ಗೋಕರ್ಣ: ಗುರುವಾರ ಸಂಜೆಯಿಂದ ಶುಕ್ರವಾರ ಮಧ್ಯಾಹ್ನದ ವರೆಗೂ ನಿರಂತರವಾಗಿ ಮಳೆ ಸುರಿದ ಪರಿಣಾಮ ಈ ಭಾಗದ ಹಲವೆಡೆ ಆವಾಂತರ ಸೃಷ್ಟಿಸಿತು.

ಶುಕ್ರವಾರ ಬೆಳಗಿನ ಜಾವದಲ್ಲಿ ಸಾಣಿಕಟ್ಟಾದಿಂದ ತದಡಿ ಸಾಗುವ ಮಾರ್ಗದ ಪ್ರಾರಂಭದಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತವಾದ ಪರಿಣಾಮ ರಸ್ತೆ ಸಂಪೂರ್ಣ ಬಂದಾಗಿತ್ತು. ಇದರಿಂದ ತದಡಿ ಕಡೆಯಿಂದ ಗೋಕರ್ಣಕ್ಕೆ ನಿತ್ಯ ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಸ್ಥಳೀಯರಿಗೆ ತೊಂದರೆಯಾಯಿತು.

ಇದರಂತೆ ಮೂಡಂಗಿ ಜನವಸತಿ ಪ್ರದೇಶದ ಹತ್ತಿರ ಸಹ ಗುಡ್ಡ ಕುಸಿತವಾಗಿದ್ದು, ಅದೃಷ್ಟವಶಾತ್ ಯಾವುದೇ ಹಾನಿಯಾಗಿಲ್ಲ.

ಕೆನರಾ ಬ್ಯಾಂಕ್ ಎದುರಿನಿಂದ ತಾರಮಕ್ಕಿ ಶಾಲೆಗೆ ಹೋಗುವ ಮಾರ್ಗದ ಚಿನ್ನದಕೇರಿ ಹಿಂಭಾಗದ ಜನವಸತಿ ಪ್ರದೇಶಕ್ಕೆ ಎದುರಿನ ಗದ್ದೆ ಹಾಗೂ ಚರಂಡಿ ನೀರು ನುಗ್ಗಿ ಹಲವಾರು ಮನೆ ಜಲಾವೃತಗೊಂಡಿತ್ತು. ಇಲ್ಲಿ ಚರಂಡಿ ಸ್ವಚ್ಛಗೊಳಿಸದಿರುವುದೇ ಅವಾಂತರಕ್ಕೆ ಕಾರಣ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಮಹಾಗಣಪತಿ ಮಂದಿರದ ಪಕ್ಕದಿಂದ ಗಾಯತ್ರಿ ಓಣಿ ಮೂಲಕ ಕುಡ್ಲೆಗೆ ಸಾಗುವ ಮಾರ್ಗದ ಆರಂಭದಲ್ಲಿ ನೀರಿನ ರಭಸಕ್ಕೆ ರಸ್ತೆ ಕೊಚ್ಚಿಹೋಗಿ ಬೃಹತ್ ಹೊಂಡ ಬಿದ್ದಿದೆ. ದೇವಾಲಯದ ಎದುರು ಹಾಗೂ ರಥಬೀದಿಯಲ್ಲಿ ಕಲ್ಲು, ಮಣ್ಣುಗಳ ರಾಶಿ ಬಿದ್ದು, ಜನರ ಸಂಚಾರಕ್ಕೆ ತೊಡಕಾಗಿತ್ತು. ನಾಗಬೀದಿ, ಕೋಟಿತೀರ್ಥ ಕಟ್ಟೆ, ಗಂಜೀಗದ್ದೆ ಸೇರಿದಂತೆ ಪ್ರಮುಖ ಮಾರ್ಗಗಳು ಜಲಾವೃತಗೊಂಡಿತ್ತು.


ಬೇಲೆಹಿತ್ತಲಿನ ಶಾಲೆಯ ಬಳಿ ಮಳೆ ನೀರು ಸಮುದ್ರ ಸೇರುವ ಹಳ್ಳದ ಕಟ್ಟೆ ಒಡೆದ ಪರಿಣಾಮ ನಾಲ್ಕು ಎಕರೆಗೂ ಹೆಚ್ಚಿನ ಭತ್ತಗದ್ದೆ ಜಲಾವೃತಗೊಂಡಿದ್ದು, ಎಂಟಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ.

ಗಂಗಾವಳಿ. ಗಂಗೆಕೊಳ್ಳ, ಹನೇಹಳ್ಳಿ, ಬಂಕಿಕೊಡ್ಲ, ನಾಡುಮಾಸ್ಕೇರಿ, ತದಡಿ, ಹೊಸ್ಕಟ್ಟಾ, ಮಾದನಗೇರಿ ಹಿರೇಗುತ್ತಿ, ಬರ್ಗಿ ಭಾಗದಲ್ಲಿ ಹಲವು ಕಡೆ ರಸ್ತೆ, ಕೃಷಿ ಭೂಮಿಗಳು ಜಲಾವೃತಗೊಂಡಿದ್ದು, ದೊಡ್ಡ ಪ್ರಮಾಣದ ಹಾನಿಯಾಗಿಲ್ಲ.

ತಹಸೀಲ್ದಾರ್‌ ಭೇಟಿ: ಕುಮಟಾ ತಹಸೀಲ್ದಾರ್‌ ಶ್ರೀಕೃಷ್ಣ ಕಾಮಕರ್ ತದಡಿ ಗುಡ್ಡ ಕುಸಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತ್ವರಿತವಾಗಿ ತೆಗೆದುಕೊಳ್ಳಬೇಕಾದ ಕ್ರಮದ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮಳೆಯಿಂದ ಹಾನಿಯಾದ ಸ್ಥಳಗಳಿಗೆ ತೆರಳಿ ವೀಕ್ಷಿಸಿದ್ದಾರೆ. ಈ ವೇಳೆ ಸ್ಥಳೀಯ ಕಂದಾಯ ಇಲಾಖೆ ಅಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು.