಉತ್ತಮ ಮಳೆ ನೋಡಿ, ಉತ್ತಮ ಮಳೆಯ ನಿರೀಕ್ಷೆಯಲ್ಲಿ ಕೃಷಿ ಇಲಾಖೆ ಪ್ರಸಕ್ತ ಸಾಲಿನಲ್ಲಿ 3,13,719 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತು. ಇದರಲ್ಲಿ ಈಗಾಗಲೇ 2,57,401 ಹೆಕ್ಟೇರ್ ಪ್ರದೇಶದಲ್ಲಿ(ಶೇ. 82ರಷ್ಟು) ಬಿತ್ತನೆ ಪೂರ್ಣಗೊಂಡಿದೆ. ಆದರೆ ಬಿತ್ತನೆಯಾದ ಬಳಿಕ ನಿರೀಕ್ಷಿತ ಮಳೆಯಾಗದ ಕಾರಣ ಶೇಂಗಾ, ಮೆಕ್ಕೆಜೋಳ, ಹೆಸರು, ಈರುಳ್ಳಿ, ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳು ಒಣಗುವ ಹಂತ ತಲುಪಿವೆ. ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿಯೂ ತೀವ್ರ ಮಳೆ ಕೊರತೆ ಎದುರಾಗಿದ್ದು, ಮಳೆಗಾಲದಲ್ಲಿಯೇ ಹೊಲಗಳಲ್ಲಿ ಬಿರುಕು ಕಾಣಿಸಿಕೊಂಡಿವೆ.
ಜಿಲ್ಲೆಯಲ್ಲಿ ಒಟ್ಟು 1.78 ಲಕ್ಷಕ್ಕೂ ಹೆಚ್ಚು ರೈತ ಕುಟುಂಬಗಳು ಕೃಷಿಯನ್ನೇ ಜೀವನಾಧಾರವಾಗಿಸಿಕೊಂಡಿವೆ. ಈ ಪೈಕಿ ಬಹುತೇಕ ರೈತರು ಮಳೆ ಆಶ್ರಿತ ಕೃಷಿಯನ್ನೇ ಅವಲಂಬಿಸಿರುವುದರಿಂದ ಮುಂಗಾರು ವೈಫಲ್ಯ ನೇರವಾಗಿ ಅವರ ಆರ್ಥಿಕ ಸ್ಥಿತಿಗೆ ಹೊಡೆತ ನೀಡುವ ಸಾಧ್ಯತೆ ಇದೆ. ಈಗಾಗಲೇ ಬಿತ್ತನೆ, ಬೀಜ, ಗೊಬ್ಬರ ಹಾಗೂ ಕೃಷಿ ಕೂಲಿ ವೆಚ್ಚಕ್ಕಾಗಿ ಲಕ್ಷಾಂತರ ರುಪಾಯಿ ಹೂಡಿಕೆ ಮಾಡಿರುವ ರೈತರು ಮಳೆಯ ನಿರೀಕ್ಷೆಯಲ್ಲಿ ದಿನ ಕಳೆಯುತ್ತಿದ್ದಾರೆ. ಮಳೆ ಕೈಕೊಟ್ಟರೆ ಬೆಳೆ ಮರು ಬಿತ್ತನೆಗೂ ಅವಕಾಶ ಕಡಿಮೆಯಾಗುವ ಸಾಧ್ಯತೆ ಇರುವುದರಿಂದ ರೈತರು ಸರ್ಕಾರದ ನೆರವಿನತ್ತ ಚಿತ್ತ ಹರಿಸಿದ್ದಾರೆ.ಕೃಷಿ ಇಲಾಖೆ ಸಮೀಕ್ಷೆ: ಕೃಷಿ ಇಲಾಖೆಯ ಅಧಿಕಾರಿಗಳ ತಂಡವು ಕೃಷಿ ಜಂಟಿ ನಿರ್ದೇಶಕರ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಗೆ ಭೇಟಿ ನೀಡಿ ಮಳೆ ಕೊರತೆಯಿಂದ ಉಂಟಾಗಿರುವ ಬೆಳೆಹಾನಿಯ ಕರಡು ಸಮೀಕ್ಷೆ ನಡೆಸುತ್ತಿದೆ. ಸಮೀಕ್ಷೆಯ ಅಂತಿಮ ವರದಿಯನ್ನು ಶೀಘ್ರದಲ್ಲೇ ರಾಜ್ಯ ಸರ್ಕಾರಕ್ಕೆ ಸಲ್ಲಿಸಿ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ವರದಿ ನೀಡಲು ಇಲಾಖೆ ಸಿದ್ಧತೆ ಪೊರ್ಣಗೊಳಿಸಿದೆ. ಪ್ರಕೃತಿ ವಿಕೋಪದಿಂದ ಸಂಭವಿಸಬಹುದಾದ ಬೆಳೆಹಾನಿಗೆ ಆರ್ಥಿಕ ರಕ್ಷಣೆ ಒದಗಿಸಲು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅನುಕೂಲಕರವಾಗಿದೆ. ಜಿಲ್ಲೆಯ ಸಾಲ ಪಡೆದ ಮತ್ತು ಸಾಲ ಪಡೆಯದ ರೈತರು ಈ ಯೋಜನೆಗೆ ಅರ್ಹರಾಗಿರುತ್ತಾರೆ. ರೈತರು ಹತ್ತಿರದ ರಾಷ್ಟ್ರೀಕೃತ ಬ್ಯಾಂಕ್‌ಗಳು, ಗ್ರಾಮೀಣ ಬ್ಯಾಂಕ್‌ಗಳು ಅಥವಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರು ನಿಗದಿತ ಪ್ರೀಮಿಯಂ ಪಾವತಿಸಿ ನೋಂದಾಯಿಸಿಕೊಳ್ಳಬಹುದು.
ತಾಂತ್ರಿಕ ಸಲಹೆ: ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ರೈತ ಸಂಪರ್ಕ ಕೇಂದ್ರಗಳು, ಗ್ರಾಪಂ ಮಟ್ಟದ ಸೇವಾ ಕೇಂದ್ರಗಳು ಹಾಗೂ ಅಧಿಕೃತ ಆನ್‌ಲೈನ್ ವ್ಯವಸ್ಥೆಗಳ ಮೂಲಕ ತಕ್ಷಣವೇ ವಿಮೆ ನೋಂದಣಿ ಪೂರ್ಣಗೊಳಿಸುವಂತೆ ವಿನಂತಿಸಿದ್ದಾರೆ. ಇದರೊಟ್ಟಿಗೆ ಬೆಳೆ ಸ್ಥಿತಿಯ ಬಗ್ಗೆ ಸ್ಥಳೀಯ ಕೃಷಿ ಅಧಿಕಾರಿಗಳು ರೈತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ತಾಂತ್ರಿಕ ಸಲಹೆಗಳನ್ನು ನೀಡುತ್ತಿದ್ದು, ರೈತರು ಅವುಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.
ಬೆಳೆವಿಮೆ ಮಾಡಿಸಿ: ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ. ರೈತರು ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಬೇಕು. ಬೆಳೆಹಾನಿಯಾದರೆ ಸರ್ಕಾರದ ನಿಯಮಾನುಸಾರ ವಿಮೆ ಪರಿಹಾರ ಪಡೆಯಲು ಇದು ಅತ್ಯಗತ್ಯವಾಗುತ್ತದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚೇತನಾ ಪಾಟೀಲ ತಿಳಿಸಿದರು.